ದಾವಣಗೆರೆ (Davanagere): ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ವಿಧೇಯಕ ಜಾರಿ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ವಿಡಿಯೋ ಹರಿಬಿಟ್ಟು, “ರೈಲು,ವಾಹನ ಬಸ್ಸಿಗೆ ಬೆಂಕಿ ಇಡಬೇಕು, ದಂಗೆ ಏಳಬೇಕು” ಎಂಬ ದುಷ್ಕೃತ್ಯದ ಹೇಳಿಕೆ ನೀಡಿದ್ದ ಪಾಲಿಕೆಯ ಕಾಂಗ್ರೆಸ್ ಪಕ್ಷದ ಮಾಜಿ ಸದಸ್ಯ ಕಬೀರ್ ಅಹ್ಮದ್ ಖಾನ್ ನನ್ನು ರಾಜಸ್ತಾನದ ಅಜ್ಮೀರ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ವಿವಾದಿತ ವೀಡಿಯೋ ಹರಿಬಿಟ್ಟಿದ್ದ ಪಾಲಿಕೆ ಮಾಜಿ ಸದಸ್ಯ ಆರೋಪಿ ಕಬೀರ್ “ವಕ್ಫ್ ಮಸೂದೆಗೆ ತಿದ್ದುಪಡಿ ಮಾಡಿರುವುದನ್ನು ನಾವು ಒಪ್ಪುವುದಿಲ್ಲ. ಕೇವಲ ಪ್ರತಿಭಟನೆ ನಡೆಸಿದರೆ, ಬ್ಯಾನರ್ ಹಿಡಿದು ಓಡಾಡಿದರೆ ಏನೂ ಆಗಲ್ಲ. ಸಿಎಂ, ಡಿಸಿಎಂ, ಡಿಸಿಗೆ ಮನವಿ ಕೊಟ್ಟರೆ ಬೇಡಿಕೆ ಈಡೇರಲ್ಲ. ಎಲ್ಲರೂ ರಸ್ತೆಗೆ ಇಳಿಯಬೇಕು. ಏನ್ ಬೇಕಾದರೂ ಮಾಡಿ. ಬೆಂಕಿ ಇಡಿ, ಸಾಯಿರಿ. ಜೀವಗಳನ್ನು ಬಲಿ ಕೊಡಬೇಕು” ಎಂದು ಹೇಳಿದ್ದ.
“ಬಸ್ ಗೆ, ರೈಲಿಗೆ ಬೆಂಕಿ ಇಡಬೇಕು. ಕೆಲವನ್ನು ಹೇಳದೆಯೇ ಮಾಡಬೇಕು. ಯೋಜನೆ ರೂಪಿಸಿ ಮಾಡುವುದಲ್ಲ. ಊರಿನ ಪ್ರಮುಖರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಭಾರತದಲ್ಲಿ ನಮಗೆ ಯಾವ ನಾಯಕ ಇಲ್ಲ. ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಬಂದ್ ಮಾಡಿ, ಬೆಂಕಿ ಇಡಿ, ಒಡೆದು ಹಾಕಿ, ಮುರಿದು ಹಾಕಿ. ಏನೇ ಆದರೂ ತಲೆಕೆಡಿಸಿಕೊಳ್ಳಬೇಡಿ. ಗ್ರಾಮದಲ್ಲಿ 10ರಿಂದ 15 ಜನ ಸಾಯಬೇಕು. ತಲೆಹೊಡೆಯೋ ಕೆಲಸ ಮಾಡಬೇಕು” ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳುವ ಮೂಲಕ ವಿವಾದದ ಕಿಡಿ ಎಬ್ಬಿಸಿದ್ದ.
ತಿದ್ದುಪಡಿ ಮಸೂದೆ ವಿರೋಧಿಸುವ ವೇಳೆ ಸಮಾಜದಲ್ಲಿ ಅಶಾಂತಿ ಉಂಟುಮಾಡುವ, ಸಾಮರಸ್ಯಕ್ಕೆ ಧಕ್ಕೆ ತರುವ ಕಬೀರ್ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಲು ಒತ್ತಾಯ ಕೇಳಿಬಂದಿತ್ತು. ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿ ಪೊಲೀಸರ ಕೈಗೆ ಸಿಗದೇ ಪರಾರಿಯಾಗಿದ್ದ. ಅಲರ್ಟ್ ಆಗಿದ್ದ ಪೊಲೀಸರು ಕೂಡ ಮಾಹಿತಿ ಸಂಗ್ರಹಿಸುತ್ತಿದ್ದರು.
ಪೊಲೀಸರು ಆರೋಪಿಯ ಬಂಧನಕ್ಕೆ ಮಾಹಿತಿ ಕಲೆಹಾಕಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಜ್ಮೀರ್ ನಲ್ಲಿರುವ ಕುರಿತು ಮಾಹಿತಿ ದೊರೆತಿತ್ತು. ಕೂಡಲೇ ಪೊಲೀಸ್ ಹಿರಿಯ ಅಧಿಕಾರಿಗಳು ಮತ್ತು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನಿರ್ದೇಶನದಂತೆ ರಾಜಸ್ಥಾನದ ಅಜ್ಮೀರ್ ಗೆ ತೆರಳಿದ ದಾವಣಗೆರೆ ನಗರದ ಆಜಾದ್ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಗಳು ಆರೋಪಿ ಕಬೀರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ದಾವಣಗೆರೆಗೆ ಕರೆತಂದಿದ್ದಾರೆ. ಮತ್ತು ವಿಡಿಯೋ ಹರಿಬಿಟ್ಟ ಕುರಿತಂತೆ ವಿಚಾರಣೆಯನ್ನು ನಡೆಸಿದ್ದಾರೆ.
Read also : ಲಕ್ಷ್ಮೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ, ಹನುಮನ ಜಯಂತಿ : ಜಿ. ಬಿ. ವಿನಯ್ ಕುಮಾರ್ ಭಾಗಿ
ಈ ಕುರಿತು ಮಾಹಿತಿ ನೀಡಿದ ಪೂರ್ವವಲಯ ಪೊಲೀಸ್ ಮಹಾನಿರ್ದೇಶಕರಾದ ಡಾ.ರವಿಕಾಂತೇಗೌಡ “ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಹೇಳಿಕೆ ಆರೋಪಿ ಕಬೀರ್ ಖಾನ್ ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣದ ಮಾಹಿತಿ ಕಲೆ ಹಾಕಲಾಗಿದೆ. ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ” ಎಂದು ಖಚಿತಪಡಿಸಿದರು.