ದಾವಣಗೆರೆ : ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ತಕ್ಷಣವೇ ಪ.ಜಾತಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಮಹಾಸಭಾ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಶುಕ್ರವಾರ ನಡೆಯಿತು.
ಅಂಬೇಡ್ಕರ ವೃತ್ತದಿಂದ ಮೆರವಣೆಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಪ.ಜಾತಿಗಳ ಸಮುದಾಯದೊಳಗಿನ ಅತೀ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ಜಾರಿಯಾಗಬೇಕಿರುವ ಒಳ ಮೀಸಲಾತಿಯ ಬೇಡಿಕೆ ಮತ್ತು ಹೋರಾಟ 35 ವರುಷಗಳಿಂದ ನನೆಗುದಿಗೆ ಬಿದ್ದಿದೆ. ಈ ಅಸಮಾನತೆಯನ್ನು ಸರಿಪಡಿಸಲು, ದಿನಾಂಕ 01-08-2024 ರ ಸರ್ವೋಚ್ಛ ನ್ಯಾಯಾಲಯದ ತೀರ್ಪು ಸ್ಪಷ್ಟವಾಗಿ ಪ.ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಆದೇಶವನ್ನು ನೀಡಿದೆ. ಆದರೆ, ಕರ್ನಾಟಕ ಸರ್ಕಾರವು ಈ ಸರ್ವೋಚ್ಛ ನ್ಯಾಯಾಲಯದ ತೀರ್ಪುನ್ನು ಜಾರಿಗೊಳಿಸಲು ಅನಗತ್ಯವಾಗಿ ವಿಳಂಬ ಮಾಡುತ್ತಿರುವುದು ನಮ್ಮ ಸಮುದಾಯದಲ್ಲಿ ತೀವ್ರ ಅಸಮಾಧಾನ ಮತ್ತು ಆತಂಕಕ್ಕೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಳಂಬ ನೀತಿಯಿಂದಾಗಿ ನಮ್ಮ ಸಮುದಾಯದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕಾರ್ಮಿಕರು ಹಾಗೂ ಮಹಿಳೆಯರು ಹಾಗೂ ಒಟ್ಟಾರೆ ಸಮಾಜ ತಮ್ಮ ನ್ಯಾಯಯುತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನ ತರುವಾಯ ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ಸರ್ಕಾರಗಳು ತುರ್ತು ನಿಗಾವಹಿಸಿ ತಮ್ಮ ರಾಜ್ಯಗಳಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡಿ ಸಾಮಾಜಿಕ ನ್ಯಾಯದ ವಿಷಯದಲ್ಲಿ ಮೇಲ್ಪಂಕ್ತಿ ಆಗಿದ್ದಾರೆ. ಆದರೆ ಕರ್ನಾಟಕ ಸರ್ಕಾರ ತೀವ್ರವಾದ ವಿಳಂಬ ನೀತಿ ಅನುಸರಿಸುತ್ತಿದ್ದು ಪ.ಜಾತಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಾದಿಗ ಮತ್ತು 29 ಉಪಜಾತಿಗಳಲ್ಲಿ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದೆ ಎಂದು ಕಿಡಿಕಾರಿದರು.
Read also : ಮನೆ ಬೀಗ ಮುರಿದು ಕಳ್ಳತನ : ಆರೋಪಿಗಳ ಬಂಧನ , 20 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣ ವಶಕ್ಕೆ
