ದಾವಣಗೆರೆ : ದೇಶದಲ್ಲಿ ರಾಜಕೀಯ ಸಮಾನತೆ ಇದ್ದರೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಸಮಾನತೆ ಹೋಗಿಲ್ಲ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಹರಿಹರ ತಾಲ್ಲೂಕಿನ ಧ.ರಾ.ಮ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಇನ್ ಸೈಟ್ಸ್ ಐಎಎಸ್ ಸಹಯೋಗದೊಂದಿಗೆ ಏರ್ಪಡಿಸಿದ್ದ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಬಡವರು ಹಾಗೂ ಶ್ರೀಮಂತರು ಸೇರಿದಂತೆ ಯಾರೇ ಆದರೂ ಮತದ ಮೌಲ್ಯ ಒಂದೇ. ಆದ್ರೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆ ಸಿಕ್ಕಿಲ್ಲ. ಇದು ಸಿಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು.
ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ನೀಡಿದೆ. ಆದರೆ, ಅಸಮಾನತೆ ಇನ್ನೂ ತಾಂಡವವಾಡುತ್ತಿದೆ. ಅವಕಾಶಗಳು ಮತ್ತು ಸ್ಥಾನಮಾನಗಳಲ್ಲಿ ಸಮಾನತೆ ಸಿಕ್ಕಾಗ ಮಾತ್ರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ, ಸಾಮಾಜಿಕ ನ್ಯಾಯ ಸಿಗುತ್ತದೆ. ಪ್ರತಿಯೊಬ್ಬ ನಾಗರಿಕರಿಗೂ ಸಮಾನವಾದ ಅವಕಾಶ ಸಿಗಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ನಾವು ಬೆಳೆಯಬೇಕಾದರೆ ಉತ್ತಮ ಸಂಸ್ಕೃತಿ, ಮಾನವೀಯ ಮೌಲ್ಯಗಳು, ಉತ್ತಮ ಗುಣಗಳು, ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಿಕ್ಷಣ ಕ್ಷೇತ್ರದಲ್ಲಿನ ಅಸಮಾನತೆ ತೊಲಗಿದರೆ ಸಹಜವಾಗಿಯೇ ಒಂದೊಂದೇ ಅವಕಾಶ ಮತ್ತು ಸ್ಥಾನಮಾನಗಳು ಹುಡುಕಿಕೊಂಡು ಬರುತ್ತವೆ ಎಂದು ಅಭಿಪ್ರಾಯಪಟ್ಟರು.
ಬಡವರು, ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದವರು ಸೇರಿ ಮತ ಹಾಕಿ ಶಾಸಕರು, ಸಂಸದರನ್ನಾಗಿ ಮಾಡುತ್ತೇವೆ. ನೀವು ಹಾಕಿದ ಮತಗಳು ಅಭಿವೃದ್ಧಿ, ಶೈಕ್ಷಣಿಕ ಪ್ರಗತಿ, ಜನರಜೀವನ ಮಟ್ಟ ಸುಧಾರಣೆ ಆಗಬೇಕು. ಶಾಸಕರು, ಸಂಸದರ ಅಧಿಕಾರ ಶ್ರೀಮಂತಿಕೆ, ಉದ್ಯಮ ಬೆಳೆಸಲು ಆಗಬಾರದು. ಜನರ ಸೇವೆಗಾಗಿಯೇ ಮೀಸಲಿಡುವಂತಾಗಬೇಕು. ಇಂದಿನ ಯುವಕ ಯುವತಿಯರೇ ಮುಂದಿನ ದೇಶದ ಭವಿಷ್ಯ ಬರೆಯುವವರು. ಮತ ಹಾಕುವಾಗ ಆಲೋಚಿಸಿ ಚಲಾಯಿಸಬೇಕು. ಅಧಿಕಾರದ ಗದ್ದುಗೆ ಏರಿ ಹೋದ ಮೇಲೆ ಸಂತ್ರಸ್ತರಾಗಬಾರದು. ಶಿಕ್ಷಣದ ಅಸಮಾನತೆಯಿಂದ ಹೊರ ಬಂದು ನೀವೂ ಕೂಡ ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕು. ದೊಡ್ಡ ಉದ್ಯಮಿಗಳಾಗಬೇಕು ಎಂದು ಸಲಹೆ ನೀಡಿದರು.
