Kannada News | Dinamaanada Hemme | Dinamaana.com | 13-07-2024
ಧಾರ್ಮಿಕ ವಿವಿಧ ಪಂಥಗಳಲ್ಲಿ ಒಡೆದು ಹೋದ ದೇಶದ ಘರ್ಷಣೆ ಕುರಿತು ಇದೇ ಸೀಮೆಯ, ಸಿರುಗುಪ್ಪದ ಕೋಟೆಹಾಳ್ ಸೂಗೂರಿನ ಊರಮುಂದಲ ಹರಿನಾಥ ಬಾಬು ಎಂಬ ಮತ್ತೊಬ್ಬ ಕವಿಯ ಸಾಮಾಜಿಕ ಬೇರುಗಳು ಅವರ ಕವಿತೆಗಳ ಮೂಲಕ ಸ್ಪಷ್ಟವಾಗಿ ಕಾಣುತ್ತವೆ.
ಒಡೆದ ಗುಮ್ಮಟದ ತುಂಬಾ (Harinath Babu)
ಒಟ್ಟಾರೆ ಮನುಷ್ಯನನ್ನು ಮನುಷ್ಯನನ್ನಾಗಿ ನೋಡಬಯಸುವ ಸರಳ ಪ್ರಣಾಳಿಕೆಯುಳ್ಳ ‘ಬೆಳಕ ಹೆಜ್ಜೆಯನರಸಿ’ ಸಂಕಲನದ ಬಹುಮುಖ್ಯವಾದ “ಒಡೆದ ಗುಮ್ಮಟದ ತುಂಬಾ” ಕವಿತೆ, ಕವಿಯ ಆಶಯಗಳನ್ನು ಅನಾವರಣಗೊಳಿಸುತ್ತದೆ.
ಒಂದು ಕಾಲವಿತ್ತು
ಈ ನೆಲದ ಮೂಲೆ ಮೂಲೆಯ
ಮೇಲೆ ಆ ದೇವನ ಪ್ರೀತಿ
ಜಿನುಗಿತ್ತು ಹನಿ ಹನಿ ಅಮೃತವಾಗಿ…
ಎಂದು ಪರಂಪರೆಯನ್ನು ಹೇಳುತ್ತಾ….
ನಿನ್ನೆ ರಾತ್ರಿ ಕತ್ತಲಾಗಿತ್ತು
ಗುಮ್ಮಟದ ಗರ್ಭಗುಡಿಯೊಳಗೆ
ತಲೆಯೊಡೆದ ರಾಮಾ….
ರಕ್ತ ಕೆಂಪೋ ಕೆಂಪು
ಹೆಜ್ಜೆ ಇಟ್ಟಲ್ಲೆಲ್ಲಾ ಕಾಡುವ
ಕಪ್ಪು ಗುರುತು
ಬೆಳ್ಳಿ ಚುಕ್ಕಿಯ ಬೆಳಕಿಗೂ
ಮುಂಚೆ ಹಿಡಿದು ಸೂರ್ಯ
ಬಿಕ್ಕಿ ಬಿಕ್ಕಿ ಅತ್ತದ್ದು
ಯಾರ ಮಡಿಲಿನಲಿ?
ತಬ್ಬಲಿ ಕಂದನೋರ್ವನ
ಅಳುವ ಕಣ್ಣಹನಿ
‘ಇಲ್ಲಿ’ಹುಟ್ಟಿದ ನಾನು
ಹುಟ್ಟಿದ್ದರೆ ‘ಅಲ್ಲಿ’..?
ಆದರೇನಂತೆ ಹೆಸರು
‘ಹಿಂದು-ಮುಂದು’
ಅರಿಯದಿದ್ದರೆ ಮನಸು
ಒಂದನೊಂದು?
