1
ಪಾರ್ಲಿಮೆಂಟಿನ
ಒಂದೊಂದು ಮೆಟ್ಟಿಲ ಮೇಲೂ
ಎಷ್ಟೊಂದು ಬಿಕ್ಕು
ಡಿಸೆಂಬರ್ ಆರು!
ಈ ತೇದಿಯೇ ಹೀಗೆ
ಬೇಡವೆಂದರೂ ಉಳಿಸಿಯೇ ಬಿಡುತ್ತೆ
ಅಗಾಧ ದುಃಖ
ಮೌನಿ ರಸ್ತೆಗಳ ಮೇಲೆ!
2
ಕೇರಿಯ ನೆನೆದು ಕಣ್ಮುಚ್ಚಿದೆ
ಕಗ್ಗತ್ತಲಲ್ಲೂ ಎಷ್ಟೊಂದು ಬಾಸುಂಡೆಗಳು!
ಡಿಸೆಂಬರ್ ಆರು
ತೇದಿಯ ನೆನೆದೆ
ರಕ್ತ,ಅಳು,ಆಕ್ರಂದನ,ನರಳಾಟ!
ಓಹ್!
ಎರಡು ನಿಮಿಷಗಳ ಮೌನವೂ ಎಷ್ಟೊಂದು ಕಷ್ಟ !
3
Read also : ಸಂವಿಧಾನ : ಬಿ.ಶ್ರೀನಿವಾಸ
ಆವಿಯಾಗಿ ಬಿಡುತ್ತವೆ
ಈ ದಿನ
ಕಣ್ಣ ಹನಿ
ಬೆವರ ಹನಿ ….
ನೆಲ ತಾಕುವ ಮುನ್ನ
ಇಲ್ಲವಾಗುತ್ತವೆ ಸದ್ದಿಲ್ಲದೆ ಹರಿದು ಹೋದ
ಎಷ್ಟೋ ನದಿಗಳ ಜಾಡು
ಎದೆಯ ತುಂಬಾ
ಬಿಕರಿಯಾಗಿವೆ
ಜನ ಮತ್ತು ಭೂಮಿ
ನಾಕೇ ನಾಕು ಚಿಲ್ಲರೆ ಕಾಸಿಗೆ!
ಕಾಲವೇ ಬಿಕ್ಕುತಿರುವಾಗ
ಈ ದಿನ,
ನಾವು ಬಿಕ್ಕುವುದೇನು ಮಹಾ?
4
ಈ ತೇದಿ
ಯಾವಾಗಲೂ ಹೀಗೇ
ಕಣ್ಣಲ್ಲಿ
ನೀರುಳಿಸಿಯೇ ಬಿಡುತ್ತದೆ !
ಬಿ.ಶ್ರೀನಿವಾಸ