ಬಿಎ, ಬಿಎಸ್ಸಿ, ಬಿಕಾಂ ಸೇರಿದಂತೆ ಪದವಿ ಪಡೆದ ಬಳಿಕ ಉದ್ಯೋಗಾವಕಾಶಗಳು ದಾವಣಗೆರೆಯಲ್ಲಿಯೇ ಸಿಗುತ್ತದೆ ಎಂದುಕೊಂಡು ಸುಮ್ಮನೆ ಕೂರಬಾರದು. ಪ್ರಯತ್ನ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗಿ. ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆಗಳ ಬಗ್ಗೆ ತಯಾರಿ ನಡೆಸಿ. ಪುಸ್ತಕಗಳು, ದಿನಪತ್ರಿಕೆಗಳನ್ನು ಹೆಚ್ಚಾಗಿ ಓದಿ. ಎಷ್ಟು ಪುಸ್ತಕಗಳನ್ನು ಓದುತ್ತೀರೋ ಅಷ್ಟು ಜ್ಞಾನ ಸಂಪಾದನೆ ಆಗುತ್ತದೆ. ಜೊತೆಗೆ ಜೀವನದಲ್ಲಿ ದೊಡ್ಡ ಗುರಿ ಸಾಧಿಸುವ ಪ್ರಯತ್ನಕ್ಕೆ ಪೂರಕವಾಗುವ ಜೊತೆಗೆ ಧೈರ್ಯವನ್ನೂ ತಂದುಕೊಡುತ್ತದೆ ಎಂದು ಹೇಳಿದರು.
ಪ್ರತಿಯೊಂದು ರಂಗಗಳಲ್ಲಿಯೂ ಜಾತಿ ಎನ್ನೋದು ಹಾಸುಹೊಕ್ಕಾಗಿದೆ. ರಾಜಕಾರಣ, ಉದ್ಯಮ, ಸರ್ಕಾರಿ ಕೆಲಸ ಸೇರಿದಂತೆ ಯಾವ ವಿಚಾರಕ್ಕೂ ಬಂದರೂ ಜಾತಿಯಿಂದಲೇ ಗುರುತಿಸುವಂತ ಸ್ಥಿತಿ ನಿರ್ಮಾಣವಾಗಿದೆ. ಜಾತಿ ಅನ್ನೋದು ದೇಶ ಕಾಡುತ್ತಿರುವ ದೊಡ್ಡ ಪಿಡುಗು, ದೊಡ್ಡ ಗುರುತು ಆಗಿದೆ. ದೇಶವು ಜಾತ್ಯಾತೀತ ರಾಷ್ಟ್ರ ಎನ್ನುತ್ತೇವೆ. ಆದ್ರೆ, ಜಾತಿ ಗುರುತುವಿಕೆಯೇ ಇಲ್ಲಿ ಪ್ರಧಾನವಾಗಿದೆ. ಜಾತಿ ಮೀರಿ ಪ್ರಯತ್ನ ಮಾಡಿದಾಗ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
Read also : ದಾವಣಗೆರೆ | ಬೀಡಾ ಅಂಗಡಿಯಲ್ಲಿ ಗಾಂಜಾ ಮಾರಾಟ ಆರೋಪಿ ಸೆರೆ
ದಕ್ಷಿಣ ಭಾರತದಲ್ಲಿ ಮೊದಲ ಹಾಗೂ ದೇಶದಲ್ಲಿ 3 ನೇ ಸ್ಥಾನ ಪಡೆದಿರುವ ಐಎಎಸ್ ಕೋಚಿಂಗ್ ಸೆಂಟರ್ ಇನ್ ಸೈಟ್ಸ್ ಐಎಎಸ್ ಸಂಸ್ಥೆ. ಒಂದೂವರೆ ಸಾವಿರ ಜನರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಕೊಟ್ಟ ಸಂಸ್ಥೆ ನನ್ನದು. ನಾನೇ ಮುಖ್ಯ ಮಾರ್ಗದರ್ಶಕ. ಈ ಸಂಸ್ಥೆ ಕಟ್ಟಿ ಬೆಳೆಸಲು ಕಾರಣವಾಗಿದ್ದೇ ಜ್ಞಾನ ಸಂಪಾದನೆ. ಇದು ಬಂದಿದ್ದು ಪುಸ್ತಕಗಳನ್ನು ಹೆಚ್ಚಾಗಿ ಓದಿದ್ದರಿಂದ. ನೀವೆಲ್ಲರೂ ಪುಸ್ತಕಗಳನ್ನು ಓದುವ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚಾಗಿ ಪಾಲ್ಗೊಳ್ಳುವಂತಾಗಬೇಕು. ಪಠ್ಯ ಪುಸ್ತಕಗಳ ಹುಳುಗಳಾಗದೇ ಜ್ಞಾನಾರ್ಜನೆಯತ್ತ ಹೆಚ್ಚಿನ ಗಮನ ಹರಿಸಿ ಎಂದು ಕಿವಿಮಾತು ಹೇಳಿದರು.