ಕವಿತೆಯ ಕೊನೆಯ ಸಾಲುಗಳು ಮಾಂಟೋ ಕತೆಗಳ ಹಾಗೆ ಕಾಡುತ್ತವೆ.ಕೋಮು ಹಿಂಸೆಯ ಕುರಿತಂತೆ ಹಿಂದೂ ಅಥವಾ ಮುಸ್ಲಿಮ್ ಮತೀಯವಾದಿ ವಿವರಣೆಗಳನ್ನು ನಿರಾಕರಿಸಿದ ಮಾಂಟೋ ,ದೇಶವನ್ನು ಗ್ರಹಿಸಿದ ರೀತಿಯಲ್ಲಿ…
ಇಲ್ಲಿ’ಹುಟ್ಟಿದ ನಾನು (Harinath Babu)
ಇಲ್ಲಿ’ಹುಟ್ಟಿದ ನಾನು ..ಹುಟ್ಟಿದ್ದರೆ ‘ಅಲ್ಲಿ’..? ಎಂದು ಕೇಳುತ್ತಾನೆ.ಕೋಮುವಾದ ತಂದ ಎಲ್ಲ ಸಂಕಟಗಳನ್ನೂ ಹೊತ್ತ ಬರೆಹಗಾರರಂತೆ ಕವಿಮಿತ್ರ ಹರಿನಾಥ ಕೂಡ ತಳಮಳಿಸಿದ್ದಾರೆ.
ಇಂಥ ಕಾವ್ಯದಿಂದ -ಚಿಂತನೆಗೆ (Harinath Babu)
ಈಗಲೂ ಕೋಮುದಳ್ಳುರಿಗೆ ಒಳಗಾದ ಕುಟುಂಬಗಳ ರೋದನವನ್ನು ಕೇಳುವಾಗ, ನೋಡುವಾಗ, ಸಂಕಟವಾಗುತ್ತದೆ. ಅವನು ಹಿಂದೂ ಆಗಿದ್ದರೆ …ಮುಸ್ಲಿಮರ ಮೇಲೆ, ಮುಸಲ್ಮಾನನಾಗಿದ್ದರೆ ಹಿಂದೂಗಳ ಮೇಲೆ….ಸಿಟ್ಟುಗೊಳ್ಳುವ ಹಾಗೆ ಮಾಡುವ, ಹೀಗೆ ನಿರಂತರವಾದ ಮಾನಸಿಕ ಕ್ಷೋಭೆಗಳನ್ನು ಸೃಷ್ಟಿಸುವ ಮಾಧ್ಯಮಗಳ ಕ್ಲಿಪ್ಪಿಂಗುಗಳ ಮಧ್ಯೆ ಇಂಥ ಕಾವ್ಯ -ಚಿಂತನೆಗೆ ಹಚ್ಚುತ್ತದೆ.
Read also : ದುಡಿಯುವ ಜನರ ಹನಿ ಬೆವರಿನಲ್ಲಿ ಸೂರ್ಯನನ್ನು ಕಾಣುವ ಕವಿ–ಇಸ್ಮಾಯಿಲ್ ಎಲಿಗಾರ್
ಕೋಮುವಾದಕ್ಕೆ ಬಲಿಯಾದ ಬಹುತೇಕರು ಜನಸಾಮಾನ್ಯರೇ ಆಗಿರುತ್ತಾರೆ .ಕೋಮು ಹಿಂಸೆಯ ಅರ್ಥಹೀನತೆಯನ್ನು ಹೆಚ್ಚಿಸುವ ಹಾಗೆ ತೋರುವ ಇಂದಿನ ಮಾಧ್ಯಮಗಳಿಗೆ ನೈತಿಕ ಜವಾಬ್ದಾರಿ ಇರಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕವಿಗಳ ಕಾವ್ಯದ ಕೂಗು ಪಿಸುಮಾತಿನಂತಿದ್ದರೂ ಬಹುದೂರ ಸಾಗಬಲ್ಲುದು ಎಂಬ ವಿಶ್ವಾಸದಲ್ಲಿ ಕವಿಯಿದ್ದಾನೆ.
ಮಗಳು
ಎಳೆಯ ಮುಗುಳು
ಎದೆಯ ಮೇಲೆ ಮಲಗಿರುವಳು
ಸದ್ದು ಮಾಡಿದ ಎದೆಯ
ಪ್ರಶ್ನಿಸುತ್ತಾಳೆ ಮೆಲ್ಲಗೆ
ಯಾರು ನೀನು?
