ಸರ್ ಎಡ್ವಿನ್ ಅರ್ನಾಲ್ಡ್ ಎಂಬ ವಿದ್ವಾಂಸರು ಬುದ್ಧನನ್ನು “ಏಷ್ಯಾದ ಬೆಳಕು” ಎಂದು ಕರೆದರೆ ರಿಸ್ ಡೇವಿಡ್ಸ್ ಎಂಬುವರು ಬುದ್ಧನನ್ನು “ಜಗತ್ತಿನ ಬೆಳಕು” ಎಂದು ಕರೆದಿದ್ದಾರೆ. ಆದರೆ ಬುದ್ಧ “ನಿನಗೆ ನೀನೇ ಬೆಳಕು” (gautama buddha) ಎಂದಿದ್ದಾರೆ. ಬುದ್ಧನೆಂದರೆ ಹಾಗೆ ಅಗೋಚರ ಅನುಭವಕ್ಕೆ ಬಾರದ ಶಕ್ತಿಗಳನ್ನು ನಂಬಿ ಮೂಢನಾಗುವುದಕ್ಕಿಂತ ತರ್ಕ ವೈಚಾರಿಕತೆ ಹಾಗೂ ಪ್ರಶ್ನಿಸುವ ಸ್ವಭಾವದಿಂದ ಮಾನವ ತನ್ನ ಗೊಂದಲಗಳಿಗೆ ಸಮಸ್ಯೆಗಳಿಗೆ ಕಷ್ಟಕಾರ್ಪಣ್ಯಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ ಎಂದು ಬೋಧಿಸಿದವನು.
ತನ್ನ ಸರಳತೆ, ಪ್ರಾಮಾಣಿಕತೆ, ಕಾರುಣ್ಯ ಮತ್ತು ಪ್ರೇಮದ ಮೂಲಕ ಶತ ಶತಮಾನಗಳ ಕಾಲ ಜನಮಾನಸವನ್ನು ಆವರಿಸಿದವನು. ಬುದ್ಧನು ಬೋಧಿಸಿದ್ದು ಮಧ್ಯಮ ಮಾರ್ಗ; ತೀರ ಧಾರ್ಮಿಕವಲ್ಲದ ಇತ್ತ ತೀರ ಲೌಕಿಕವು ಅಲ್ಲದ ಜನಸಾಮಾನ್ಯರೆಲ್ಲರೂ ಪಾಲಿಸಬಹುದಾದ ಮಧ್ಯಮ ಮಾರ್ಗ. ಬೌದ್ಧಧರ್ಮದ ತನ್ನ ಸಂದೇಶಗಳನ್ನು ಹೇಳಲು ಬಳಸಿದ ಭಾಷೆಯು ಸಹ ಅಂದಿನ ಜನಸಾಮಾನ್ಯರಾಡುವ ಪಾಲಿ ಭಾಷೆಯನ್ನು. ಹೀಗಾಗಿಯೇ ಬುದ್ಧನು ಬಹುಬೇಗ ಜನಸಾಮಾನ್ಯರಿಗೆ ಹತ್ತಿರನಾದನು.
ಮನುಕುಲದ ಬೆಳಕು ತಥಾಗತ ಬುದ್ಧ
ಬುದ್ಧ “ನಾನು ಹೇಳಿದ ಮಾತುಗಳೆಲ್ಲವನ್ನು ನಂಬಬೇಡ ನಾನು ಹೇಳುವ ಮಾತುಗಳು ನಿನ್ನ ಅನುಭವಕ್ಕೆ ಸರಿ ಎನಿಸಿದರೆ ಹಾಗೂ ಆ ಮಾತುಗಳು ನಿನಗೂ ಮತ್ತು ನಿನ್ನ ಸಮಾಜಕ್ಕು ಒಳ್ಳೆಯದಾಗುವಂತಿದ್ದರೆ ಅದನ್ನು ಪುರಸ್ಕರಿಸು ಇಲ್ಲವೇ ಅದನ್ನು ತಿರಸ್ಕರಿಸು” ಎಂದು ಹೇಳುವ ಮೂಲಕ ವ್ಯಕ್ತಿಯ ವಿಚಾರ ಸ್ವಾತಂತ್ರ್ಯಕ್ಕೆ ಮನ್ನಣೆ ಕೊಟ್ಟವನು. ಈ ಕಾರಣಗಳಿಗಾಗಿಯೇ ಬುದ್ದನು ಹುಟ್ಟಿ ಶತ ಶತಮಾನಗಳು ಕಳೆದರೂ ಆತನ ವ್ಯಕ್ತಿತ್ವವು ಜನ ಮಾನಸದಲ್ಲಿ ಇರುವ ಎಂದೂ ಮಾಸದ ಅನರ್ಘ್ಯ ರತ್ನದಂತೆ ಪ್ರಕಾಶಿಸುತ್ತಲೇ ಇದೆ.
