ಹರಿಹರ: ಬಂಜಾರ ಭಾಷೆಯನ್ನು ಭಾರತದ ಸಂವಿಧಾನದ ಎಂಟನೇ ಷೆಡ್ಯೂಲ್‌ನಲ್ಲಿ ಸೇರಿಸುವ ಅಗತ್ಯವಿದೆ ಎಂದು ಹೈಕೋರ್ಟ್ ವಕೀಲ ಎನ್.ಅನಂತನಾಯ್ಕ ಹೇಳಿದರು.
ನಗರದ ಮೈತ್ರಿವನದ ಪ್ರೊ.ಬಿ.ಕೃಷ್ಣಪ್ಪ ಸಭಾಭವನ ((Prof. B. Krishnappa Auditorium) ದಲ್ಲಿ ಭಾನುವಾರ ನಡೆದ ಬಂಜಾರ ಯುವಜನರ (Banjara Youth) ಉದ್ಯಮಶೀಲತೆ ಮತ್ತು ನಾಯಕತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಂಜಾರ ಭಾಷೆಯನ್ನು ಸಂವಿಧಾನದಲ್ಲಿ ಸೇರಿಸಿಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಮುದಾಯದ ಸಂಘ ಸಂಸ್ಥೆಗಳು, ಚಿಂತಕರು ಮತ್ತು ಜನಪ್ರತಿನಿಧಿಗಳು ಸಂಘಟಿತರಾಗಬೇಕೆಂದರು.
ಬಂಜಾರ ಲಂಬಾಣಿ ತಾಂಡಗಳನ್ನು ಸಂಪೂರ್ಣವಾಗಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಬಡತನದ ಕಾರಣಕ್ಕಾಗಿ ಉದ್ಯೋಗ ಹುಡುಕಿ ಬಂಜಾರರು ರಾಜ್ಯ, ಹೊರ ರಾಜ್ಯಗಳ ವಿವಿಧ ಪ್ರದೇಶಗಳಿಗೆ ಗುಳೆ, ವಲಸೆ ಹೋಗುತ್ತಿದ್ದಾರೆ. ಅವರೊಂದಿಗೆ ಕಲಿಯುವ ಮಕ್ಕಳು ಕೂಡ ಶಾಲೆ ತೊರೆದು ಹೋಗುತ್ತಿದ್ದಾರೆ. ವಲಸೆ ಕಾರ್ಮಿಕರ ಮಕ್ಕಳಿಗಾಗಿ ಸಂಚಾರಿ ವಸತಿ ಶಾಲೆಗಳನ್ನು ಸ್ಥಾಪಿಸಬೇಕು. ಈ ದುಡಿಯುವ ಜನರಿಗೆ ಭದ್ರತೆ ಮತ್ತು ಸೌಲಭ್ಯಗಳನ್ನು ಖಾತ್ರಿಗೊಳಿಸಬೇಕು.
ಬಂಜಾರ ಧರ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರಚಾರಕ್ಕಾಗಿ ಸಾಹಿತ್ಯ ಪ್ರಕಟಣೆ, ಪ್ರಚಾರ ಕಾರ್ಯಗಳು ಆಗಬೇಕು. ನಾಡಿನ ಬಂಜಾರ ಸಾಹಿತಿಗಳು, ಚಿಂತಕರು, ಸಂಘ ಸಂಸ್ಥೆಗಳನ್ನು ಒಳಗೊಂಡಂತೆ ಸರ್ಕಾರದ ಬಂಜಾರ ಅಕಾಡೆಮಿಯು ಕಾರ್ಯ ಯೋಜನೆ ರೂಪಿಸಬೇಕು. ಬಲವಂತದ ಮತಾಂತರ ಪ್ರಕರಣ ನಡೆಯದಂತೆ ಕಾನೂನು ಕ್ರಮ ಜರುಗಿಸಬೇಕು.
ಬಂಜಾರ ಯುವಜನರು ಉನ್ನತ ಶಿಕ್ಷಣ, ಉದ್ಯೋಗದ ಅವಕಾಶಗಳನ್ನು ಪಡೆಯಲು ಸಹಕಾರಿ ಆಗುವಂತೆ ಸ್ಪರ್ಧಾತ್ಮಕ ಪರೀಕ್ಷೆ ತರಗತಿ, ವ್ಯಕ್ತಿ ಸಾಮರ್ಥ್ಯ ಹೆಚ್ಚಿಸಲು ತರಬೇತಿಗಳನ್ನು ರೂಪಿಸಬೇಕು. ಕರ್ನಾಟಕ ರಾಜ್ಯ ತಾಂಡ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಹೆಚ್ಚುವರಿ ಅನುದಾನ ನೀಡಬೇಕು. ಸಮುದಾಯದ ಯುವಜನರಿಗೆ ಶಿಕ್ಷಣ, ಉದ್ಯೋಗ ಒದಗಿಸಲು ನಿಗಮವು ಯೋಜನೆ ರೂಪಿಸಬೇಕು.
ಬಂಜಾರರ ಸಾಂವಿಧಾನಿಕ ಮೀಸಲಾತಿ ಕಿತ್ತು ಕೊಳ್ಳಲು ನಡೆಯುವ ಷ್ಯಡ್ಯಂತರ ಗಳನ್ನು ಎದುರಿಸಲು ಸದಾ ಜಾಗೃತರಾಗಬೇಕು. ಸಂವಿಧಾನ ಸಂರಕ್ಷಣೆಗಾಗಿ ನಾಡಿನ ಶೋಷಿತ ಸಮುದಾಯಗಳು ಆಯೋಜಿಸುವ ಐಕ್ಯ ಅಂದೋಲನಗಳಲ್ಲಿ ಬಂಜಾರರು ಭಾಗವಹಿಸಬೇಕು.
ಇತ್ತೀಚಿಗೆ ತಾಂಡಗಳಲ್ಲಿ ಮದುವೆ, ಹಬ್ಬಗಳ ಹೆಸರಿನಲ್ಲಿ ನಡೆಯುವ ದುಂದುವೆಚ್ಚಗಳಿಗೆ ನಿಯಂತ್ರಣ ಹಾಕಬೇಕು. ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ ಮುಂದಾಗಬೇಕು ಎಂದರು.
ರಾಜ್ಯದ 26 ಜಿಲ್ಲೆಗಳಿಂದ 108 ಆಯ್ದ ಪ್ರತಿನಿಧಿಗಳು ಭಾಗವಹಿಸಿದ್ದರು.
ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವನಾಯ್ಕ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ, ಎಐಬಿಎಸ್‌ಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶೈಲಜಾಬಾಯಿ, ಬಂಜಾರ ಸಮಾಜ ದಾವಣಗೆರೆ ಜಿಲ್ಲಾಧ್ಯಕ್ಷ ನಂಜಾನಾಯ್ಕ, ಯುವ ಉದ್ಯಮಿ ಆದರ್ಶ ಯಲ್ಲಪ್ಪ, ಕಾರ್ಮಿಕ ಮುಖಂಡ ವಿಜಯ್ ಜಾದವ್, ಈಶ್ವರ ನಾಯ್ಕ, ಲಕ್ಷ್ಮಣ ರಾಮಾವತ್, ಶೈಲಜಾಬಾಯಿ ಮತ್ತಿತರರು ಉಪಸ್ಥಿತಿ ಇದ್ದರು.