ದಾವಣಗೆರೆ (Davanagere): ವಿದ್ಯಾರ್ಥಿಗಳು ಪಠೇತರ ಚಟುವಟಿಕೆಗಳ ಜೊತೆಗೆ ನಿರಂತರವಾದ ಕಲಿಕೆಗೆ ಒತ್ತು ನೀಡಬೇಕು. ಕ್ರಮಬದ್ಧ ಅಭ್ಯಾಸ ವಿದ್ಯಾರ್ಥಿ ಜೀವನದ ಅಡಿಪಾಯವಾಗಿದೆ ಎಂದು ಹಿರಿಯ ನ್ಯಾಯಾಧೀಶರಾದ ಸಿ.ನಾಗೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ವಯಂ ಶಿಸ್ತು, ಸಮಯದ ಮಹತ್ವ, ಆತ್ಮವಿಶ್ವಾಸ ಬೆಳೆಸಿಕೊಂಡು ಉತ್ತಮ ಅಂಕಗಳಿಸಿ, ಪೋಷಕರಿಗೆ ಮತ್ತು ಶಿಕ್ಷಕರಿಗೆ ಸಮರ್ಪಿಸಬೇಕು ಎಂದರು.
ಇಂದಿನ ಶಿಕ್ಷಣವು ಕೇವಲ ಅಂಕ ಗಳಿಕೆಯ ಮಹತ್ವವನ್ನು ತಿಳಿಸುತ್ತಿದೆ. ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ಅಳವಡಿಕೆಯ ಬಗ್ಗೆ ಚಿಂತಿಸಬೇಕು. ಪೋಷಕರು ಸದಾ ಮಕ್ಕಳನ್ನು ಗಮನಿಸುತ್ತಿರಬೇಕು. ಇಂದಿನ ಸಾಮಾಜಿಕ ಜಾಲತಾಣ ಮಕ್ಕಳ ಮನಸ್ಸನ್ನು ವಿಚಲಿತಗೊಳಿಸಿ, ಮಕ್ಕಳು ಸಮಸ್ಯೆಗಳಿಗೆ ಸಿಲುಕಿ ವಿದ್ಯಾಭ್ಯಾಸ ಕುಂಠಿತಗೊಳಿಸುತ್ತಿದೆ ಎಂದರು.
2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.೧೦೦ ಫಲಿತಾಂಶ ಪಡೆದು ಶೇ.೯೦ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ರಜತ ಪದಕ ವಿತರಿಸಿ ವಿದ್ಯಾರ್ಥಿಗಳಿಗೆ ಯಶಸ್ಸಿನ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಈಶ್ವರಮ್ಮ ಶಾಲೆಯ ರಾಜ್ಯ ಮಟ್ಟದ ‘ಶಿಕ್ಷಣ ಚೈತನ್ಯ’ ಪ್ರಶಸ್ತಿ ಪಡೆದ ಪ್ರಯುಕ್ತ ಶಾಲಾ ಪೋಷಕರು ಶಾಲಾಡಳಿತ ಮಂಡಳಿ ಮತ್ತು ಪ್ರಾಂಶುಪಾಲರು, ಉಪಪ್ರಾಂಶುಪಾಲ ಅವರನ್ನು ಸನ್ಮಾನಿಸಿದರು. ಕಳೆದ ೪೨ ವರ್ಷಗಳಿಂದ ಮೌಲ್ಯಧಾರಿತ ಮತ್ತು ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಸಿ ಮಕ್ಕಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು, ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಶಾಲಾಡಳಿತ ಕಾರ್ಯದರ್ಶಿ ಎ.ಆರ್.ಉಷಾರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಎ.ಪಿ.ಸುಜಾತ, ಹಿರಿಯ ಸದಸ್ಯರಾದ ಕಾಸಲ್ ರತ್ನಮ್ಮ, ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ ಇದ್ದರು.
ಶಾಲಾ ಪ್ರಾಂಶುಪಾಲ ಕೆ.ಎಸ್.ಪ್ರಭುಕುಮಾರ್ ಮಲ್ಟಿಮಿಡಿಯಾ ವರದಿ ಮಂಡಿಸಿದರು. ಕಂಪ್ಯೂಟರ್ ಶಿಕ್ಷಕಿ ಎ.ಎಚ್.ನಂದಾ ನಿರೂಪಿಸಿದರು. ನಂತರ ‘ಕಾಯಕ ಯೋಗಿಗೆ ನಮನ’ ಎಂಬ ಶೀರ್ಷಿಕೆಯಡಿ ಮಕ್ಕಳು ಮನರಂಜಿಸಿ ಕಾರ್ಯಕ್ರಮ ನಡೆಸಿಕೊಟ್ಟರು.
Read also : ಭೀಮ ಕೋರೆಗಾಂವ್ ಒಂದು ಸ್ವಾಭೀಮಾನದ ಯುದ್ಧ