ಎಪ್ಪತ್ತರ ದಶಕದ ಕೊನೆಯ ಭಾಗದಲ್ಲಿ ಕರ್ನಾಟಕದ ರಾಜಕಾರಣ,ಸಾಮಾಜಿಕ ಚಳವಳಿಗಳು , ಮಾರ್ಕಸ್ ವಾದಿ ವಿದ್ಯಾರ್ಥಿ ಚಳವಳಿಗಳ ಮಳೆಗಾಲವೇ ಇತ್ತೆನ್ನಬಹುದು. ಈ ಚಳವಳಿಯ ಪ್ರಾಡಕ್ಟ್ ಗಳೋ ಎಂಬಂತೆ ನೂರಾರು ದಲಿತ ಬರೆಹಗಾರರು, ಮೇಲ್ವರ್ಗಗಳ ಹಲವಾರು ಬರಹಗಾರರು ಪ್ರಗತಿಪರವಾಗಿ ಆಲೋಚಿಸಲು ಕಾರಣವಾಯಿತು.
ಅನಕ್ಷರಸ್ಥರೂ ಕೂಡ ಪದಕಟ್ಟಿ ಹಾಡು ಕಟ್ಟಿ ಹಾಡ ತೊಡಗಿದರು. ಅದೇ ತಾನೆ ಅಕ್ಷರಗಳಿಗೆ ತೆರೆದುಕೊಳ್ಳುತ್ತಿದ್ದ ಯುವ ಸಮುದಾಯವೂ ಹೊಟ್ಟೆಯೊಳಗಿನ ಹಸಿವು, ಅವಮಾನ,ಶೋಷಣೆ ಮತ್ತು ಸಂಕಟ ಗಳನ್ನೆಲ್ಲಾ ಹಾಡಾಗಿ ಹಾಡ ತೊಡಗಿದರು.
ಈ ಹೋರಾಟದ ಹಾಡುಗಳು ಮನುಷ್ಯ ಪ್ರಜ್ಞೆಯನ್ನೇ ಕಳೆದುಕೊಂಡಂತಿದ್ದ ಸಮಾಜವೊಂದರ ಎಚ್ಚರಿಕೆಯ ಕಥಾನಕವನ್ನು ಹೇಳಲಿಕ್ಕೆ ಆರಂಭಿಸಿದವು ಎನ್ನಬಹುದು.
ಇಂಥ ಸಂಕ್ರಮಣ ಕಾಲಘಟ್ಟದಲ್ಲಿ ಹುಟ್ಟಿದ ಅರಿವು ಕೂಡ ಒಂದು ಹೊಸ ಜ್ಞಾನ ಮಾರ್ಗದ ಉದಯಕ್ಕೆ ಕಾರಣವಾಗಿ, ಕನ್ನಡ ಸಾಹಿತ್ಯ ಕೂಡ ವೈವಿಧ್ಯತೆಯಿಂದ ಅರಿವನ್ನು ವಿಸ್ತರಿಸಿ ಕೊಂಡಿದ್ದಂತೂ ಸತ್ಯ.
ಇಂಥ ಅಪರೂಪದ ಹೋರಾಟದ ಹಾಡುಗಳನ್ನು, ಹಾಡುಗಾರರನ್ನು ಹುಡುಕಿ, ಒಂದು ಕಡೆ ಕಲೆಹಾಕಿ “ಬೆಂಕಿಯ ಮಳೆ”ಯನ್ನು ಪುಸ್ತಕರೂಪದಲ್ಲಿ ಹಿಡಿದಿಟ್ಟು, ನಮ್ಮ ನಡುವಿನ ಹೋರಾಟಗಾರ, ದಿಟ್ಟ ದನಿಯ ಸಾಹಿತಿ ಡಾ.ಬಿ.ಎಂ. ಪುಟ್ಟಯ್ಯ ಅನುಭವ ಪ್ರಕಾಶನದ ಮೂಲಕ ಕನ್ನಡದ ಅರಿವಿನ ಜಗತ್ತನ್ನು ಮತ್ತಷ್ಟು ವಿಸ್ತರಿಸಿದ್ದಾರೆ.
ಮುನ್ನೂರಕ್ಕೂ ಹೆಚ್ಚು ಹಾಡುಗಳಿರುವ ಈ ಪುಸ್ತಕದಲ್ಲಿ
ಸಿದ್ಧಲಿಂಗಯ್ಯನವರ
ದೊಡ್ಡಗೌಡರ ಬಾಗಿಲೀಗೆ ನಮ್ಮ ಮೂಳೆಯ ತ್ವಾರಣ
ನಮ್ಮ ಜನಗಳ ಕಾಲುಕಯ್ಯಿ ಕಂಬ ಅವರ ಹಟ್ಟಿಗೆ…..
ಕೋಟಿಗಾನಹಳ್ಳಿ ರಾಮಯ್ಯರ
ನಮ್ಮೂರ ಗುಡಿಯನ್ನು ಕಟ್ಟಿದೋರು ಯಾರಣ್ಣಾ
ಕಟ್ಟೀದ ನಮ್ಮನೆಲ್ಲಾ ಹೊಲೆ ಮಾದಿಗರೆನ್ನುತ್ತಾರೆ
ಡಾ.ಮಲ್ಲಿಕಾ ಘಂಟಿಯವರ..
