ಬೆಂಗಳೂರು/ ದಾವಣಗೆರೆ : ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಸತತ ಪ್ರಯತ್ನದಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣದ ನಿವೇಶನ ಖರೀದಿಗೆ ಸರ್ಕಾರದಿಂದ ರೂ.78.75 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ.
2012 ರಲ್ಲಿ ದಾವಣಗೆರೆ ಜಿಲ್ಲಾಧಿಕಾರಿಗಳ ಖಾತೆಗೆ ಭವನ ನಿರ್ಮಾಣದ ಹಿನ್ನಲೆ ಮೊದಲ ಕಂತಿನಲ್ಲಿನ 150 ಲಕ್ಷ ರೂಪಾಯಿ ಮೊತ್ತವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿತ್ತು. ಸಮಾಜ ಕಲ್ಯಾಣ ಇಲಾಖೆಯಿಂದ 3 ಕೋಟಿ ಹಾಗೂ ದಾವಣಗೆರೆ ಮಹಾನಗರ ಪಾಲಿಕೆಯಿಂದ 2 ಕೋಟಿ ಸೇರಿ ಒಟ್ಟು 5 ಕೋಟಿ ವೆಚ್ಚದಲ್ಲಿ ಈ ಹಿಂದೆ ಶಿರಮಗೊಂಡನಹಳ್ಳಿ ಬಡಾವಣೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಿದ್ದತೆ ನಡೆಸಲಾಗಿತ್ತು. ಆದರೆ ಅಲ್ಲಿ ಭವನ ನಿರ್ಮಾಣಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ಭವನ ನಿರ್ಮಾಣದ ಕಾರ್ಯವನ್ನು ಕೈ ಬಿಡಲಾಗಿತ್ತು. ಬಳಿಕ ಭವನ ನಿರ್ಮಾಣಕ್ಕೆ ನಿವೇಶನ ಹುಡುಕಾಟ ನಡೆಸಿದ್ದು ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಸತತ ಪ್ರಯತ್ನದಿಂದ ನಿವೇಶನದ ಸಮಸ್ಯೆ ನಿವಾರಣೆಯಾಗಿದೆ.
Read also : ವಕ್ಫ್ ತಿದ್ದುಪಡಿ ಕಾಯ್ದೆ ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ದವಾಗಿದೆ : ದಾವಣಗೆರೆ ಮುಸ್ಲಿಂ ಒಕ್ಕೂಟ
ರಾಷ್ಟ್ರೀಯ ಹೆದ್ದಾರಿಯ ಸರ್ಕ್ಯೂಟ್ ಹೌಸ್ ಹತ್ತಿರದ ಡಿಸಿಸಿ ಬ್ಯಾಂಕ್ ವಶದಲ್ಲಿರುವ 20 ಗುಂಟೆ ಭೂಮಿಯಲ್ಲಿ ಭವನ ನಿರ್ಮಾಣಕ್ಕೆ ತಿರ್ಮಾನಿಸಲಾಗಿದ್ದು ನಿವೇಶನ ಖರೀದಿಗೆ ಏ.5-04-2025 ರಂದು ರೂ. 78.75 ಲಕ್ಷ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಏ.14 ರಂದು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ
ಸರ್ಕಾರದಿಂದ ಅಂಬೇಡ್ಕರ್ ಭವನ ನಿರ್ಮಾಣದ ನಿವೇಶನ ಖರೀದಿಗೆ ಹಣ ಬಿಡುಗಡೆಯಾಗಿ ಸಮಸ್ಯೆ ಇತ್ಯರ್ಥವಾಗಿರುವುದರಿಂದ ಏ.14 ರ ಅಂಬೇಡ್ಕರ್ ಜಯಂತಿಯಂದು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ಅವರಿಂದ ಶಂಕುಸ್ಥಾಪನೆ ನೆರವೇರಲಿದೆ. ನೂತನ ಭವನ ನಿರ್ಮಾಣವಾಗುತ್ತಿರುವುದಕ್ಕೆ ಜಿಲ್ಲೆಯ ಎಲ್ಲಾ ದಲಿತ ಸಂಘರ್ಷ ಸಮಿತಿಯವರು, ಹೋರಾಟಗಾರರು, ವಿವಿಧ ಸಂಘ ಸಂಸ್ಥೆಯವರು, ಅಂಬೇಡ್ಕರ್ ಅಭಿಮಾನಿಗಳು ಹರ್ಷಗೊಂಡಿದ್ದಾರೆ. ದಶಕಗಳ ಹೋರಾಟದ ಬಳಿಕ ಜಿಲ್ಲೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗುವುದಕ್ಕೆ ಸರ್ವರು ಸಂತಸ ವ್ಯಕ್ತಪಡಿಸಿದ್ದಾರೆ.