ಹರಿಹರ: ದಲಿತರು ಹಾಗೂ ಮಹಿಳೆಯರ ಪರ ಧ್ವನಿ ಎತ್ತಿದ ಡಾ.ಬಿ.ಆರ್.ಅಂಬೇಡ್ಕರ್ ನಿಜವಾದ ರಾಷ್ಟ್ರೀಯವಾದಿ ನಾಯಕ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಎಚ್.ಮಲ್ಲೇಶ್ ಹೇಳಿದರು.
ಹರಿಹರದ ಜೈಭೀಮನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯರಲ್ಲಿ ಗಣನೀಯ ಸಂಖ್ಯೆಯ ಜನ ಸಮುದಾಯವಾದ ದಲಿತರು ಹಾಗೂ ಮಹಿಳೆಯರು ಮುಖ್ಯವಾಹಿನಿಯಿಂದ ಹೊರಗಿದ್ದರೆ ದೇಶ ಸಶಕ್ತವಾಗದು ಎಂಬ ಸತ್ಯ ಅರಿತು ಶೋಷಣೆಯನ್ನು ದೇಶದ ನೆಲದಿಂದ ಹೊರಗಟ್ಟುವ ಕೆಲಸವನ್ನು ಅಂಬೇಡ್ಕರ್ ಮಾಡಿದರು.
ಸವರ್ಣೀಯ ರಾಜಕೀಯ ನಾಯಕರು ದೇಶಕ್ಕೆ ಸಂಬಂಧಿತ ಅನ್ಯ ವಿಷಯಗಳಲ್ಲಿ ವ್ಯಸ್ತರಾಗಿದ್ದರೆ, ಅಂಬೇಡ್ಕರ್‍ರವರು ಮಾತ್ರ ಶೋಷಣೆ ಮುಕ್ತ ದೇಶ ಸೃಷ್ಟಿಸಲು ಸಾದ್ಯವೆಂಬ ನಿರ್ಧಾರಕ್ಕೆ ಬಂದು, ದಲಿತರು ಹಾಗೂ ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ಕೊಡಿಸುವ ಕಾನೂನುಗಳ ರಚಿಸಿದ ಖ್ಯಾತಿ ಅಂಬೇಡ್ಕರ್‍ರಿಗೆ ಸಲ್ಲುತ್ತದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಪ್ರಭು ಪೂಜಾರ್ ಮಾತನಾಡಿ, ಅಂಬೇಡ್ಕರ್‍ರವರು ನಮಗೆ ಹಕ್ಕುಗಳನ್ನು ನೀಡಿದಂತೆಯೆ ಜವಾಬ್ದಾರಿಗಳನ್ನು ವಹಿಸಿದ್ದಾರೆ. ಹಕ್ಕುಗಳನ್ನು ಪಡೆದು ಅಭಿವೃದ್ಧಿ ಸಾಧಿಸಿರುವ ನಾವುಗಳು ನಮ್ಮ ಜವಾಬ್ದಾರಿಗಳನ್ನೂ ಸಮಪರ್ಕವಾಗಿ ನಿರ್ವಹಿಸಬೇಕೆಂದರು.
ಗುತ್ತಿಗೆದಾರ ಜಗದೀಶ್ ಜಾಧವ್, ಪತ್ರಕರ್ತ ಎಚ್.ಸುಧಾಕರ, ಆಂಜನೇಯ ಸಾರಥಿ, ರಮೇಶ್, ಗುಣ್ಣೆ ಬಸವರಾಜ್, ದುಗ್ಗತ್ತಿ ಬಸವರಾಜ್, ಕಿರಣ್, ರವಿ, ಚಂದ್ರಮ್ಮ, ದುರ್ಗಮ್ಮ, ರೇಣುಕಮ್ಮ, ಅನಿತಾ, ಕವಿತಾ, ಶಾರದಮ್ಮ, ದುಗ್ಗತ್ತಿ ಹಾಲಮ್ಮ ಹಾಗೂ ಇತರರಿದ್ದರು.