ದಾವಣಗೆರೆ: ಕಾಡು ಹಂದಿಗಳನ್ನು ಹಿಡಿಯಲು ಹಾಕಿದ್ದ ಬೆಲೆಗೆ ಚಿರತೆ ಮರಿಯನ್ನು ಬಿದ್ದಿರುವ ಘಟನೆ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ವಲಯ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಡೆದಿದೆ.
ಬಸವಾಪಟ್ಟಣದ ರೈತ ಎಂ.ಎಸ್. ಜಯಣ್ಣ ಅವರ ಅಡಿಕೆ ತೋಟದಲ್ಲಿ ಹಂದಿಗಳನ್ನು ಹಿಡಿಯಲು ಬಲೆಗ ಹಾಕಿದ್ದರು. ಶುಕ್ರವಾರ ಚಿರತೆ ಮರಿಯೊಂದು ಸಿಲುಕಿ ಒದ್ದಾಡುತ್ತಿತ್ತು. ಈ ವಿಷಯ ತಿಳಿದ ಮಾವಿನಕಟ್ಟೆ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಚಿರತೆ ಮರಿಯನ್ನು ಉರುಳಿನಿಂದ ಬಿಡಿಸಿ ರಕ್ಷಿಸಿದರು.
ಬೆಳಿಗ್ಗೆ ಗುಡ್ಡದ ಬದಿಯಲ್ಲಿರುವ ತಮ್ಮ ಅಡಿಕೆ ತೋಟದಲ್ಲಿ ಚಿರತೆ ಮರಿ ಕೂಗುವುದನ್ನು ಕೇಳಿದ ಜಯಣ್ಣ ಮತ್ತು ಇತರ ರೈತರು ಅದರ ಹತ್ತಿರ ಹೋದಾಗ ಸಮೀಪದಲ್ಲೇ ತಾಯಿ ಚಿರತೆ ಇರುವುದನ್ನು ಕಂಡು ಭಯಭೀತರಾಗಿ ಕೂಡಲೇ ಬಸವಾಪಟ್ಟಣ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದರು.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಶಾಂತಿ ಸಾಗರ ವಲಯದ ಅರಣ್ಯಾಧಿಕಾರಿ ಎನ್. ಉಷಾ ಅವರ ಮಾರ್ಗದರ್ಶನದಲ್ಲಿ ಚಿರತೆ ಮರಿಯನ್ನು ‘ಉರುಳಿನಿಂದ ಬಿಡಿಸಿದಾಗ ಅದು ಬಲೆಗೆ ಸಿಲುಕಿದ್ದ ಚಿರತೆ ಮರಿ ತಾಯಿಯನ್ನು ಹುಡುಕುತ್ತ ಗುಡ್ಡದ ಕಡೆಗೆ ಓಡಿತು.
‘ಮೊದಲು ಚಿರತೆ ಮರಿಗೆ ಮಂಪರು ಔಷಧ ನೀಡಿ ಅದನ್ನು ಹಿಡಿಯಬೇಕೆಂದು ನಿರ್ಧರಿಸಿದ್ದೆವು. ಆದರೆ, ಅರಣ್ಯಾಧಿಕಾರಿ ಉಷಾ ಅವರ ಸೂಚನೆಯಂತೆ ಮರಿಯನ್ನು ಸ್ವತಂತ್ರಗೊಳಿಸಿದೆವು. ತಾಯಿ ಚಿರತೆಯನ್ನು ಹಿಡಿಯಲು ಸ್ಥಳದಲ್ಲಿ ಬೋನು ಅಳವಡಿಸಿದ್ದು. ಮೂರು ದಿನಗಳ ಕಾಲ ಯಾರೂ ಅತ್ತಕಡೆ ಹೋಗಬಾರದು’ ಎಂದು ಅರಣ್ಯ ಉಪ ವಲಯಾಧಿಕಾರಿ ಮನೋಹರ್ ತಿಳಿಸಿದರು. ಇಲಾಖೆಯ ಸಿಬ್ಬಂದಿ ಭೀಮಪ್ಪ, ಶಿವಶಂಕರ್ ಇದ್ದರು.