ಕ್ರೈಸ್ತನೆಂದಿತು
ಸಣ್ಣಗೆ ಕಂಪಿಸಿದಳು
ಮುಸ್ಲಿಮನೆಂದಿತು
ಒಳಗೇ ದುಃಖಿಸಿದಳು
ಹಿಂದುವೆಂದಿತು
ಜೋರಾಗಿ ಅತ್ತುಬಿಟ್ಟಳು!
ಕಣ್ಣೀರಿನಲಿ ತೊಯ್ದ ಹೃದಯ
ಮನುಷ್ಯನೆಂದಿತು
ಮೂಡಿತು ಮುಗ್ಧ ಮುಖದಲಿ
ಬುದ್ಧನ ಬೆಳದಿಂಗಳು
ಬೆಳಕಿನ ಬೀಜ ಬಿತ್ತಿದಳು
(ಮಗಳು ಬರೆದ ಕವಿತೆ)
ಈ ಹೊತ್ತು, ಮೇಲಿನ ಕವಿತೆ ಸೃಷ್ಟಿಸುವ ಆರ್ದ್ರತೆ ಬಹು ಇಷ್ಟವಾಯಿತು.ಕೋಮು ಹಿಂಸೆಯ ಚರಿತ್ರೆ , ಕೋಮುವಾದದ ಡೆಫಿನಿಷನ್ ಗಳೇನೆ ಇರಲಿ, ಹಿಂಸೆಯನ್ನು ಮೊದಲಿಗೆ ಆರಂಭಿಸಿದ್ದು ಯಾರು? ಅದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದು ನಾವು…ಹೀಗೆ ಆದಿ ಅಂತ್ಯವಿಲ್ಲದ ರಕ್ತಸಿಕ್ತ ನಾಳೆಗಳ ಹಾದಿಯ ತುಂಬಾ, ನಾವು ಇದುವರೆಗೇ ಅನೇಕ ಸಾವುಗಳನ್ನು,ನೋವುಗಳನ್ನು ಕಂಡಿದ್ದೇವೆ.
ಆರೋಗ್ಯಕರ ಮನಸ್ಸಿನ ಸಾಕ್ಷಿ ಕವಿತೆ (Harinath Babu)
ಮಗಳು ಎಂಬ ಮುಗ್ಧ ಜೀವವೊಂದರ ರೂಪಕದ ಮೂಲಕ ,ನಾಗರಿಕ ಸಮಾಜವೊಂದರ ಭಾಗವಾದ ಕವಿ ಸೃಷ್ಟಿಸುವ ಆರೋಗ್ಯಕರ ಮನಸ್ಸಿನ ಸಾಕ್ಷಿಯಂತಿದೆ ಕವಿತೆ.
ತತ್ವಗಳು ಕವಿಯ ಸ್ಪಷ್ಟಾತ್ಮಕತೆಗೆ ಮಾರಕವಾಗಬಲ್ಲವು ಎಂದು ಎಲಿಯಟ್ ನ ಮಾತಿನಂತೆ ಇದೇ ನೆಲದ ಹತ್ತು ಹಲವು ಕವಿಗಳು ಜಾಗತೀಕರಣ, ಉದಾರೀಕರಣ , ಕೋಮುವಾದದ ಕುರಿತು ಪುಂಖಾನುಪುಂಖವಾಗಿ ಬರೆದ ಉದಾಹರಣೆಗಳು ಸಾಕಷ್ಟಿವೆ.