ಆಂಗ್ಲ ಭಾಷೆ ಶಿಕ್ಷಕ ಬಿ. ಜಿ. ಸಿದ್ಧಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಹರಿಹರದ ಧ.ರಾ.ಮ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ರಾಜಶೇಖರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹರಿಹರ ತಾಲ್ಲೂಕಿನ ಡಿ.ಎಸ್.ಎಸ್. ಸಂಚಾಲಕ ಪಿ.ಜೆ. ಮಹಾಂತೇಶ್, ಸಮಾಜ ಸೇವಕರಾದ ಮುಗ್ದುಂ, ಉಪನ್ಯಾಸಕ ಬಿ.ಜಿ. ಸಿದ್ದಪ್ಪ, ಹರಿಹರದ ಲಕ್ಕಮ್ಮ ಶಿಕ್ಷಕಿಯವರ ಪುತ್ರ ಶಿವಕುಮಾರ್ ಸಂಬಳಿ ಮತ್ತಿತರರು ಹಾಜರಿದ್ದರು. ಐಶ್ವರ್ಯ ಪ್ರಾರ್ಥಿಸಿದರು. ಭೌತಶಾಸ್ತ್ರ ಉಪನ್ಯಾಸಕಿ ಕೆ. ಎಸ್. ಪುಷ್ಪಾ ನಿರೂಪಿಸಿದರು. ಚಂದ್ರನಾಯ್ಕ ವಂದಿಸಿದರು.
ಹೆಚ್ಚು ಸಾಧಿಸಿಲ್ಲ, ಮುಂದೆ ಸಾಧಿಸುತ್ತೇನೆ: ಜಿಬಿವಿ
ನಾನಿನ್ನೂ ದೊಡ್ಡ ಸಾಧನೆ ಮಾಡಿಲ್ಲ. ಮುಂದೆ ಮಾಡಿಯೇ ತೀರುತ್ತೇನೆ. ಈ ಸಾಧನೆಗೆ ಮೂರು, ಐದು ಇಲ್ಲವೇ ಹತ್ತು ವರ್ಷವಾದರೂ ಆಗಬಹುದು. ವಿಧಾನಸಭೆ, ಸಂಸತ್ ಗೆ ಹೋಗಿಯೇ ಹೋಗುತ್ತೇನೆ. ಶಿಕ್ಷಣದಲ್ಲಿನ ಅಸಮಾನತೆ ಕಡಿಮೆ ಮಾಡಿದಾಗ ಮಾತ್ರ ನಾನು ಸಾಧನೆ ಮಾಡಿದೆ ಎಂಬ ತೃಪ್ತಿ ಬರುತ್ತದೆ. ಅಲ್ಲಿಯವರೆಗೆ ಹೋರಾಟ ಮುಂದುವರಿಸುತ್ತೇನೆ. ಕಷ್ಟಪಡುತ್ತಲೇ ಇರುತ್ತೇನೆ. ನಾನು ಅನುಭವಿಸಿದ ನೋವು ಯಾರೂ ಅನುಭವಿಸಬಾರದು. ಬಡವರು, ಶೋಷಿತರು, ಹಿಂದುಳಿದವರು ಸೇರಿದಂತೆ ಯಾವುದೇ ಸಮುದಾಯದವರು ಕಷ್ಟದಲ್ಲಿದ್ದರೆ ಸಹಾಯ ಮಾಡಬೇಕು. ಮನೆ ಕಟ್ಟಿಕೊಡಬೇಕು, ಉತ್ತಮ ಶಿಕ್ಷಣ ಕೊಡಿಸಬೇಕು. ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶದಿಂದ ರಾಜಕಾರಣಕ್ಕೆ ಬಂದಿದ್ದೇನೆ ಎಂದು ಜಿಬಿವಿ ಹೇಳಿದರು.