ದಾವಣಗೆರೆ.ಜ.8: ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಸಾಮಾಜಿಕ ಕಳಕಳಿ, ಜನಪರವಾದ ಆಲೋಚನೆ ಇತ್ತು. ಏನಾದರೂ ಹೇಳುವುದಿದ್ದರೆ ನೇರವಾಗಿ ಹೇಳುತ್ತಿದ್ದರು. ಆದರೆ ಎಂದೂ ಕೂಡ ಆತ್ಮವಂಚನೆ ಮಾಡಿಕೊಂಡವರಲ್ಲ ಎಂದು
ತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.
ತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಾಮನೂರು ಶಿವಶಂಕರಪ್ಪ ಬೇರೆಯವರನ್ನು ತುಳಿಯುವ ಕಾರ್ಯವನ್ನು ಎಂದೂ ಮಾಡಲಿಲ್ಲ. ಅವರೂ ನಮ್ಮವರು, ಇವರೂ ನಮ್ಮವರು. ಎಲ್ಲರೂ ಮೇಲೆ ಬರಲಿ ಎನ್ನುವಂತಹ ಹೃದಯ ವೈಶಾಲ್ಯತೆ ಬೆಳೆಸಿಕೊಂಡಿದ್ದರು. ಎಂದೂ ಕೂಡ ಮತ್ತೊಬ್ಬರ ಬಗ್ಗೆ ಲೇವಡಿ ಮಾಡುವುದು, ಹಗುರವಾಗಿ ಮಾತನಾಡುವುದನ್ನು ಮಾಡಲಿಲ್ಲ. ನೇರವಾಗಿಯೇ ಹೇಳುತ್ತಿದ್ದರು. ಆದರೆ ಇಂದು ಅಂತಹ ಜನ ತುಂಬಾ ಕಡಿಮೆಯಾಗುತ್ತಿದ್ದಾರೆ. ಹೊತ್ತು ಬಂದ ಹಾಗೆ ಕೊಡೆ ಹಿಡಿಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ನಮ್ಮ ಎದುರು ನಮ್ಮ ಹಾಗೆ. ಬೇರೆಯವರ ಎದುರಿಗೆ ಅವರ ಹಾಗೆ ಮಾತನಾಡುವುದು. ಇದು ಒಂದು ರೀತಿಯಲ್ಲಿ ಆತ್ಮ ವಂಚನೆ. ಆದರೆ ಶಿವಶಂಕರಪ್ಪ ಆ ರೀತಿಯ ಆತ್ಮ ವಂಚನೆಯನ್ನು ಎಂದು ಕೂಡ ಮಾಡಿಕೊಂಡವರಲ್ಲ ಎಂದರು.
ಬಿಜೆಪಿ ಅವರ ಪಕ್ಷವಲ್ಲ. ಕಾಂಗ್ರೆಸ್ ನಿಷ್ಟರಾಗಿ ಯಾವಾಗಲು ಇದ್ದವರು. ಆದರೆ ಯಡಿಯೂರಪ್ಪ ಅವರ ಸಂದರ್ಭದಲ್ಲಿ ಅವರು ಗೆಲ್ಲಲಿ ಎಂದಿದ್ದರು. ಇದಕ್ಕೆ ಅವರ ಪಕ್ಷದವರೇ ಶಿವಶಂಕರಪ್ಪ ಹೀಗೆ ಹೇಳುತ್ತಾರಲ್ಲ ಎಂದು ಮನಸ್ಸಿನಲ್ಲಿ ಬೈದಿರುವುದು ಉಂಟು. ಆದರೆ ಶಿವಶಂಕರಪ್ಪ ಅವರು ಸಮಾಜದಲ್ಲಿ ಯಾವುದೇ ಪಕ್ಷದವರಾಗಲಿ ಒಳ್ಳೆಯ ವ್ಯಕ್ತಿಗಳು ಮೇಲೆ ಬರಲಿ ಎಂಬ ಹೃದಯವಂತಿಕೆ ಇಟ್ಟಿಕೊಂಡವರು. ಇಂದು ಅವರು ನಮ್ಮ ಕಣ್ಣ ಮುಂದಿಲ್ಲ ಎಂದರೆ ದೊಡ್ಡ ಸಂಪತ್ತು ಕಳೆದುಕೊಂಡಿದ್ದೇವೆ ಎಂಬ ಭಾವನೆ ಅವರ ಮನೆತನಕ್ಕಿಂತ ಸಮಾಜಕ್ಕೆ ಸೃಷ್ಟಿಯಾಗಿದೆ. ಹಾಗಾಗಿ ಶಿವಶಂಕರಪ್ಪರAತೆಯೆ ಸಾಮಾಜಿಕ ಅಭಿವೃದ್ಧಿ, ಜನರ ವಿಶ್ವಾಸ ಗಳಿಸಿಕೊಳ್ಳಬೇಕೆಂದು ಅವರ ಮನೆತನದ ಸದಸ್ಯರಿಗೆ ಕಿವಿ ಮಾತು ಹೇಳುತ್ತಿದ್ದೇವೆ ಎಂದರು.
ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಆರೋಗ್ಯ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಆವರ ಛಾಪು ಇದ್ದೇ ಇದೆ. ಮೇಲಾಗಿ ನಾನು ಇಷ್ಟೆಲ್ಲ ಮಾಡಿದ್ದೇನೆ ಎಂಬ ಅಹಂಕಾರ ಇರಲಿಲ್ಲ. ಅವರು ಸದ್ವಿನಯವೇ ಸದಾಶಿವನನ್ನು ಒಲಿಸುವ ದಾರಿ ಎಂದು ತಿಳಿದವರು. ಯಾರನ್ನೂ ಕೂಡ ಶಾಶ್ವತ ಶತ್ರು ಎಂದು ಭಾವಿಸಿರಲಿಲ್ಲ. ಯಾರನ್ನಾದರೂ ಟೀಕಿಸಿದರೆ ಮಾನವೀಯ ಸಂಬAಧಗಳಿಗೆ ಧಕ್ಕೆ ಬಾರದ ಹಾಗೆ ನಡೆದುಕೊಳ್ಳುತ್ತಿದ್ದರು ಎಂದರು.