ನಾಗಮೋಹನ್ ದಾಸ್ ಆಯೋಗಕ್ಕೆ ಸರ್ಕಾರ ಸರಿಯಾದ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ.ಪ.ಜಾತಿಗಳ ನಡುವೆ ಮೀಸಲಾತಿಯ ಹಂಚಿಕೆಯಲ್ಲಿ ಉಂಟಾಗಿರುವ ಅಸಮಾನತೆ ಮತ್ತು ಸಮುದಾಯಗಳ ನಡುವಿನ ಹಿಂದುಳಿದಿರುವಿಕೆಯನ್ನು ಸಮಗ್ರವಾಗಿ ಅಧ್ಯಯನ ಮಾಡಲು ಆಯೋಗ ಎಲ್ಲ ಇಲಾಖೆಗಳಿಗೆ ಅಗತ್ಯ ಮಾಹಿತಿಯನ್ನು ಜನವರಿಯಲ್ಲಿ ಕೇಳಿತ್ತು. ಆದರೆ ರಾಜ್ಯ ಸರ್ಕಾರದ ನಿರ್ಲಕ್ಷದಿಂದಾಗಿ ಆರು ತಿಂಗಳಾದರು ಸರಿಯಾದ ಮಾಹಿತಿಗಳು ಆಯೋಗಕ್ಕೆ ಬಂದಿಲ್ಲ. ಕೆಲವು ಇಲಾಖೆಗಳ ಮಾಹಿತಿ ಅಪೂರ್ಣವಾಗಿದೆ. ಆಯೋಗ ನೆಡಸಿದ ಸಮೀಕ್ಷೆ , ಸ್ಟಿಕ್ಕರ್ ಅಂಟಿಸುವ ಪ್ರಕ್ರಿಯೆಗಳು ಗೊಂದಲ ಹುಟ್ಟುಹಾಕಿ ನಗೆಪಾಟಲಿಗೆ ಈಡಾಯಿತು. ಮೂರುವಾರದಲ್ಲಿ ಸಮೀಕ್ಷೆ ಮುಗಿಸಿ ವರದಿ ಸಿದ್ಧಪಡಿಸಲಾಗುವುದು ಎಂಬ ಸರ್ಕಾರದ ಹೇಳಿಕೆ ಕಿಮ್ಮತ್ತು ಕಳೆದುಕೊಂಡಿದೆ. ಕಾಂತರಾಜ್ ಆಯೋಗದ ಜಾತಿಗಣತಿಯ ವರದಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳ ನಿರ್ಲಕ್ಷ್ಯದಿಂದ ಕೊನೆಗೆ ಕಸದ ಬುಟ್ಟಿ ಸೇರಿತು. ನಾಗಮೋಹನ್ ದಾಸ್ ವರದಿಯ ಬಗೆಗಿನ ಗೊಂದಲಗಳು, ಸರ್ಕಾರದ ನಿರ್ಲಕ್ಷದ ಧೋರಣೆಯ ಬಗ್ಗೆ ಎಚ್ಚರಿಕೆಯ ಘಂಟೆ ಬಾರಿಸುತ್ತಿದ್ದೇವೆ. ಸರ್ಕಾರ ಸರಿದಾರಿಗೆ ಬರಬೇಕು. ತಕ್ಷಣ ಒಳಮೀಸಲಾತಿ ಜಾರಿಮಾಡಬೇಕೆಂಬುದು ನಮ್ಮ ಅಗ್ರಹ. ಆ. 11ರಿಂದ ಪ್ರಾರಂಭವಾಗುವ ವಿಧಾನ ಮಂಡಲಗಳ ಅಧಿವೇಶನ ಆರಂಭವಾಗುತ್ತಿದ್ದು ಸರ್ಕಾರದ ನಿರ್ಲಕ್ಷ, ವಿಳಂಬ ಧೋರಣೆಯ ಬಗ್ಗೆ ಜನಾಕ್ರೋಶ ಉಗ್ರಸ್ವರೂಪ ತಾಳುವುದು ನಿಶ್ಚಿತ ಎಂದರು.
ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಸಂಪೂರ್ಣವಾಗಿ ಪ.ಜಾತಿಗಳಿಗೆ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕು. ಒಂದು ವೇಳೆ ಸರ್ಕಾರವು ಈ ಗಡುವಿನೊಳಗೆ ನಮ್ಮ ಬೇಡಿಕೆಯನ್ನು ಈಡೇರಿಸಲು ವಿಫಲವಾದರೆ, ನಮ್ಮ ಹಕ್ಕುಗಳಿಗಾಗಿ ಕರ್ನಾಟಕದಾದ್ಯಂತ ಇರುವ ಪ.ಜಾತಿಯ ವಿದ್ಯಾರ್ಥಿಗಳು, ಕಾರ್ಮಿಕರು, ವಕೀಲರು, ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಒಗ್ಗೂಡಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ಉಪಾಧ್ಯಕ್ಷ ಆಲೂರು ನಿಂಗರಾಜು,ಜಿಲ್ಲಾಧ್ಯಕ್ಷ ರಾಜು ಶಾಮನೂರು,ಎಂ.ಹಾಲೇಶ್ ಗಾಂಧಿನಗರ, ಮಂಜುನಾಥ್ ಕುಂದವಾಡ,ಅಂಜಿನಪ್ಪಶಾಮನೂರು, ಡಿ.ಹನುಮಂತಪ್ಪ,ಉಚ್ಚಂಗಿ ಪ್ರಸಾದ್, ಬಸವರಾಜ್ ಡಿ. ಆಲೂರು, ಕೆ.ಹೆಚ್. ಅವಿನಾಶ್, ಕರಿಯಪ್ಪಆವರಗೆರೆ, ಹರೀಶ್ ಹೊನ್ನೂರು, ದುರುಗೇಶ್ ಎಂ. ನಿಟುವಳ್ಳಿ, ಆನಂದ ಎಂ.ಜಾಲಿಹಾಳ್, ಅತ್ತಿಗೆರೆಸಿದ್ಧಪ್ಪ, ಬೇತೂರು ಹನುಮಂತಪ್ಪ ಸೇರಿದಂತೆ ಇತರರು ಇದ್ದರು.