ಆ ಕಾಲಕ್ಕೆ , ಕ್ಷಣಕ್ಕೆ ನಿಂತು ಮರೆಯಾದ ಸಾಹಿತ್ಯದ ಕುರಿತು ಯೋಚಿಸುವಾಗಲೆಲ್ಲ ಒಮ್ಮೊಮ್ಮೆ ಕವಿಗೆ ಯಾವ ತತ್ತ್ವಗಳಿಂದಲೂ ಭ್ರಷ್ಟವಾಗದಿದ್ದರೆ ಹೇಗಿರುತ್ತಿತ್ತು? ಎಂದು ಹಲವಾರು ಬಾರಿ ಯೋಚಿಸಿದ್ದೇನೆ.ಆದರೆ ಬಳ್ಳಾರಿ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ಎಡ ಚಳುವಳಿಗಳು ಸೃಷ್ಟಿಸಿದ ಪ್ರಭಾವವಿದೆಯಲ್ಲ ಅದರಿಂದ ಬಿಡಿಸಿಕೊಂಡು ಬರೆದದ್ದು ಕವಿತೆಯೇ ಅಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿ ಹೋಗಿತ್ತು.
ಈ ವಾದ,ಚರ್ಚೆಗಳೆಲ್ಲ ಮುಖ್ಯವಾಹಿನಿಗೆ ಬರಲೇ ಇಲ್ಲ (Harinath Babu)
ಒಂದು ಕವಿತೆ ಓದಿದಾಗ ತಾತ್ವಿಕವಾಗಿಯೂ, ಕಾವ್ಯದ ರಸಪ್ರಜ್ಞೆಯ ದೃಷ್ಟಿಯಿಂದಲೂ ಎದೆ ತಟ್ಟುತ್ತದೆ.ಇದರಿಂದ ಕನ್ನಡ ಕಾವ್ಯ ಲೋಕದ ದಿಗ್ಗಜರು ಎನಿಸಿಕೊಂಡ ಎಷ್ಟೋ ಮಹಾನುಭಾವರು ಈ ಭಾಗದ ಕಾವ್ಯ ಬರೀ ಘೋಷಣೆಗಳು ಎಂದು ಮೂಗುಮುರಿದದ್ದೂ ಉಂಟು. ಅದಕ್ಕೆ ಪರಶುರಾಮ್ ಕಲಾಲರಂತಹ ಹುಟ್ಟು ಹೋರಾಟಗಾರ, ಕವಿ ” ಹೌದು,ನನ್ನ ಘೋಷಣೆಗಳೇ ನನ್ನ ಕಾವ್ಯ “ಎಂದು ಸಮರ್ಥವಾಗಿ ಉತ್ತರಿಸಿದ್ದು ಕೂಡ ಇತ್ತು. ಈ ಮಾತು ಬಹುಕಾಲದವರೆಗೂ ಚರ್ಚಿತವಾಗುವ,ಕನ್ನಡ ಸಾಹಿತ್ಯ ವಲಯದಲ್ಲಿ ವಾಗ್ವಾದಗಳನ್ನು ಸೃಷ್ಟಿಸಬೇಕಾಗಿತ್ತು.ದುರಂತವೆಂದರೆ ಈ ವಾದ,ಚರ್ಚೆಗಳೆಲ್ಲ ಮುಖ್ಯವಾಹಿನಿಗೆ ಬರಲೇ ಇಲ್ಲ.
ಪ್ರಗತಿಪರತೆ ಪ್ರತಿಪಾದನೆ (Harinath Babu)
ಗೆಳೆಯ ಹರಿನಾಥ, ಎಂದಿಗೂ ಎಡಪಂಥೀಯ ಚಳುವಳಿಯಲ್ಲಿ ನೇರವಾಗಿ ಧುಮುಕಿದವರಲ್ಲ.ಹಾಗೆಂದ ಮಾತ್ರಕ್ಕೆ ಕವಿಯ ಧೋರಣೆ ಬಲಪಂಥೀಯವಾದುದು ಎಂಬ ಸಾರಾಸಗಟು ನಿರಾಕರಣೆ ಮಾಡದಂತೆ ಅವರ ಕವಿತೆಗಳು,ಮಾತುಕತೆಗಳು,ಅವರ ಪ್ರಗತಿಪರತೆಯನ್ನು ಮತ್ತೆ ಮತ್ತೆ ಪ್ರತಿಪಾದಿಸುತ್ತಲೇ ಬಂದಿವೆ.ಇಲ್ಲಿನ (ಬೆಳಕ ಹೆಜ್ಜೆಯನರಸಿ ಸಂಕಲನದ)ಯಾವ ಕವನಗಳೂ ದೀರ್ಘವಾಗಿ ಕಾವ್ಯದ ಭಾರಕ್ಕೆ ಸೋತಿಲ್ಲ.
