ದಾವಣಗೆರೆ ಜೂ.5: ಬಾಲಕಾರ್ಮಿಕರು ಮತ್ತು ಕಿಶೋರಕಾರ್ಮಿಕನ್ನು ದುಡಿಮೆಯಿಂದ ಬಿಡುಗಡೆಗೊಳಿಸುವ ಜೊತೆಗೆ ಪುನರ್ವಸತಿ ಕಲ್ಪಿಸಲು ಒತ್ತು ನೀಡಲು ಹಾಗೂ ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಬಗ್ಗೆ ಧ್ವನಿ ಸುರುಳಿ ಪ್ರಚಾರ ಮಾಡುವ ಮೂಲಕ ಜನರಲ್ಲಿ ತಿಳುವಳಿಕೆ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನಾ ಯೋಜನಾ ಸೊಸೈಟಿ ಅಧ್ಯಕ್ಷ ರಾದ ಡಾ.ವೆಂಕಟೇಶ್ ಎಂ.ವಿ. ತಿಳಿಸಿದರು.
ಬುಧವಾರ(ಜೂ.5) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಇವರುಗಳ ವತಿಯಿಂದ ಆಯೋಜಿಸಲಾದ ಕಾರ್ಯಕಾರಿ ಹಾಗೂ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲಕಾರ್ಮಿಕರು ಮತ್ತು ಕಿಶೋರಕಾರ್ಮಿಕರನ್ನು ಬಿಡುಗಡೆ ಮತ್ತು ಪುನರ್ವಸತಿಗೊಳಿಸುವ ಬಗ್ಗೆ ದೊಡ್ಡ ಉದ್ದಿಮೆಗಳು ಪ್ಯಾಕ್ಟರಿಗಳು, ಡಾಬಾ ಹೋಟೆಲ್,ಶಾಪ್‍ಗಳಲ್ಲಿನ ಬಾಲಕಾರ್ಮಿಕರನ್ನು ಬಿಡುಗಡೆಗೊಳಿಸಿ, ಪುನರ್ವಸತಿ ಕಲ್ಪಿಸಬೇಕು. ಇಟ್ಟಂಗಿ ಭಟ್ಟಿಗಳಲ್ಲಿ, ಮಂಡಕ್ಕಿ ಭಟ್ಟಿಗಳಲ್ಲಿ, ಕೆಲಸ ಮಾಡಲು ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯದಿಂದ ಕುಟುಂಬ ಸಮೇತರಾಗಿ 150 ರಿಂದ 200 ಕಾರ್ಮಿಕರು ವಲಸೆ ಬರುತ್ತಾರೆ, ಅವರೊಂದಿಗೆ ಮಕ್ಕಳು ಬಂದಿರುತ್ತಾರೆ. ಅಂತವರಿಗೆ ಶಿಕ್ಷಣದ ಮಹತ್ವ ತಿಳಿಸುವುದು, ಮಕ್ಕಳನ್ನು ಶಾಲೆಗೆ ಬರುವಂತೆ ಪೋಷಕರ ಮನವೊಲಿಸುವ ಜಾಗೃತಿ ಹಾಗೂ ಕಾನೂನು ಅರಿವು ಮೂಡಿಸಬೇಕೆಂದರು.
ಸಿ.ಆರ್.ಸಿ ಸೆಂಟರ್ ಸಂಪರ್ಕಿಸಿ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗುವಂತಹ ಚಟುವಟಿಕೆಗಳ ಆಟಿಕೆಗಳನ್ನು ನೀಡಿ ಅರಿವು ಮೂಡಿಸುವುದು. ಎಸ್.ಸಿ.ಪಿ- ಟಿ.ಎಸ್.ಪಿ ಅನುದಾನವನ್ನು ನೀಡಿರುವ ಮಾರ್ಗದರ್ಶನದಂತೆ ಗ್ರಾಮಿಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲೋನಿಗಳಿಗೆ ಭೇಟಿ ಅಲ್ಲಿನ ವಾಸ್ತವತೆಯ ಸಮಿಕ್ಷೆ ನಡೆಸಿ ಅಲ್ಲಿರುವ ಮಕ್ಕಳ ಬಗ್ಗೆ ಪರಿಶೀಲಿಸಿ ಕನಿಷ್ಠ ಹತ್ತನೆ ತರಗತಿಯ ವರೆಗೆ ಶಿಕ್ಷಣ ಪಡೆಯುವಂತೆ ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿಗಳಿಗೆ ಹಾಗೂ ಸಿಆರ್ ಪಿಗಳಿಗೆ ಸಲಹೆ ನೀಡಿದರು.
