Kannada News | Dinamaanada Hemme | Dinamaana.com | 07-07-2024
ದೃಶ್ಯಾನುಭೂತಿ ತಮ್ಮ ಮಾತುಗಳಲ್ಲಿ ಕಟ್ಟಿಕೊಡಬಲ್ಲರು
(Lohia Channabasavanna)
ಅವರ ಇಡೀ ಸಾಹಚರ್ಯೆಯ ಅವಧಿಯಲ್ಲಿ, ನಾವು ಕಾಣದ, ಸಮಾಜವಾದದ ಅತ್ಯುನ್ನತ ಕಾಲವೊಂದಲ್ಲಿದ್ದಂತೆ ಭಾಸವಾಗುತ್ತದೆ. ಅಂತಹ ದೃಶ್ಯಾನುಭೂತಿಯನ್ನು ಅವರು ತಮ್ಮ ಮಾತುಗಳಲ್ಲಿ ಕಟ್ಟಿಕೊಡಬಲ್ಲರು.
ನಾಡು ಕಟ್ಟುವ ಉಮೇದು (Lohia Channabasavanna)
ಕೆಲವರ ಬದುಕು,ಸಹಚರ್ಯೆ ಗಳಿಂದ ಉಂಟಾಗುವ ಅನುಭವವೇ ವಿಶೇಷವಾಗಿರುತ್ತದೆ. ಕವಿತೆಯೊಂದು ತನ್ನ ಶಬ್ದಗಳಿಂದ ಸೌಂದರ್ಯಾನುಭವ ನೀಡುತ್ತಿರುವಂತೆ ಅವರೊಂದಿಗಿನ ಮಾತುಕತೆಗಳು ನಾಡು ಕಟ್ಟುವ ಉಮೇದನ್ನು ಹೆಚ್ಚಿಸುವಂತೆ ಇರುತ್ತವೆ.
ತಮ್ಮ ಚಿಂತನ,ಮಂಥನ ಮತ್ತು ಸೃಜನಶೀಲ ಕ್ಷಣಗಳಲ್ಲಯೂ ಕೂಡ ನಿರ್ಲಿಪ್ತರಂತೆ ಕಾಣುವವರು ತಮ್ಮ ಬದುಕಿನ ಬಹುಭಾಗವನ್ನು ಸಮಾಜದ ನಡುವೆ ಕಳೆದಿರುತ್ತಾರೆ. ಇಲ್ಲಿ ಅವರ ಬುದ್ದಿಗಿಂತ ಭಾವಕ್ಕಿಂತ ಬದುಕಿನ ನೇರ ಅನುಭವ ಬಲು ದೊಡ್ಡ ಬಂಡವಾಳ.
ಕನ್ನಡಕ್ಕೆ ಅತ್ತ್ಯುತ್ತಮ ಪುಸ್ತಕಗಳನ್ನು ಓದಲು ಕೊಟ್ಟ ಚನ್ನಬಸವಣ್ಣ (Lohia Channabasavanna)
ಕರ್ನಾಟಕದ ರಾಜಕಾರಣ,ಸಮಾಜವಾದದ ಅಧಃಪತನವನ್ನೂ,ವ್ಯಕ್ತಿ ವಿಶೇಷತೆಗಳನ್ನು,ಘಟನೆ-ವಿಘಟನೆಗಳನ್ನೂ ತನ್ನದೇ ವಿಶ್ಲೇಷಕ ದೃಷ್ಟಿಯಿಂದ ನೋಡುವ ನಿಷ್ಠುರವಾದಿ ಲೋಹಿಯಾ ಚನ್ನಬಸವಣ್ಣ ಯಾರಿಗೆ ತಾನೆ ಗೊತ್ತಿಲ್ಲ? ಬಳ್ಳಾರಿಯ ಲೋಹಿಯಾ ಪ್ರಕಾಶನದ ಮೂಲಕ ಕನ್ನಡಕ್ಕೆ ಅತ್ತ್ಯುತ್ತಮ ಪುಸ್ತಕಗಳನ್ನು ಓದಲು ಕೊಟ್ಟ ಚನ್ನಬಸವಣ್ಣನವರ ಬದುಕು ವೈಯಕ್ತಿಕ ನೆಲೆಯದಾದರೂ ಅದು ಸಾಮಾಜಿಕೀಕರಣಗೊಳ್ಳುವ ರೀತಿಯು ಬೆರಗು ಮೂಡಿಸುವಂತಿದೆ.
