ದಾವಣಗೆರೆ ನ.15 (Davanagere) : ಅಪಘಾತಗಳ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ಜಿಲ್ಲೆಯಲ್ಲಿನ ರಸ್ತೆಗಳ ದುರಸ್ತಿ, ಸುಧಾರಣೆಗೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ. ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಅಳವಡಿಸಲಾಗಿರುವ ತಡೆಗಳಿಂದ ಅಪಘಾತಗಳು ಸಂಭವಿಸುತ್ತಿರುವ ಹಿನ್ನಲೆಯಲ್ಲಿ ಅಂತಹ ಸ್ಥಳಗಳನ್ನು ಗುರುತಿಸಿ ಕೂಡಲೆ ತೆರವುಗೊಳಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಆಯಾ ಪೋಲೀಸ್ ಠಾಣೆಯ ಅಧಿಕಾರಿಗಳೊಂದಿಗೆ ಜಂಟಿ ಪರಿವೀಕ್ಷಣೆಯನ್ನು ಮಾಡಿ ಅವಶ್ಯಕತೆ ಇದ್ದರೆ, ವೈಜ್ಞಾನಿಕ ವೇಗತಡೆಗಳನ್ನು ಅಳವಡಿಸಿ ಸೂಕ್ತ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದರು.
ಜಿಲ್ಲಾ ವ್ಯಾಪ್ತಿಯಲ್ಲಿ ವೈಜ್ಞಾನಿಕ ವೇಗತಡೆಗಳಿಗೆ ಥರ್ಮೋಪ್ಲಾಸ್ಟಿಕ್ ಬಣ್ಣವನ್ನು ಅಳವಡಿಸುವುದರ ಜೊತೆಗೆ ವೇಗತಡೆ ಗೋಚರಿಸುವಂತೆ ರೋಡ್ ಸ್ಟಡ್‍ಗಳನ್ನು ಅಳವಡಿಸುವುದು ಮತ್ತು ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.
ದಾವಣಗೆರೆ ಜಿಲ್ಲಾ ವ್ಯಾಪ್ತಿಯ ತಾಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಗಳಿಗೆ ಸಂಪರ್ಕಿಸುವ ಎಲ್ಲಾ ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಹೆಚ್ಚು ಮಳೆಯ ಆದ ಪರಿಣಾಮ ರಸ್ತೆಗಳು ಕಿತ್ತು ಹೋಗಿರುವುದು ಹಾಗೂ ಕೆಲವು ಸ್ಥಳಗಳಲ್ಲಿ ಗುಂಡಿಗಳು ಸಹ ನಿರ್ಮಾಣವಾಗಿದ್ದು. ಇದರಿಂದ ರಸ್ತೆ ಬಳಕೆದಾರರಾದ ಅದರಲ್ಲೂ ದ್ವಿಚಕ್ರ ವಾಹನ ಸವಾರರು ಹೆಚ್ಚಾಗಿ ಲಘು ಅಪಘಾತಗಳು, ಇಲ್ಲವೇ ಮಾರಣಾಂತಿಕ ಅಪಘಾತಗಳು ಅಗುವುದಕ್ಕೆ ಕಾರಣವಾಗಿರುತ್ತದೆ. ಆದ್ದರಿಂದ ಸಂಬಂಧಪಟ್ಟ ಆಯಾ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಅಗತ್ಯ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಎಂದು ತಿಳಿಸಿದರು.
ನಗರದಲ್ಲಿ ಸಂಚರಿಸುವ ಆಟೋರಿಕ್ಷಾ ವಾಹನಗಳಿಗೆ ಕಡ್ಡಾಯವಾಗಿ ಬಾಡಿಗೆ ದರ ಪಡೆಯಲು ಮೀಟರ್‍ನ್ನು ಅಳವಡಿಸಬೇಕು. ಅದೇ ರೀತಿ ಆಟೋರಿಕ್ಷಾ ಚಾಲಕನ ಸೀಟ್ ಹಿಂಭಾಗದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಾಹನ ಮತ್ತು ಚಾಲನಾ ಹಾಗೂ ಮಾಲೀಕರ ಪೂರ್ಣ ಮಾಹಿತಿಯನ್ನು ಒಳಗೊಂಡ ಮಾಹಿತಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು. ಒಂದು ವೇಳೆ ಕಾನೂನು, ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಅವರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಲು ಸೂಚಿಸಿ ಅನಧಿಕೃತ ಆಟೋ ಸ್ಟಾಂಡ್‍ಗಳನ್ನು ತೆರವುಗೊಳಿಸಬೇಕು ತಿಳಿಸಿದರು.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಹರಿಹರ ನಗರದಲ್ಲಿ ಅಪಘಾತಗಳು ಸಂಭವಿಸುತ್ತಿರುವ ಹಿನ್ನಲೆಯಲ್ಲಿ ಹರಿಹರ ನಗರಸಭೆಯವತಿಯಿಂದ ಹಾಗೂ ಸುಗಮ ಸಂಚಾರಕ್ಕೆ ಬೇಕಾಗುವ ಸಿಗ್ನಲ್ ಲೈಟ್ಸ್, ಸಿಸಿ ಕ್ಯಾಮೆರಾ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಜಯ್‍ಕುಮಾರ್ ಎಂ.ಸಂತೋಷ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕರಾದ ವೀರೇಶ್, ಇಂಜಿನಿಯರ್ಸ್ , ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Read also : Davanagere | ಚಲಿಸುವ ರೈಲಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದ ವೃದ್ಧನ ಪ್ರಾಣ ರಕ್ಷಿಸಿದ ರೈಲ್ವೆ ಸಿಬ್ಬಂದಿ