ದಾವಣಗೆರೆ (DAVANAGERE) : ಅಕ್ರಮವಾಗಿ ಮಾರಾಟ ಮಾಡಲು ಗಾಂಜಾ ಸಂಗ್ರಹಿಸಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 10 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಓಡಿಸಾ ರಾಜ್ಯದ ಗಂಜಾಮ್ ಜಿಲ್ಲೆಯ ಖಾಲಿಕೋಟೆ ತಾಲೂಕಿನ ಕಂಚನ್ ಗ್ರಾಮದ ಕಾಂಕ್ರಿಟ್ ಕೆಲಸ ಮಾಡುವ ಕೇಸಬಾ ಮೊಹಂತಿ (24), ಸುಮಂತ ಸಾಹು ( 25), ಸೈಯದ್ ಸಾಧಿಕ್ (27) ಬಂಧಿತ ಆರೋಪಿಗಳು.
ಸಾಮಾಜಿಕ ದೊಡ್ಡ ಪಿಡುಗಾದ ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣ ಹಾಗೂ ಮಾದಕ ವ್ಯಸನ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಎಸ್ಪಿ ಉಮಾ ಪ್ರಶಾಂತ್ , ದಾವಣಗೆರೆ ಜಿಲ್ಲೆಯಲ್ಲಿ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಮಾಡುವವರ ಮೇಲೆ ನಿಗಾ ವಹಿಸಿ ಮಾಹಿತಿ ತೆಗೆದು ದಾಳಿ ಮಾಡಿ ಪ್ರಕರಣ ದಾಖಲಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡಗಳನ್ನು ರಚಿಸಿ, ಪ್ರತಿದಿನ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಅಕ್ರಮ ಮಾರಾಟ ಮಾಡುವವರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದರು.
ಅದರಂತೆ ಹರಿಹರ ನಗರದಲ್ಲಿ ಮಾದಕ ವಸ್ತುಗಳ ಸೇವನೆ ಮಾಡುವವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಿದ್ದು, ಈ ಸಂದರ್ಭದಲ್ಲಿ ಮಾದಕ ವ್ಯಸನಿಗಳಿಗೆ ಸಿಗುತ್ತಿದ್ದ ಗಾಂಜಾದ ಮೂಲವನ್ನು ಬೆನ್ನೆತ್ತಿದಾಗ, ಪೊಲೀಸರಿಗೆ ಹರಿಹರ ನಗರದಲ್ಲಿ ಕಾನೂನು ಬಾಹಿರವಾಗಿ ಗಾಂಜಾ ಸಾಗಾಟ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು.
ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಎಂ.ಸಂತೋಷ, ಜಿ.ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿಯೊಂದಿಗೆ ಬೆನ್ನೆತ್ತಿದ್ದ ಪೊಲೀಸರು, ಶುಕ್ರವಾರ ಹರಿಹರ ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಗಾಂಜಾವನ್ನು ಸಂಗ್ರಹಿಸಿದ ಸ್ಥಳದ ಮೇಲೆ ದಾಳಿ ನಡೆಸಿ 10 ಲಕ್ಷ ರೂ. ಮೌಲ್ಯದ 10 ಕೆ.ಜಿ. ಗಾಂಜಾ, ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.
Read also ; DAVANAGERE NEWS : ಬಸವ ಪಂಚಮಿ : ಹಾಲು ಮತ್ತು ಬ್ರೆಡ್ ವಿತರಣೆ
ಗಾಂಜಾ ಮಾರಾಟ ಮಾಡುವ ಆರೋಪಿಗಳ ದಿನಚರಿ:
ಓಡಿಸಾ ಮೂಲದ ಈ ಮೂವರು ಆರೋಪಿಗಳು, ಹರಿಹರದಲ್ಲಿ ಬಂದು ವಾಸಿಸುತ್ತಿದ್ದರು. ಎ1 ಮತ್ತು ಎ2 ಆರೋಪಿಗಳು ಹಾಲಿ ಹರಿಹರ ವ್ಯಾಪ್ತಿಯಲ್ಲಿ ರೈಲ್ವೆ ಹಳಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಕಾಂಕ್ರಿಟ್ ಕೆಲಸ ಮಾಡಲು ಬಂದಿದ್ದು, ಗಾಂಜಾವನ್ನು ಓಡಿಶಾ ರಾಜ್ಯದಿಂದ ತೆಗೆದುಕೊಂಡು ಬಂದು ಹರಿಹರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ತನಿಖೆ ವೇಳೆ ಬಹಿರಂಗಗೊಂಡಿದೆ.
ಮೇಲ್ಕಂಡ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಹಾಗೂ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿಗಳಾದ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ್, ಹರಿಹರ ನಗರ ಠಾಣೆಯ ಪೊಲೀಸ್ ನಿರೀಕ್ಷಕ ದೇವಾನಂದ, ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ, ಹರಿಹರ ನಗರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಪತಿ ಗಿನ್ನಿ, ಜಿ.ಎಸ್.ವಿಜಯ್, ಮಂಜುನಾಥ ಕುಪ್ಪೇಲೂರ, ಸಿಬ್ಬಂದಿ ನಾಗರಾಜ್ ಸುಣಗಾರ, ಲಿಂಗರಾಜ್, ಸಿದ್ದೇಶ, ಹೇಮಾನಾಯ್ಕ್, ರವಿ.ಆರ್, ರುದ್ರಸ್ವಾಮಿ.ಕೆ.ಸಿ, ಹನುಮಂತ ಗೋಪನಾಳ, ಮಂಜುನಾಥ ಕ್ಯಾತಮ್ಮನವರ್, ರವಿನಾಯ್ಕ್, ಕರಿಯಪ್ಪ, ತಿಪ್ಪೆಸ್ವಾಮಿ, ಸಿದ್ದರಾಜು.ಎಸ್.ಬಿ, ರಾಜಾಸಾಬ್, ರವಿನಾಯ್ಕ, ಸತೀಶ, ತಿಪ್ಪೇಸ್ವಾಮಿ ಅವರಿಗೆ ಎಸ್ಪಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.