ಬೆಂಗಳೂರು ಮಾ 23: ನಾವು ಬಿಜೆಪಿಯವರಂತೆ ಕೇವಲ ಭಾವನಾತ್ಮಕವಾಗಿ ಕೆರಳಿಸಿ ನಿಮ್ಮ ಕೈಬಿಡಲ್ಲ-ಬಿಜೆಪಿಯವರಂತೆ ಸುಳ್ಳು ಹೇಳಲ್ಲ. ನಿಮ್ಮ ಬದುಕಿಗೆ ಸ್ಪಂದಿಸುತ್ತೇವೆ ಎಂದು ಸಿ.ಎಂ.ಸಿದ್ದರಾಮಯ್ಯ ನುಡಿದರು.
KPCC ಕಚೇರಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ, ಜಿಲ್ಲೆ, ತಾಲ್ಲೂಕು ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಸಮಾವೇಶದಲ್ಲಿ ಮಾತನಾಡಿದರು.
ಅಚ್ಛೆ ದಿನ್ ಬಂತಾ? ರೈತರ ಆದಾಯ ದುಪ್ಪಟ್ಟು ಮಾಡಿದ್ರಾ?
ಅಚ್ಛೆ ದಿನ್ ಬಂತಾ? ರೈತರ ಆದಾಯ ದುಪ್ಪಟ್ಟು ಮಾಡಿದ್ರಾ? ಡೀಸೆಲ್-ಪೆಟ್ರೋಲ್-ಗ್ಯಾಸ್ ಬೆಲೆ ಕಡಿಮೆ ಮಾಡ್ತೀವಿ ಅಂದ್ರು ಮಾಡಿದ್ರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸ್ತೀವಿ ಅಂದ್ರು ಸೃಷ್ಟಿಸಿದ್ರಾ? ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದ್ರು ಹಾಕಿದ್ರಾ? ಎಂದು ಪ್ರಧಾನಿ ನರೇಂದ್ರ ಮೋದಿಯವರ ಆಶ್ವಾಸನೆಗಳ ಸರಣಿ ಸುಳ್ಳುಗಳನ್ನು ಪಟ್ಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ಹೆಚ್ಚು ಸುಳ್ಳು ಹೇಳಿದವರು ಮೋದಿ
ಭಾರತದ ಪ್ರಧಾನಿಗಳಲ್ಲಿ ಅತ್ಯಂತ ಹೆಚ್ಚು ಸುಳ್ಳು ಹೇಳಿದವರು ಪ್ರಧಾನಿ ಮೋದಿ. ಈಗ ನಮ್ಮ ಗ್ಯಾರಂಟಿಗಳನ್ನು ಕದ್ದು ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೆಸರಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಗ್ಯಾರಂಟಿ ಯೋಜನೆ ಎಲ್ಲರಿಗೂ ಸೇರಿದ್ದು
ನಮ್ಮ ಗ್ಯಾರಂಟಿ ಯೋಜನೆಗಳು ಎಲ್ಲಾ ಧರ್ಮ, ಎಲ್ಲಾ ಜಾತಿ, ಎಲ್ಲಾ ವರ್ಗದವರಿಗೆ ಸೇರಿವೆ. ಸರ್ವರನ್ನೂ ಸಮಾನವಾಗಿ ಕಾಣುವ ಕಾರ್ಯಕ್ರಮಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ರೂಪಿಸುತ್ತಿದೆ. ಜಾರಿ ಮಾಡುತ್ತಿದೆ. ಇವೆಲ್ಲವನ್ನೂ ನೀವುಗಳು ನಾಡಿನ ಜನರಿಗೆ ಸರಿಯಾಗಿ ಅರ್ಥ ಮಾಡಿಸಿ ಬಿಜೆಪಿಯ ಸುಳ್ಳುಗಳಿಗೆ ತಕ್ಕ ಸತ್ಯದ ದಾಖಲೆಗಳನ್ನು ಮಂಡಿಸಿ ಎಂದು ಕರೆ ನೀಡಿದರು.