ಬಾಪೂಜಿ ವಿದ್ಯಾಸಂಸ್ಥೆಯನ್ನು ಅವರು ಕೈಗೆ ತಗೆದುಕೊಂಡ ನಂತರ ಅದರ ಅಭಿವೃದ್ಧಿ ಎಷ್ಟು ವೇಗವಾಗಿ ನಡೆಯಿತು ಎನ್ನುವುದು ಹಿರಿಯರಿಗೆ- ಕಿರಿಯರಿಗೆ ಗೊತ್ತು. ಹಿರಿಯ ಜಗದ್ಗುರುಗಳ ಆಶೀರ್ವಾದ ಹಾಗೂ ಸಿದ್ದವೀರಪ್ಪ ಅವರ ನೆರವು. ಹೀಗೆ ಅನೇಕ ಜನರ ಸಹಕಾರದಿಂದ ಶಿವಶಂಕರಪ್ಪ ಅವರು ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಯಾದರು. ಇದಾದ ನಂತರ ದಾವಣಗೆರೆಗೆ ಹೊಸ ಮೆರಗು ಬಂತು. ಆಗ ಶಿಕ್ಷಣ ಕಾಶಿಯಾಗಿ ದಾವಣಗೆರೆ ರೂಪುಗೊಂಡಿತು ಎಂದು ಸ್ಮರಿಸಿದರು.
ಕೈಗಾರಿಕೋದ್ಯಮಿ ಎಸ್.ಎಸ್.ಗಣೇಶ್ ಮಾತನಾಡಿ, ತಂದೆಯವರ ಬಗ್ಗೆ ನಾನು ಮಾತನಾಡುವುದಕ್ಕಿಂತ ಅವರಿಂದ ಅನುಕೂಲ ಪಡೆದುಕೊಂಡಿರುವ ಜನರು ಮಾತನಾಡಬೇಕು. ನಾಗನೂರು ಎಸ್.ಎಸ್.ಬಕ್ಕೇಶ್ ಅವರು ದತ್ತು ಪಡೆದುಕೊಂಡಿದ್ದ ಗ್ರಾಮ. ಇದರಿಂದ ಅವರು ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗಲು ಸಹಕಾರವಾಯಿತು. ಎಸ್.ಎಸ್.ರವೀಂದ್ರನಾಥ್ ಅವರು ಇದೀಗ ಆಶೀರ್ವಾದ ಮಾಡಿದಂತೆ ಮುಂದೆಯೂ ಹೀಗೆಯೇ ಆಶೀರ್ವಾದ ಮಾಡಲಿ ಎಂದರು.
ರೈತ ಮುಖಂಡ ಎನ್.ಜಿ.ಪುಟ್ಟಸ್ವಾಮಿ ಮಾತನಾಡಿ, ಮಹಾನ್ ಚೇತನ ಅಗಲಿರುವುದು ನಾಡಿಗೆ ತುಂಬಲಾರದ ನಷ್ಟವಾಗಿದೆ. ದಾವಣಗೆರೆ ಜಿಲ್ಲೆಯ ಬಹುತೇಕ ಮಕ್ಕಳು ವೈದ್ಯರು, ಇಂಜಿನಿಯರ್‌ಗಳು ಆಗಿದ್ದರೆ ಅದಕ್ಕೆ ಡಾ.ಶಾಮನೂರು ಶಿವಶಂಕರಪ್ಪ ಕಾರಣ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದುದು. ಇಂದು ಜಿಲ್ಲೆಯಲ್ಲಿ ಜಾತ್ಯಾತೀತ ಮನೆತನಗಳು ಏನಾದರೂ ಇದ್ದರೆ ಶಾಮನೂರು ಹಾಗೂ ಜೆ.ಎಚ್.ಪಟೇಲ್ ಮನೆತನಗಳು ಮಾತ್ರ ಎಂದರು.
ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಲಿಂಗರಾಜ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ಜನರಿಗೆ ಕೋಟ್ಯಾಂತರ ರೂ ವೆಚ್ಚ ಮಾಡಿ ವ್ಯಾಕ್ಸಿನ್ ನೀಡಿರುವುದನ್ನು ಯಾರೂ ಮರೆಯಬಾರದು. ದಕ್ಷಿಣದ ಉಪ ಚುನಾವಣೆಯಲ್ಲಿ ಶಾಮನೂರು ಕುಟುಂಬದ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಆಯ್ಕೆ ಮಾಡಬೇಕು ಎಂದರು.
ಗ್ರಾಮಸ್ಥರ ಪರವಾಗಿ ಗೌಡರ ಶಿವಣ್ಣ, ಕನ್ವೀನರ್ ಹನುಮಂತಪ್ಪ ಮಾತನಾಡಿ, ಗ್ರಾಮಕ್ಕೆ ಡಾ.ಶಾಮನೂರು ಶಿವಶಂಕರಪ್ಪ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ಉಪಸ್ಥಿತರಿದ್ದರು. ಶಿಕ್ಷಕ ಹನುಮಂತ ನಾಯ್ಕ ಪ್ರಾರ್ಥಿಸಿದರು. ಎನ್.ಪಿ.ಮಹೇಶ್ ಸ್ವಾಗತಿಸಿದರು. ಶಶಿಕುಮಾರ್ ವಂದಿಸಿದರು.