ಬುದ್ಧನ ಸಂದೇಶಗಳು : ಬುದ್ಧನ ಸಂದೇಶಗಳನ್ನು ಪಾಲಿ ಭಾಷೆಯಲ್ಲಿ ರಚಿತವಾಗಿರುವ ತ್ರಿಪಿಟಕಗಳಲ್ಲಿ ಕಾಣಬಹುದು. ತನ್ನ ಪ್ರಥಮ ಪ್ರವಚನವನ್ನು ವಾರಣಾಸಿಯಲ್ಲಿರುವ ಸಾರಾನಾಥದಲ್ಲಿ ನೀಡಿದ ಬುದ್ಧನು ತನ್ನ ಸಮಕಾಲೀನ ಸಂದರ್ಭದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸ್ಥಿತಿಯ ವಾಸ್ತವಗಳ ಅರಿವಿದ್ದವನು.
ಹಾಗೆಯೇ ಅಂದು ಅಸ್ತಿತ್ವದಲ್ಲಿದ್ದ ಬ್ರಹ್ಮ- ಕರ್ಮ ಮುಂತಾದವುಗಳ ಕುರಿತ ನಿರರ್ಥಕ ಗೊಂದಲಗಳ ಗೋಜಿಗೆ ಹೋಗದೆ ಮಾನವನ ಲೌಕಿಕ ಸಮಸ್ಯೆಗಳತ್ತ ಗಮನ ಹರಿಸಿದನು. ಅತಿಯಾದ ವೈಭೋಗ ಜೀವನ ಮತ್ತು ಅತಿರೇಕದ ವೈರಾಗ್ಯ ಜೀವನ ಇವೆರಡರಿಂದಲೂ ಅಂತರ ಕಾಪಿಟ್ಟುಕೊಂಡು ಇವೆರಡರಿಂದಲೂ ಮುಕ್ತವಾದ ಮಾಧ್ಯಮ ಮಾರ್ಗವನ್ನು ಬುದ್ಧನು ಬೋಧಿಸಿದನು.
ಅವುಗಳಲ್ಲಿ ನಾಲ್ಕು ಶ್ರೇಷ್ಠ ಸರ್ವಕಾಲಿಕ ಸತ್ಯಗಳು:
- 1 ಜಗತ್ತು ದುಃಖದಿಂದ ತುಂಬಿದೆ.
- 2 ದುಃಖಕ್ಕೆ ಲೋಭ ದುರಾಸೆ ಕಾರಣವಾಗಿದೆ.
- 3 ಲೋಭ ದುರಾಸೆಯನ್ನು ಜಯಿಸುವ ಮೂಲಕ ದುಃಖವನ್ನು ನಿವಾರಿಸಬಹುದು.
- 4 ದುಃಖ ನಿವಾರಣೆಗೆ ಅಷ್ಟಾಂಗ ಮಾರ್ಗ.
ಹೀಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ಪ್ರತಿಯೊಬ್ಬರೂ ಈ ಶ್ರೇಷ್ಠ ಸತ್ಯಗಳನ್ನು ಮನಗಂಡು ಅಷ್ಟಾಂಗಿಕ ಮಾರ್ಗವನ್ನು ಅಥವಾ ಮಧ್ಯಮ ಮಾರ್ಗದ ಮುಖೇನ ದುಃಖ ಗಳಿಂದ ಹೊರಬರಬಹುದು ಎಂದು ಬೋಧಿಸಿದನು.
