ದಾವಣಗೆರೆ: ಲೋಕಸಭಾ ಚುನಾವಣೆ ನಿಮಿತ್ತ ಮತ ಯಾಚನೆ ಮಾಡಲು ದಾವಣಗೆರೆಗೆ ಆಗಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರೈತರಿಗೆ ಆಶ್ವಾಸನೆ ನೀಡಿ ವಂಚನೆ ಮಾಡಿದ್ದು, ಇದನ್ನು ವಿರೋಧಿಸಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಮೋದಿ ವಿರುದ್ಧ ಪ್ರಚಾರ ಕಾರ್ಯ ಕೈಗೊಂಡು ಎನ್ ಡಿಎ ನೇತೃತ್ವದ ಸರ್ಕಾರವನ್ನು ತೊಲಗಿಸುವ ನಿಟ್ಟಿನಲ್ಲಿ ರೈತ ಸಂಘ ಮುಂದಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಚಿನ್ನಸಮುದ್ರ ಶೇಖರ್ ನಾಯ್ಕ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಚುನಾವಣೆಗಳಲ್ಲಿ ಮೋದಿ ಅವರು ನೀಡದ ಭರವಸೆಗಳನ್ನು ಈಡೇರಿಸಿಲ್ಲ. ಈಗ ಯಾವ ಮುಖ ಇಟ್ಟುಕೊಂಡು ರಾಜ್ಯದ ಜನತೆಯ ಬಳಿ ಮತ ಯಾಚನೆ ಮಾಡುತ್ತಾರೆ. ಈ ಕೂಡಲೇ ಅವರು ನೀಡಿದ ಭರವಸೆಯಂತೆ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತಂದು ರೈತರ ಬೆಳೆಗಳಿಗೆ ವೆಚ್ಚಕ್ಕಿಂತ ಕನಿಷ್ಠ ಒಂದೂವರೆ ಪಟ್ಟು ಹೆಚ್ಚು ದರ ದೊರಕುವಂತೆ ಮಾಡಬೇಕೆಂದು ಒತ್ತಾಯಿಸಿದರು.
ರೈತರ ಆದಾಯವನ್ನು ದುಪ್ಪಟ್ಟುಗೊಳಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಪ್ರತಿ ರೈತ ಕುಟುಂಬಕ್ಕೆ 1 ಲಕ್ಷದ ತನಕ ಬಡ್ಡಿರಹಿತ ಸಾಲ ನೀಡಬೇಕು. ನರೇಗಾ ಯೋಜನೆಗೆ ಹಣವನ್ನು ಕಡಿತಗೊಳಿಸಿ, ಹಂತಹಂತವಾಗಿ ನಿಲ್ಲಿಸುತ್ತಿದೆ. ಯಾವುದೇ ಕಾರಣಕ್ಕೂ ನಿಲ್ಲಿಸದೇ ಮುಂದುವರೆಸಬೇಕು. ರೈತರ ಸಾಲ ಮನ್ನಾ ಮಾಡಲಿಲ್ಲ. ಇಡೀ ದೇಶದ ರೈತರ ಸಾಲ ಮನ್ನಾ ಮಾಡಲು 5 ಲಕ್ಷ ಕೋಟಿ ಹಣವಷ್ಟೇ ಬೇಕು. ಆದರೆ ಹಣವಿಲ್ಲ ಎಂಬ ಕಾರಣ ನೀಡಿ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಲಿಲ್ಲ. ಆದರೆ ಇದೇ ಅವಧಿಯಲ್ಲಿ ಕಾರ್ಪೋರೇಟ್ ಕಂಪನಿಗಳ 30 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯನ್ನು ದುರ್ಬಳಕೆ ಮಾಡಿಕೊಂಡಿದೆ. ನೆರೆ, ಬರ, ಬೆಳೆ ನಾಶ ಯಾವ ವಿಚಾರಕ್ಕೂ ಅದು ರೈತರ ನೆರವಿಗೆ ಬರುತ್ತಿಲ್ಲ. ಬದಲಿಗೆ ಬೆಳೆ ವಿಮೆ ಕಡೆ ಬೊಟ್ಟು ಮಾಡುತ್ತಿದೆ. ಬೆಳೆ ವಿಮೆ ಪೂರ್ತಿ ಖಾಸಗಿ ಕಂಪನಿಗಳ ಕೈಗಳಲ್ಲಿದ್ದು ರೈತರಿಗೆ ವಂಚನೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಮಾಸಡಿ ಭರಮಪ್ಪ, ನಿರಂಜನ್, ಕಲೀವುಲ್ಲಾ, ಮಂಡ್ಲೂರು ವಿಶ್ವನಾಥ್, ಜಿ.ಶ್ರೀನಿವಾಸ, ಲಕ್ಷ್ಮಣ್, ಮಲ್ಲಶೆಟ್ಟಿಹಳ್ಳಿ ಕರಿಬಸಪ್ಪ, ಲಕ್ಮಣ್ ರಮಾವತ್, ನಲ್ಕುದುರೆ ಚನ್ನಬಸಪ್ಪ ಇತರರು ಇದ್ದರು.
…………………