ಸಮಾಜವಾದಿ ಕೂಡ ಇದ್ದಾನೆ(Lohia Channabasavanna)
ಕಾಣದ ಕತ್ತಲಲ್ಲಿ ಬೇರಿಳಿಸಿದ ಮರ ಹುಗಿದ ಅಜ್ಞಾತಗಳ ಬಗೆಯುತ್ತ ಹೋದಂತೆ…… ಚನ್ನಬಸವಣ್ಣ ಬದುಕಿದ್ದಾರೆ. ಚನ್ನಬಸವಣ್ಣನವರ ಎದೆಯೊಳಗೆ ಲೋಹಿಯಾ , ಶಾಂತವೇರಿ,ಮಧು ದಂಡವತೆ,ಜಾರ್ಜ್ ಫರ್ನಾಂಡಿಸ್,ಹಡಪದ ರಾಚಪ್ಪ,ಕೆ.ಹೆಚ್.ರಂಗನಾಥ,ಮಧುಲಿಮೆಯೆ,ಕರ್ಪೂರಿ ಠಾಕೂರ್ ,ಪಟೇಲರು,ಪ್ರಮೀಳಾ ದಂಡವತೆ,ಹೆಗಡೆ,ಇರುವಂತೆ ಅವರೊಳಗೆ ಒಬ್ಬ ಕವಿ,ಕಥೆಗಾರ,ಸಂಶೋಧಕ,ಸಮಾಜ ಸುಧಾರಕನೆಂಬ ಬಹುದೊಡ್ಡ ಜವಾಬ್ದಾರಿ ಹೊತ್ತ ಸಮಾಜವಾದಿ ಕೂಡ ಇದ್ದಾನೆ.
ನಾಗರಿಕ ಸಮಾಜವಾದ ಎಚ್ಚರದಲ್ಲಿ ಇರಿಸಿದ್ದಾರೆ (Lohia Channabasavanna)
ಇಂತಹ ಲೋಹಿಯಾವಾದಿ ಚನ್ನಬಸವಣ್ಣ ನಮ್ಮ ನಡುವಿನ ಜೀವಂತ ನಿಷ್ಟುರ ಸಮಾಜವಾದಿ.ಅಪ್ಪಟ ಶಿಸ್ತಿನ ಮನುಷ್ಯರಾದ ಚನ್ನಬಸವಣ್ಣ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಲಿ,ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮವನ್ನು ಆರಂಭಿಸಿ ಬಿಡುತ್ತಾರೆ. ಅತಿಥಿಗಳು ಮುಖ್ಯಮಂತ್ರಿಯೇ ಆಗಿರಲಿ,ಮಂತ್ರಿಗಳೇ ಆಗಿರಲಿ,ಮಹಾ ಮೇಧಾವಿ ಸಾಹಿತಿಗಳೇ ಆಗಿರಲಿ,ಅವರ ಗೈರನ್ನು ಗಮನಿಸಿಯೂ ಗಮನಿಸದಂತೆ , ಇಲ್ಲಿ ಯಾರೂ ಮುಖ್ಯವಲ್ಲ ,ಯಾರೂ ಅಮುಖ್ಯರೂ ಅಲ್ಲ, ಎಂಬಂತೆ ಉದ್ದೇಶಿತ ಕಾರ್ಯಕ್ರಮವನ್ನು ಆರಂಭಿಸುತ್ತಾರೆ. ವೈಚಾರಿಕ ಕೃತಿಗಳನ್ನು ಪ್ರಕಟಿಸುವ ಮೂಲಕ ನಾಗರಿಕ ಸಮಾಜವಾದವನ್ನು ಸದಾ ಎಚ್ಚರದಲ್ಲಿ ಇರಿಸಿದ್ದಾರೆ.