ಅಷ್ಟಾಂಗ ಮಾರ್ಗಗಳೆಂದರೆ:
- ಉತ್ತಮ ದೃಷ್ಟಿ
- ಉತ್ತಮ ಸಂಕಲ್ಪ
- ಉತ್ತಮ ಮಾತು
- ಉತ್ತಮ ಕಾರ್ಯ
- ಉತ್ತಮ ಜೀವನೋಪಾಯ ಉತ್ತಮ ಸಾಧನೆ
- ಉತ್ತಮ ಜ್ಞಾಪಕ
ಉತ್ತಮ ಧ್ಯಾನವೆಂಬ ಸರಳವಾದ ಆಚರಣೆಗಳ ಮೂಲಕ ಮಾನವ ಆತ್ಮ ಸಂತೋಷವನ್ನು ಪಡೆಯಬಲ್ಲ ಎಂದು ಹೇಳಿದ್ದಾನೆ. ಅಗೋಚರವಾದ ಶಕ್ತಿಗಳನ್ನು ನಂಬಿ ಮತ್ತಷ್ಟು ಗೊಂದಲ ಮತ್ತು ದುಃಖತಪ್ತರಾಗುವುದಕ್ಕಿಂತ ಜೀವನದಲ್ಲುಂಟಾಗುವ ವಾಸ್ತವ ಕಟು ಸತ್ಯಗಳನ್ನು ನಮ್ಮ ಮನಸ್ಸಿಗೆ ಮನವರಿಕೆ ಮಾಡಿಕೊಟ್ಟು ದುಃಖದಿಂದ ಪಾರಾಗಬಹುದು ಎಂಬುದು ಬುದ್ಧನ ನಿಲುವು.
ಇದಕ್ಕೆ ಕಿಸಾಗೋತಮಿಯ (ಸಾವಿಲ್ಲದ ಮನೆಯ ಸಾಸಿವೆ)ಘಟನೆಯು ಉತ್ತಮ ಉದಾಹರಣೆಯಾಗಿದೆ. ಮುಂದುವರೆದು ಬುದ್ಧ ತನ್ನ ಅನುಯಾಯಿಗಳಿಗೆ ಒಂದು ಆಚಾರ ಸಂಹಿತೆಯನ್ನು ನಿಯಮಿಸಿದನು ಸುಳ್ಳು ಹೇಳದಿರುವುದು, ಹಿಂಸೆ ಮಾಡದಿರುವುದು, ಮಧ್ಯಪಾನ ಮಾಡದಿರುವುದು, ಮೋಸ ಮಾಡದಿರುವುದು ಹಾಗೂ ಭ್ರಷ್ಟಾಚಾರ ಮಾಡದಿರುವುದು.
ಹೀಗೆ ತುಂಬಾ ಸರಳವಾದ ಎಲ್ಲರೂ ಆಚರಿಸಬಹುದಾದ ಉತ್ತಮ ಮೌಲ್ಯಗಳನ್ನಷ್ಟೇ ಬುದ್ಧ ಬೋಧಿಸಿದ್ದು. ಬೌದ್ಧ ಧರ್ಮವು ಅಂದಿನ ಕ್ಲಿಷ್ಟಕರವಾದ ತಾತ್ವಿಕ ವಾದ ವಿವಾದಗಳ ಸುಳಿಗೆ ಸಿಲುಕದೆ ಡಾಂಭಿಕ ಆಚರಣೆಗಳನ್ನು ವಿರೋಧಿಸುತ್ತಾ ಎಲ್ಲಾ ಮತ ಪಂಥಗಳ ಜಾತಿಗಳ ಮೇರೆಯನ್ನು ಮೀರಿದ್ದರಿಂದ ಜನಸಾಮಾನ್ಯರಿಗೆ ಪ್ರಿಯವಾಯಿತು.
