ಹರಿಹರ: ಬೆಂಗಳೂರಿನಲ್ಲಿ ಆಗಸ್ಟ್ 7 ರಂದು ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕದ ದಲಿತ ಚಳವಳಿಗೆ (Dalit movement) 50 ವರ್ಷಗಳ ಸಂಭ್ರಮೋತ್ಸವ ನಿಮಿತ್ತ ಆಯೋಜಿಸಿರುವ ಬೆಂಗಳೂರು ಚಲೋ ಕಾರ್ಯಕ್ರಮದ ಪೋಸ್ಟರನ್ನು ಸೋಮವಾರ ನಗರದಲ್ಲಿ ಮಾಜಿ ಶಾಸಕ ಎಸ್.ರಾಮಪ್ಪ ಬಿಡುಗಡೆ ಮಾಡಿದರು.
ನಂತರ ಮಾಜಿ ಶಾಸಕ ಎಸ್.ರಾಮಪ್ಪ ಮಾತನಾಡಿ, ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬಲವರ್ಧನೆಗಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ, ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು ಸರ್ಕಾರ ಈ ಬೇಡಿಕೆಗಳನ್ನು ಈಡೇರಿಸುವ ಭರವಸೆ ಇದೆ, ನಿಮ್ಮ ಹೋರಾಟಕ್ಕೆ ಜಯ ಸಿಗಲಿ ಎಂದು ಹಾರೈಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಹರಿಹರ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಕದಸಂಸ ಸ್ಥಾಪಕ ಪ್ರೊ.ಬಿ.ಕೃಷ್ಣಪ್ಪರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ, ಕಾಂತರಾಜ್ ಆಯೋಗದ ವರದಿ ಜಾರಿ, ಎಸ್‌ಸಿಪಿ, ಟಿಎಸ್‌ಪಿ (SCP, TSP) ಯೋಜನೆ ಅನುದಾನದಲ್ಲಿ ಬಡವರ ವಸತಿ ಯೋಜನೆಗೆ ತಲಾ ರೂ.10 ಲಕ್ಷ ಸಹಾಯಧನ ಮಂಜೂರು.
ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿಕೆ, ನಮೂನೆ 57 ರಡಿ ಅರ್ಜಿ ಸಲ್ಲಿಸಲು ಉಳಿದ ಸಾಗುವಳಿದಾರರಿಗೆ ಅವಕಾಶ ನೀಡಬೇಕು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಡಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಸೌಲಭ್ಯಗಳನ್ನು ಪಡೆಯುವ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿದ್ದಾರೆ.
ಈ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಚೌಡಪ್ಪ ಸಿ. ಭಾನುವಳ್ಳಿ, ಕಡ್ಲೆಗೊಂದಿ ತಿಮ್ಮಣ್ಣ, ಬೆಳ್ಳೂಡಿ ಆನಂದ್, ಪ್ರದೀಪ್, ದುರುಗೇಶ್ ಕೆ.ಬೇವಿನಹಳ್ಳಿ, ಪೃಥ್ವಿ, ಅರುಣ್, ಸಚಿನ್ ಇದ್ದರು.