Read also : ದಿನಮಾನ ಹೆಮ್ಮೆ : ಬಳ್ಳಾರಿ ಜಾಲಿ ಹೂಗಳ ಕವಿ– ಪೀರ್ ಬಾಷಾ
ಬ್ಯಾಂಕೊಂದರ ಅಧಿಕಾರಿಯಾಗಿದ್ದ ಕಾಲದಲ್ಲಿಯೂ ಸಹ ಎಂದೂ ಕೂಡ ಬ್ಯಾಂಕಿನ ಸಮಯವನ್ನು ತನ್ನ ಕೆಲಸಗಳಿಗೆ ಬಳಸಿಕೊಳ್ಳಲಿಲ್ಲ. ಯೂನಿಯನ್, ವೈಚಾರಿಕ ಚಿಂತನೆಗಳು , ಚರ್ಚೆಗಳು , ಪ್ರಕಟಣೆಗಳು ಕೆಲಸ ಎಲ್ಲವನ್ನೂ ತನ್ನ ಕಚೇರಿ ವೇಳೆಯ ನಂತರದಲ್ಲಿ ಮಾಡಿದ ಜೀವ. ಕನ್ನಡ ನಾಡಿಗೆ ಲೋಹಿಯಾರನ್ನು, ಮಧು ದುಂಡಾವರ್ತನೆ, ಕರ್ಪೂರಿ ಠಾಕೂರ್, ಜಾರ್ಜ್ ಫರ್ನಾಂಡಿಸ್ ರಂತಹವರನ್ನು ಹತ್ತಿರಕ್ಕೆ ತಂದವರು.
ಹೇಗೋ ನನ್ನ ಪಾಡಿಗೆ
ನಾನು ಬದುಕುತ್ತೇನೆ
ಇನ್ನಷ್ಟು ನೆಲವ ಉತ್ತು ಬಿತ್ತು
ನೀರೆರೆದು ಮಲಗಿರುವ ಬೀಜಗಳ
ಕಣ್ಣು ತೆರೆಸುತ್ತೇನೆ
ನಾಳೆ ಈ ಸಸಿಗಳೆಲ್ಲ
ವಟವೃಕ್ಷಗಳಾಗಿ ಸಾವಿರ ಜನಕ್ಕೆ
ನೆರಳಾದೆವೆಂಬ ಮಹದಾಸೆ ಇರದಿದ್ದರೂ ಒಂದೆರಡಾದರೂ
ಬೀಜವಾಗುವಂಥ ಹಣ್ಣು ಬಿಟ್ಟಾವೆಂದು ನಂಬಿ ಕಾಯುತ್ತೇನೆ
ಎಂದು ಬರೆದ ತಮ್ಮ ಒಡನಾಡಿ
ಕವಿ ಜಿಎಸ್ಸೆಸ್ ರವರ ಆಶಯದಂತೆ ಚನ್ನಬಸವಣ್ಣ ಕೂಡ ಕಾಯುತ್ತಿದ್ದಾರೆ.
ಇಂತಹ ಶ್ರಮಜೀವಿ ಅಣ್ಣ,ಕನ್ನಡಕ್ಕೆ ನೀಡಿದ ಮೌಲಿಕ ಕೃತಿಗಳ ಕಾರಣಕ್ಕೆ,
ಲೋಹಿಯಾ ಚನ್ನಬಸವಣ್ಣನವರಿಗೆ ಕನ್ನಡ ನಾಡು ಎಂದೆಂದಿಗೂ ಕೃತಜ್ಞವಾಗಿರುತ್ತದೆ.
ಬಿ.ಶ್ರೀನಿವಾಸ