ಕೈಗಾರಿಕೆ ಮತ್ತು ಹೋಟೆಲ್‍ಗಳಲ್ಲಿ ಕೆಲಸಗಳಲ್ಲಿ ಹೆಚ್ಚಾಗಿ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತಿದೆ, ಈ ಬಗ್ಗೆ ಜಿಲ್ಲಾ ಕಾರ್ಯಪಡೆಯಲ್ಲಿ ನೇಮಕಗೊಂಡಿರುವ ಎಲ್ಲಾ ಇಲಾಖೆಯ ಅಧಿಕಾರಿಗಳು ಮಾಸಿಕ ತಪಾಸಣೆಗಳಲ್ಲಿ ಭಾಗವಹಿಸಿ ಬಾಲಕಾರ್ಮಿಕರು ಕಂಡುಬಂದಲ್ಲಿ ಅವರಲ್ಲಿ ಅರಿವು ಮೂಡಿಸಿ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ ನಂತರ ಮಕ್ಕಳ ಕುಟುಂಬಕ್ಕೆ ಸಾಮಾಜಿಕ ಭದ್ರತೆಯಡಿ ಸರ್ಕಾರದ ಸೇವೆಗಳನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಸಹಕರಿಸುವಂತೆ ಸೂಚಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಮ. ಕರೆಣ್ಣ ಮಾತನಾಡಿ, ಅನಿರೀಕ್ಷಿತ ದಾಳಿಯಲ್ಲಿ ಸಿಕ್ಕ ಮಕ್ಕಳನ್ನು ಹತ್ತಿರದ ಮೂರಾರ್ಜಿ ಶಾಲೆಗಳಿಗೆ ದಾಖಲಿಸುವುದು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ಪಡೆದು ಪುನಃ ಶಾಲೆಗೆ ದಾಖಲಿಸಿಕೊಳ್ಳುವುದು ಮಕ್ಕಳು ಶಾಲೆಯಿಂದ ಹೊರಗೆ ಉಳಿಯದಂತೆ ಸೂಕ್ತ ಕ್ರಮ ವಹಿಸಲು ತಿಳಿಸಿದರು. ಹಾಗೂ ನವೆಂಬರ್ ತಿಂಗಳಿಂದ ಆನಗೋಡು, ಕುಕ್ಕುವಾಡ, ಹರಿಹರದಲ್ಲಿ ಕಬ್ಬು ಕಟಾವು ಮಾಡಲು ಮಹಾರಾಷ್ಟ್ರದಿಂದ ಕಾರ್ಮಿಕ ಕುಟುಂಬ ವಲಸೆ ಬರುತ್ತಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದು ಅಂತಹ ಮಕ್ಕಳನ್ನು ಗಮನಿಸಿ ಅವರು ಶಿಕ್ಷಣದಿಂದ ವಂಚಿತರಾಗದಂತೆ ನಾವೆಲ್ಲರೂ ಶ್ರಮಿಸೋಣ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಡಿಡಿಪಿಐ ಕೊಟ್ರೇಶ್, ಜಿಲ್ಲಾ ಮಕ್ಕಳ ಘಟಕದ ರಕ್ಷಣಾಧಿಕಾರಿ ಕವಿತ ಹಾಗೂ ಇನ್ನಿತರರು ಉಪಸ್ಥಿತರಿದ್ದರು.