ಎಸ್.ಎಸ್.ಹಿರೇಮಠ,ಪೀರ್ ಬಾಷಾ,ಬಡಿಗೇರ,ಪಿ.ಆರ್.ವೆಂಕಟೇಶ,ಹುರಕಡ್ಲಿ ಶಿವಕುಮಾರ, ಮೇಟಿ ಕೊಟ್ರಪ್ಪ, ಹುಲಿಕಟ್ಟಿ ಚನ್ನಬಸಪ್ಪ,ಇಸ್ಮಾಯಿಲ್ ಎಲಿಗಾರ್, ಶೇಷಗಿರಿ ಹವಾಲ್ದಾರ್, ಅಂಗಡಿ ಸುರೇಶ್, ವೀರೇಂದ್ರ ರಾವಿಹಾಳ್., ಲಪಾಟಿ ಖಾದರ್ ಬಾಷ…ಹೀಗೆ ಈ ಲೇಖಕ ಮಿತ್ರರನ್ನೆಲ್ಲ ಒಟ್ಟಿಗೆ ಕಲೆಹಾಕಿ ನೋಡಲಾಗಿ,ಇಲ್ಲಿನ ಕೆಲವರು ಸಮಾಜದ ಕ್ರಾಂತಿಗೆ ಬದ್ಧರಾಗಿದ್ದರೆ ಮತ್ತೂ ಕೆಲವರು ಜೀವನದ ಸಾಧ್ಯತೆಗಳೇನು ಎಂಬಂಥ ವಾಸ್ತವದ ನೆಲೆಗೆ ಬದ್ಧರಾಗಿರುವಂತೆ ಕಾಣಿಸುತ್ತಾರೆ.
ಕವನಗಳನ್ನು ಪಾರು ಮಾಡುವ ಸಾಹಸಕ್ಕೂ ಕೈ ಹಾಕಲಾರೆ (Harinath Babu)
ಇಲ್ಲಿನ ಲೇಖಕರೂ ಮನುಷ್ಯರೆ ಅಲ್ಲವೆ?ಅದಕ್ಕೆಂದೇ ಮನುಷ್ಯ ಸಾಹಿತ್ಯೇತರವಾದಿ ಘನ ಉದ್ದೇಶವೊಂದರ ಈಡೇರಿಕೆಗಾಗಿ ಪೆನ್ನು ಹಿಡಿದು ಕುಳಿತ ಚಳುವಳಿಗಾರರಂತೆ ಕಾಣುತ್ತಾರೆ.ಹಾಗಂತ ಇಲ್ಲಿ ನಾನು,ಕವಿಯಿಂದ ಕವನಗಳನ್ನು ಪಾರು ಮಾಡುವ ಸಾಹಸಕ್ಕೂ ಕೈ ಹಾಕಲಾರೆ.
ಸನ್ನಿವೇಶಗಳು ಸದಾ ಬದಲಾಗುತ್ತಿರುತ್ತವೆ. ನಿನ್ನೆ ವಿರೋಧಿಸುತ್ತಿದ್ದ ಉದಾರೀಕರಣವನ್ನೇ ನಾವೀಗ ಒಪ್ಪಿಕೊಂಡಿದ್ದೇವೆ. ಜಾಗತೀಕರಣವನ್ನೂ ಒಪ್ಪಿದ್ದೇವೆ.ಆಯಾ ಕಾಲಘಟ್ಟದಲ್ಲಿ ಒಪ್ಪಿದ್ದರೆ ಆತ್ಮವಂಚನೆಯ ದಾಳಿಗೆ ಒಳಗಾದವರಂತೆ ಕಾಣಿಸಬಹುದಾಗಿದ್ದವರೆಲ್ಲರೂ ಬರೆದ ಕವಿತೆಗಳನ್ನು ಈಗ ಓದಿಕೊಳ್ಳಲಿ. ಯಾವ ಹೊರಗಿನ ಪ್ರಭಾವಗಳೂ ಇಲ್ಲದೆ ತನ್ನೊಳಗೆ ತನ್ನತನವನ್ನು ಸಾಧಿಸಿಕೊಂಡು ಬದುಕಿ, ಬರೆಯುವುದು ಎಷ್ಟು ಕಷ್ಟ!…ಬುದ್ಧ,ಬಸವಣ್ಣ,ಗಾಂಧಿಯವರಿಗೆ ಇದು ಸಾಧ್ಯವಾಯಿತು.