ಗ್ಯಾರಂಟಿಗಳಿ ಂದ ಆರ್ಥಿಕ, ಸಾಮಾಜಿಕ ಶಕ್ತಿ
ನಮ್ಮ ಕಾಂಗ್ರೆಸ್ ಸರ್ಕಾರ. ನಮ್ಮ ಸರ್ಕಾರದ ಗ್ಯಾರಂಟಿಗಳನ್ನು, ನಮ್ಮ ಸಾಧನೆಗಳನ್ನು ಬಿಜೆಪಿ ಸಾಧನೆ ಎಂದು ಹಳ್ಳಿ ಹಳ್ಳಿಗಳಲ್ಲಿ ಅವರು ನಿರಂತರವಾಗಿ ,ನಿರ್ಲಜ್ಜದಿಂದ ಸುಳ್ಳು ಹೇಳುತ್ತಿದ್ದಾರೆ. ಹೀಗಾಗಿ ನಾಡಿನ ಜನರ ಜೇಬಿಗೆ, ಮಹಿಳೆಯರ ಖಾತೆಗೆ ಹಣ ಹಾಕುತ್ತಿರುವುದು ನಮ್ಮ ಕಾಂಗ್ರೆಸ್ ಸರ್ಕಾರ. ನಮ್ಮ ನಾಡಿನ ಜನತೆಗೆ, ಮಹಿಳೆಯರಿಗೆ, ಯುವ ಸಮೂಹಕ್ಕೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುತ್ತಿರುವುದು ನಮ್ಮ ಕಾಂಗ್ರೆಸ್ ಸರ್ಕಾರ. ಆದರೆ ಬಿಜೆಪಿಯವರು ಮಾಮೂಲಿಯಂತೆ ಸುಳ್ಳು ಹೇಳುತ್ತಾ ನಮ್ಮ ಕಾರ್ಯಕ್ರಮಗಳನ್ನು ಅವರ ಕಾರ್ಯಕ್ರಮ ಎಂದು ಹೇಳಿಕೊಳ್ಳುವ ಅಪಾಯ ಇದೆ. ಈ ಸುಳ್ಳುಗಳನ್ನು ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳು ಸಮರ್ಥವಾಗಿ ಎದುರಿಸಿ ಜನರಿಗೆ ಸತ್ಯ ತಿಳಿಸಿ ಎಂದು ಕರೆ ನೀಡಿದರು.
ಕೇಂದ್ರದಿಂದ ಅನುದಾನದಲ್ಲಿ ಅನ್ಯಾಯ
ಕರ್ನಾಟಕ ರಾಜ್ಯದಿಂದ ನಾವು 4 ಲಕ್ಷದ 50 ಸಾವಿರ ಕೋಟಿ ತೆರಿಗೆಯನ್ನು ಕೇಂದ್ರಕ್ಕೆ ಕಟ್ಟುತ್ತೇವೆ. ಆದರೆ, ಕೇಂದ್ರ ವಾಪಾಸ್ ರಾಜ್ಯಕ್ಕೆ ವಾಪಾಸ್ ಕೊಡುತ್ತಿರುವುದು ಕೇವಲ 50 ಸಾವಿರ ಕೋಟಿ. ಈ ಅನ್ಯಾಯವನ್ನೇ ನ್ಯಾಯ ಎಂದು ಬಿಜೆಪಿ-ಜೆಡಿಎಸ್ ನವರು ಡ್ಯಾನ್ಸ್ ಮಾಡುತ್ತಿದ್ದಾರೆ. ಆದರೆ ನೀವುಗಳು ಬಿಜೆಪಿ-ಜೆಡಿಎಸ್ ನವರು ಅನ್ಯಾಯವನ್ನು ಬೆಂಬಲಿಸುತ್ತಿರುವುದನ್ನು ನಮ್ಮ ನಾಡಿನ ಜನರಿಗೆ ಅರ್ಥ ಮಾಡಿಸಿ ಎಂದು ಕರೆ ನೀಡಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿ.ಸಿಎಂ ಡಿ.ಕೆ.ಶಿವಕುಮಾರ್, ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರಾದ ಹೆಚ್.ಎಂ.ರೇವಣ್ಣ, ಉಪಾಧ್ಯಕ್ಷರಾದ ಪುಷ್ಪ ಅಮರನಾಥ್, ಸೂರಜ್ ಹೆಗ್ಡೆ, ಮೆಹರೋಜ್ ಖಾನ್, ಬಿಬಿಎಂಪಿ ವ್ಯಾಪ್ತಿಯ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಿ.ಕೃಷ್ಣಪ್ಪ ಉಪಸ್ಥಿತರಿದ್ದರು.