ಮೊಲೆಯಿಂದ ಹರಿದು ಬಂದಿಹ ಹಾಲು
ಹಾಲಲ್ಲ ಮಗುವೆ ಅದು
ನನ್ನೆದೆಯ ನಂಜು
ಅಂದುಕೊಂಡು ಬೆಳೆಯಬೇಕಿಂದು ನೀ ನಂಜುಂಡನಾಗಿ
ನನ್ನೆದೆಯ ಬೆಂಕಿಗೆ ತಂಪೆರೆಯಲು.
ಜಂಬಣ್ಣ ಅಮರಚಿಂತರ
ಯಾರಯ್ಯಾ ಯಾರಿವರು?ಕಣ್ಣಿಗಂತೂ ಕಾಣರು ಪೆಟ್ರೋಮ್ಯಾಕ್ಸ್ ಹೊತ್ತವರು ಬೆಳಕಿನಡಿಯ ಕತ್ತಲಲ್ಲಿ ಕತ್ತಲೆಯ ಹುದಲಲ್ಲಿ ಹೊತ್ತು ಹೋಗುತ್ತಿರುವವರು
ಚೆನ್ನಣ್ಣ ವಾಲೀಕಾರರ
ಯಾವ ಅಕ್ಷರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ
ಆರ್.ಮಾನಸಯ್ಯರ
ಶ್ಯಾರಿಗಂಜಿಗಾಗಿ ಸೇರು ಬೆವರು ಸುರಿಸುತ್ತಾ
ಊರೂರು ತಿರುಗುವವರ್ಯಾರಯ್ಯ…
ಈ ನಾಡು ಕಟ್ಟಿದವರು ನಾವೆಲ್ಲಿಗ್ಹೋಗಬೇಕು
ಕೂಲಿಯವರು ನಾವು ಕೇಳಯ್ಯ…
ಡಾ.ಬಿ.ಎಂ.ಪುಟ್ಟಯ್ಯನವರ
ಅಕ್ಕ ಲಲಿತಕ್ಕ ಅಕ್ಕ ಲಲಿತಕ್ಕಾ ನಮ್ಮನ್ನೆಲ್ಲ ಬಿಟ್ಟು ಹೊರಟೋದೆಯಕ್ಕ ಅಕ್ಕಿ ಲಲಿತಕ್ಕಾ ಹುಟ್ಟಿದ್ದು ಬಡತನ,ಬೆಳೆದಿದ್ದು ಬಡತನ ಹೋರಾಟವೊಂದೆ ನಿನ್ನ ಸಿರಿತನವಕ್ಕ ತೋಟದಲ್ಲಿ ದುಡಿದಿ ಶೋಷಣೆಯ ಕಂಡಿ ಇದರ ನಾಶಕ್ಕೆ ಹೋರಾಟ ಕಂಡಿ ….
ಹೀಗೆ ನೂರಾರು ಪ್ರತಿಮೆಗಳು,ಬದುಕಿನ ರೂಪಕಗಳು ಲೋಕವೇ ಕನ್ನಡ ಜಗತ್ತಿಗೆ ತೆರೆದುಕೊಂಡಿತು.ಬರೀ ಹಾಡುಗಳಷ್ಟೇ ಅಲ್ಲ,ಹಾಡುಗಳಲ್ಲಿನ ಪ್ರತಿರೋಧದ ಕಾವು,ಬೆಂಕಿಯಾಗಿ ಮಳೆ ಸುರಿಸತೊಡಗಿತು.
ಹೋರಾಟದ ಹಾಡುಗಳು ವಿಮೋಚನೆಯ ಅಸ್ತ್ರಗಳಂತೆ ಕಂಡಿವೆ.ಕೇಳುಗರಿಗಂತೂ ತಮ್ಮದೇ ಲೋಕದ ಸುತ್ತಾ ಎಂಥಾ ಕ್ರೌರ್ಯವಿದೆಯಲ್ಲ! ಎಂದು ಬೆಚ್ಚಿಬೀಳಿಸುವ,ಹೊಸ ಕನಸಿಗಾಗಿ ಹಾತೊರೆಯುವಂತೆ ಹಾಡುಗಳಿವೆ.ಈಗ ಯಾರಾದರೂ ಹಾಡಲು ಶುರುಮಾಡಿದರೆ ಹಲಗೆಯ ಸದ್ದೂ ಕೇಳಿಸಬಲ್ಲದು.
2025 ರಲ್ಲಿ ಬಿಡುಗಡೆಯಾದ ಬೆಂಕಿಯ ಮಳೆ ಕನ್ನಡದ ಮಟ್ಟಿಗಿದು ಚರಿತ್ರಾರ್ಹ ದಾಖಲೆ. ಡಾ.ಬಿ.ಎಂ.ಪುಟ್ಟಯ್ಯನವರಿಗೆ ಕನ್ನಡಿಗರು ಕೃತಜ್ಞರಾಗಿರಬೇಕಾಗುತ್ತದೆ.
ಬಿ.ಶ್ರೀನಿವಾಸ