ಹೆಂಗಸರು ಗಂಡಸರೆನ್ನದೆ ಎಲ್ಲರೂ ಸಹ ಸಂಘಕ್ಕೆ ಸೇರಬಹುದುದಾಗಿತ್ತು. ಬೌದ್ಧ ಧರ್ಮ ತುಂಬಾ ಉದಾರ ತತ್ವಗಳನ್ನು ಒಳಗೊಂಡ ಪ್ರಜಾಸತ್ತಾತ್ಮಕ ಅಂಶಗಳನ್ನು ಒಳಗೊಂಡಿದೆ. ಬುದ್ಧನ ಸಂದೇಶಗಳ ಪ್ರಸ್ತುತತೆ: ಬುದ್ಧನ ತತ್ವಗಳನ್ನು ಅಳವಡಿಸಿಕೊಂಡು ಪ್ರಜಾ ಕಲ್ಯಾಣಕ್ಕಾಗಿ ಖಡ್ಗವನ್ನು ಹಿಡಿಯದೆ ಕೇವಲ ಶಾಂತಿ ಮಂತ್ರದಿಂದ ಒಂದು ವಿಶಾಲವಾದ ಸಾಮ್ರಾಜ್ಯವನ್ನು ಸಮರ್ಥವಾಗಿ ಆಳಿದವನು ಅಶೋಕ ಮಹಾಶಯ.
ಅಶೋಕನು ತನ್ನ ಮೊದಲ ಹಾಗೂ ಕೊನೆಯ ಯುದ್ಧವಾದ ಕಳಿಂಗ ಕದನದ ಸಾವು ನೋವುಗಳ ಭೀಕರತೆಯನ್ನು ಕಂಡು ವಿಚಲಿತನಾದಾಗ ಬುದ್ಧನ ಸಂದೇಶಗಳು ಆತನ ಆಂತರ್ಯದ ದುಃಖ ದುಮ್ಮಾನ ಗಳಿಗೆ ಸಮಾಧಾನದ ದಿಕ್ಸೂಚಿಯಾದವು. ಬಹುಶಃ ಯುದ್ಧಗಳನ್ನು ಮಾಡದೆ ಕೇವಲ ಶಾಂತಿ ಮತ್ತು ಅಹಿಂಸೆಗಳ ಮೂಲಕ ಸಾಮ್ರಾಜ್ಯವನ್ನು ಆಳಿದ ಪ್ರಪಂಚದ ಏಕಮೇವ ಸಾಮ್ರಾಟನೆಂದರೆ ಅದು ಅಶೋಕನೇ ಇರಬೇಕು.
ಪ್ರಸ್ತುತ ಸಂದರ್ಭದಲ್ಲಿ ಯುದ್ಧಗಳಿಂದ ಮನುಕುಲವು ಭೀತಿಗೆ ಒಳಪಟ್ಟಿದೆ ಇಂಥ ಸಂದರ್ಭದಲ್ಲಿ ಬುದ್ಧನ ಶಾಂತಿ ಸಂದೇಶಗಳು ಮನುಕುಲದ ಉಳಿವಿಗೆ ಶಾಂತಿಯುತ ಸ್ವಚ್ಛಂದ ಬದುಕಿಗೆ ಆಶಾಕಿರಣವಾಗಬಹುದು. ಬುದ್ಧ ಎಂಬ ಬೆಳಕು ಅಂದಿಗೂ ಪ್ರಸ್ತುತ, ಇಂದಿಗೂ ಪ್ರಸ್ತುತ ಮತ್ತು ಮಾನವ ಕುಲ ಇರುವವರೆಗೂ ಪ್ರಸ್ತುತವೇ ಆದರೆ ಆತನನ್ನು ನಾವು ಅರಿಯುವುದೆಂತು….?
- -ಡಾ. ವಿಶ್ವನಾಥ ಪಿ.
ಸಹಾಯಕ ಪ್ರಾಧ್ಯಾಪಕರು ,
ಎವಿಕೆ ಮಹಿಳಾ ಕಾಲೇಜು ,
ದಾವಣಗೆರೆ