ದಾವಣಗೆರೆ: ಪೌರಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವ ಪಾಲಿಕೆ ಆಯುಕ್ತರು ಮತ್ತು ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರನ್ನು ವರ್ಗಾವಣೆ ಮಾಡದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಮಾದಿಗ ದಂಡೋರ ಜಿಲ್ಲಾ ಸಮಿತಿ ಅಧ್ಯಕ್ಷ ಹೆಚ್.ಸಿ. ಗುಡ್ಡಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರು ಬೆಳಿಗ್ಗೆ 5 ಗಂಟೆಯಿಂದಲೇ ಕೆಲಸ ಆರಂಭಿಸಿ ಮಧ್ಯಾಹ್ನ 3 ರವರೆಗೆ ನಗರ ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಾರೆ. ಇವರಿಗೆ ಸರ್ಕಾರದಿಂದ ಬೆಳಗಿನ ಉಪಾಹಾರ ಸೇರಿದಂತೆ ಸುರಕ್ಷತೆಗೆ ಬೇಕಾದ ವಸ್ತುಗಳನ್ನು ನೀಡಲು ಸರ್ಕಾರ ಕೋಟ್ಯಾಂತರ ರೂ., ಬಿಡುಗಡೆ ಮಾಡಿದರೂ ಆಯುಕ್ತರು ಮತ್ತು ಸಂಬಂಧಿಸಿದ ಅಧಿಕಾರಿಗಳು ಪೌರಕಾರ್ಮಿಕರಿಗೆ ತಲುಪುತ್ತಿಲ್ಲ ಎಂದು ಅಪಾದಿಸಿದರು.
ಒಣ ಮತ್ತು ಹಸಿ ಕಸಗಳನ್ನು ಬೇರ್ಪಡಿಸಲು ಎನ್.ಜಿ.ಓ. ಒಂದಕ್ಕೆ ವಾರ್ಷಿಕ 19,19 ಕೋಟಿಗೆ ಗುತ್ತಿಗೆ ನೀಡಿದ್ದರೂ ಸದರಿ ಸಂಸ್ಥೆಯು ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ, ತಪ್ಪು ಮಾಹಿತಿ ನೀಡಿ ಹಣ ಪಡೆಯುತ್ತಿದ್ದರೂ ಈ ಸಂಸ್ಥೆಯ ಮೇಲೆ ಯಾವುದೇ ಕ್ರಮಕೈಗೊಳ್ಳದ ಆಯುಕ್ತರು ಪೌರಕಾರ್ಮಿಕರಿಗೆ ಹೆಚ್ಚುವರಿಯಾಗಿ ಇದೇ ಕೆಲಸವನ್ನು ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
Read also : ಕುಷ್ಠರೋಗ ನಿವಾರಣೆಗೆ ಅರಿವು ಮೂಡಿಸಿ : ಸಿಇಓ ಗಿತ್ತೆ ಮಾಧವ ವಿಠಲ ರಾವ್
ಪೌರಕಾರ್ಮಿಕರಿಗೆ ಬೆಂಗಳೂರಿನ ಮಾದರಿಯ ಪೊರಕೆಗಳನ್ನು ತಂದುಕೊಟ್ಟು ಅದರಲ್ಲಿಯೇ ಕಸಗೂಡಿಸಬೇಕೆಂದು ಬೆದರಿಕೆ ಹಾಕುತ್ತಾರೆ. ಪಾಲಿಕೆಯ ಆಯುಕ್ತರು ಇಲ್ಲಿಗೆ ಬಂದು ಮೂರು ವರ್ಷಗಳ ಅವಧಿಯಲ್ಲಿ ನಾಲ್ಕು ಜನ ಪೌರಕಾರ್ಮಿಕರನ್ನೂ ಸೇರಿದಂತೆ ಕಚೇರಿಯಲ್ಲಿ ಕೆಲಸ ಮಾಡುವ ಒಟ್ಟು 41 ಸಿಬ್ಬಂದಿಗಳನ್ನು ಅಮಾನತ್ತು ಮಾಡಿದ್ದಾರೆ ಎಂದು ಹೇಳಿದರು.
ಪೌರಕಾರ್ಮಿಕರಿಗೆ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡುತ್ತಿರುವ ಆಯುಕ್ತರು ಮತ್ತು ಪರಿಸರಕ್ಕೆ ಒಳಪಡುವ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ವರ್ಗಾವಣೆ ಮಾಡಿ, ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹೆಚ್.ಚಿದಾನಂದಪ್ಪ, ಎಂ.ಅಂಜನೇಯ, ಎಂ.ಡಿ.ಶಿವಕುಮಾರ್, ದಾನಪ್ಪ, ದೊಡ್ಡಪ್ಪ, ಆಲೇಕಲ್ಲು ಲೋಕೇಶ್ ಇತರರು ಇದ್ದರು.
