ದಾವಣಗೆರೆ : ನಗರದ ಅಮರ ಜವಾನ್ ಪಾರ್ಕ್‍ನಲ್ಲಿ ಜಿಲ್ಲಾ ಕಾಂಗ್ರೆಸ್‍ನಿಂದ ಕ್ವಿಟ್ ಇಂಡಿಯಾ ಚಳವಳಿ ಪ್ರಯುಕ್ತ ಕ್ರಾಂತಿ ಜ್ಯೋತಿ ದಿನಾಚರಣೆ ಕಾರ್ಯಕ್ರಮ ನಡೆಯಿತು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಶೆಟ್ಟಿ ಮಾತನಾಡಿ, ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಚಳವಳಿಯು ಒಂದು ಅಸಹಕಾರ ಚಳವಳಿಯಾಗಿದ್ದು, ಆಗಸ್ಟ್ 1942ರಲ್ಲಿ ಮಹಾತ್ಮ ಗಾಂಧಿಯವರ ಮುಂದಾಳತ್ವದಲ್ಲಿ ಆರಂಭವಾದ ಈ ಚಳವಳಿ ದಾವಣಗೆರೆಯಲ್ಲಿ ದೊಡ್ಡಮಟ್ಟದಲ್ಲಿ ನಡೆದು, ಆರು ಮಂದಿ ಹುತಾತ್ಮರಾದರು ಎಂದರು.
ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಮಾಡು ಇಲ್ಲವೆ ಮಡಿ ಎಂಬ ಘೋಷಣೆಯೊಂದಿಗೆ ಪ್ರಾರಂಭವಾದ ಈ ಚಳವಳಿಯಿಂದ ದೇಶದಲ್ಲಿ ಆರಾಜಕತೆ ಸೃಷ್ಟಿಯಾಗಿ ಬ್ರಿಟಿಷರು ಹೆದರಿ ಬಹುತೇಕ ಕಾಂಗ್ರೆಸ್ ನಾಯಕರನ್ನು ಬಂಧಿಸಿದರು ಎಂದರು.
Read also : ಎರಡನೇ ವಂದೇ ಭಾರತ್ ಎಕ್ಸ್‍ಪ್ರೆಸ್‍ಗೆ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್ ಹಸಿರು ನಿಶಾನೆ
ಮುಖಂಡ ಸೋಗಿ ಶಾಂತಕುಮಾರ್ ಮಾತನಾಡಿ, ಮುಂಬಯಿ ಅಧಿವೇಶನದಲ್ಲಿ ಭಾರತ ಬಿಟ್ಟು ತೊಲಗಿ ಎಂಬ ಗೊತ್ತುವಳಿಯನ್ನು ಹೊರಡಿಸಿದ ನಂತರ ದೇಶದ ಹಲವು ಕಡೆಗಳಲ್ಲಿ ಹೋರಾಟ ಆರಂಭವಾಯಿತು. ದಾವಣಗೆರೆಯಲ್ಲಿಯೂ ನಾಗರಿಕರು ಚಳವಳಿ ನಡೆಸಿದರು.
ಆಗ ಬ್ರಿಟಿಷರು ನಡೆಸಿದ ಗುಂಡಿನ ದಾಳಿಗೆ ದಾವಣಗೆರೆಯ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಮಾಗಾನಹಳ್ಳಿ ಹನುಮಂತಪ್ಪನವರು ಹುತಾತ್ಮರಾದರು. ಅವರ ನೆನಪಿಗಾಗಿ ಮಹಾನಗರ ಪಾಲಿಕೆ ಮುಂಭಾಗ ಸ್ಮಾರಕ ನಿರ್ಮಿಸಲಾಗಿದೆ ಎಂದರು.
ಮಾಜಿ ಯೋಧ ಮಂಜಾನಾಯ್ಕ, ವಕೀಲರ ವಿಭಾಗದ ಜಿಲ್ಲಾಧ್ಯಕ್ಷ ಪ್ರಕಾಶ್ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಾಗರ್ ಎಲ್ ಎಂಎಚ್, ಕಂಚಿಕೇರೆ ಕೊಟ್ರೇಶ್, ಎಚ್. ಜಯಣ್ಣ ನಂಜಾನಾಯ್ಕ, ಮೈನುದ್ದೀನ್, ಹರೀಶ್, ಲಿಯಾಖತ್ ಆಲಿ, ಆಲಿ ಅಕ್ಟರ್, ಮಲ್ಲೇಶ್, ಸೈಯದ್ ಜಿಕ್ರಿಯಾ, ಭಾಗ್ಯಶ್ರೀ, ಗೀತಾ ಚಂದ್ರಶೇಖರ್, ಶುಭಮಂಗಳ ಸೇರಿದಂತೆ ಇತರರು ಇದ್ದರು.