ದಾವಣಗೆರೆ (Davanagere): ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆದೇಶದಂತೆ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಮಾದಿಗ ಮತ್ತು ಛಲವಾದಿ ವಕೀಲರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಒಳಮೀಸಲಾತಿಗೆ ಸುಪ್ರೀಂ ಅಸ್ತು ಎಂದಿದೆ. ಆದರೆ, ಆದೇಶ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಅಹಿಂದ ಹೆಸರು ಹೇಳಿಕೊಂಡು ಬಂದಿರುವ ಸರ್ಕಾರ ದಲಿತರಿಗೆ ಒಳಿತು ಮಾಡುವಲ್ಲಿ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಕಳೆದ ಮೂರು ದಶಕಗಳಿಂದ ನಡೆಸಿದ ನಿರಂತರ ಹೋರಾಟದ ಫಲವಾಗಿ ಈಗ ಒಳಮೀಸಲಾತಿ ದೊರಕುವ ಸಮಯ ಬಂದಿದೆ. ಸರ್ವೋಚ್ಚ ನ್ಯಾಯಾಲಯ ಅ.೧ರಂದು ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ಮತ್ತು ಹೊಣೆಗಾರಿಕೆ ಆಯಾ ರಾಜ್ಯ ಸರ್ಕಾರಳಿಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಅದರ ಅನ್ವಯ ರಾಜ್ಯ ಸರ್ಕಾರ ಕೂಡಲೇ ಒಳ ಮೀಸಲಾತಿ ಸೌಲಭ್ಯ ಒದಗಿಸಬೇಕೆಂದು ವಕೀಲರು ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠ ನೀಡಿರುವ ತೀರ್ಪುನಂತೆ ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು. ಅಲ್ಲಿಯವರೆಗೆ ರಾಜ್ಯದಲ್ಲಿ ನಡೆಯುವ ಎಲ್ಲ ಸರ್ಕಾರಿ ಮತ್ತು ಅರೆ ಸರ್ಕಾರಿ ನೇಮಕಾತಿ ಸ್ಥಗಿತಗೊಳಿಸಬೇಕು. ಹಣಕಾಸಿನ ಮತ್ತು ಇತರೆ ಸೌಲಭ್ಯ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
Read also : Davanagere | ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾಗಿ ಮೊಹಮ್ಮದ್ ಜಿಕ್ರಿಯಾ ನೇಮಕ
ಈ ಸಂದರ್ಭದಲ್ಲಿ ವಕೀಲರಾದ ಬಿ.ಎಂ.ಹನುಮಂತಪ್ಪ, ಎಸ್.ರಾಜಪ್ಪ, ವೈ.ಹನುಮಂತಪ್ಪ ಜಗಳೂರು, ಎಸ್.ನೇತ್ರಾವತಿ, ಎಂ.ಎನ್.ನೇತ್ರಾವತಿ, ಬಿ.ಸ್ವಾತಿ, ಟಿ.ಹನುಮಂತಪ್ಪ, ಕೆ.ರಾಜಪ್ಪ, ಪರಶುರಾಮಪ್ಪ ಜಗಳೂರು, ಎ.ಎನ್.ಲಿಂಗಮೂರ್ತಿ, ಸುಭಾಶ್ಚಂದ್ರ ಭೋಸ್, ಜಿ.ಬಸವಾಜ, ಭೈರೇಶ್, ಡಿ.ಸಿ.ತಿಪ್ಪೇಸ್ವಾಮಿ ಜಗಳೂರು, ಅನಿಲ್‌ಕುಮಾರ್ ಚನ್ನಗಿರಿ, ಸುರೇಶ್‌ಕುಮಾರ್, ಎಚ್.ಹನುಮಂತಪ್ಪ, ತಿಪ್ಪೇಸ್ವಾಮಿ ಜಿಟಿಎಸ್ ಜಗಳೂರು, ಎ.ಕೆ.ಹಾಲೇಶ್, ವೈ.ಸುರೇಶ್, ನಿವೃತ್ತ ಮುಖ್ಯ ಶಿಕ್ಷಕ ಎ.ಕೆ.ರಾಮಪ್ಪ ಸೇರಿದಂತೆ ಇನ್ನಿತರರಿದ್ದರು.