ತಬ್ಬಲಿ ಕಂದನೋರ್ವನ
ಅಳುವ ಕಣ್ಣಹನಿ ಕೇಳಿತು
‘ ಇಲ್ಲಿ’ಹುಟ್ಟಿದ ನಾನು
ಹುಟ್ಟಿದ್ದರೆ ‘ಅಲ್ಲಿ’…?
ಈ ಕವಿತೆಯ ಸಾಲುಗಳು ನನಗೆ ಮಾಂಟೋನ ಹುಚ್ಚಾಸ್ಪತ್ರೆಯಲ್ಲಿ ಭಾರತ -ಪಾಕಿಸ್ತಾನ ಎಂಬ ಎರಡು ದೇಶಗಳು ಹುಟ್ಟಿಕೊಂಡಿದ್ದು ನೆನಪಾಯಿತು.ಕೋಮು ಹಿಂಸೆಯ ಕುರಿತು ಆತ,ಹಿಂದೂ ಅಥವಾ ಮುಸ್ಲಿಮ್ ಮತೀಯವಾದಿ ವಿವರಣೆಗಳನ್ನು ಹೇಗೆ ಒಪ್ಪಿಕೊಳ್ಳಲ್ಲಿಲ್ಲವೋ…
ಹಾಗೆಯೇ ಆತನ ಕತೆಗಳಲ್ಲಿ ಹಿಂದೂ, ಮುಸ್ಲಿಮ್ ಹೆಸರುಗಳನ್ನು ಅದಲು- ಬದಲು ಮಾಡಿದರೆ ಕತೆಯಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ.ಕೋಮುವಾದವನ್ನು ಸಿದ್ಧಾಂತದ ಮೂಲಕ ಗ್ರಹಿಸದೆ , ಭಯ , ಏಕಾಂಗಿತನದ ಸಂಕಟಗಳ ಮೂಲಕ ಗ್ರಹಿಸಿದ.
ಅಂತೆಯೇ ಹರಿನಾಥ ಬಾಬು,
ಆದರೇನಂತೆ ಹೆಸರು
ಹಿಂದು-ಮುಂದು
ಅರಿಯದಿದ್ದರೆ ಮನಸು
ಒಂದನೊಂದು?
ಎಂದು ಮನದ ತಲ್ಲಣವನ್ನು ಹೊರಹಾಕುತ್ತಾರೆ.
ಪ್ರಸ್ತುತ ಗದುಗಿನ ಖಜಾನೆ ಇಲಾಖೆಯ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಹರಿನಾಥ ಬಾಬು , ತನ್ನ ಚಿಂತನೆಗಳಲ್ಲಿ ಯಾವತ್ತೂ ಕೂಡ ಮನುಷ್ಯಪರತೆಯನ್ನು ಬಿಟ್ಟುಕೊಟ್ಟಿಲ್ಲ. ಅವರೊಳಗಿನ ಜೀವಪಸೆ , ಕಾವ್ಯಪಸೆ….ಮಾನವೀಯ ಗುಣ ಎಂದಿಗೂ ಆರದಿರಲಿ ಎಂದು ಹಾರೈಸುವೆ.
ಬಿ.ಶ್ರೀನಿವಾಸ ದಾವಣಗೆರೆ