ದಾವಣಗೆರೆ : ಅಕ್ಷರ ಕಿರೀಟ, ಅಕ್ಷರಮಾಲೆ, ಅಕ್ಷರ ಹೂದಾನಿ, ಅಕ್ಷರ ಗೊಂಬೆಗಳು, ಅಕ್ಷರ ದೀಪ, ಸರ್ವಂ….ಅಕ್ಷರ ಮಯಂ… ಇಂತಹ ಸುಂದರ ಕ್ಷಣಗಳಿಗೆ ಸಾಕ್ಷಿಯಾದದ್ದು ಜಿ ಜಿ ಎಂ ಎಸ್ ಕ್ಲಸ್ಟರ್ ನ ಕಲಿಕಾ ಹಬ್ಬದಲ್ಲಿ.
ಶಾಲಾ ಶಿಕ್ಷಣ ಇಲಾಖೆಯ 2025 26 ನೇ ಸಾಲಿನ ಎಫ್ ಎಲ್ ಎನ್ ಕಲಿಕಾ ಹಬ್ಬವು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರದಲ್ಲಿ ಜರುಗಿತು.
ಜಿ ಜಿ ಎಂ ಎಸ್ ಕ್ಲಸ್ಟರ್ ನ ಸರ್ಕಾರಿ ಶಾಲೆಗಳು ಈ ಹಬ್ಬದಲ್ಲಿ ಪಾಲ್ಗೊಂಡಿದ್ದವು. ಶಾಲೆಯು ಅಕ್ಷರಗಳಿಂದ ಅಲಂಕೃತಗೊಂಡಿದ್ದು ಅಕ್ಷರ ಹಬ್ಬವಾಗಿ ಕಂಗೊಳಿಸುತ್ತಿತ್ತು.
ಅಕ್ಷರ ಛತ್ರಿಯನ್ನು ಹಿಡಿದು, ಅಕ್ಷರ ದೀಪ ಹಚ್ಚುವ ಮೂಲಕ ಕಾರ್ಯಕ್ರಮವನ್ನು ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಆರ್ ವಿಶಾಲಾಕ್ಷಿ ಉದ್ಘಾಟಿಸಿ ಚಿನ್ನಕ್ಕಿಂತ ಅಕ್ಷರ ಲೇಸು ಎಂಬ ಕಿವಿ ಮಾತನ್ನು ಮಕ್ಕಳಿಗೆ ಹೇಳುವ ಮೂಲಕ ಅಕ್ಷರ ಹಾರದ ಮಹತ್ವವನ್ನು ವಿವರಿಸಿದರು.
ಎಫ್ಎಲ್ ಎನ್ ಕಲಿಕಾ ಹಬ್ಬದ ಉದ್ದೇಶವನ್ನು ತಿಳಿಸುವುದರೊಂದಿಗೆ ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು.
ದಾವಣಗೆರೆ ಉತ್ತರ ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಪಸೀಹ್ ಉದ್ದೀನ್ ಶಾಕೀರ್ ಅವರು ಕಲಿಕಾ ಹಬ್ಬದ ವಿವಿಧ ಆಯಾಮಗಳನ್ನು ತಿಳಿಸಿಕೊಟ್ಟರು ಚಟುವಟಿಕೆಗಳ ಆಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇಲಾಖೆಯ ಮೇಲುಸ್ತುವಾರಿ ಅಧಿಕಾರಿಗಳು, ಸ್ಥಳೀಯ ಮುಖಂಡರು, ಪೋಷಕರು ಉಪಸ್ಥಿತರಿದ್ದರು.
ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಲಕ್ಷೀ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸರ್ಕಾರಿ ಶಾಲೆಗಳಲ್ಲಿರುವ ಸಿಗುವ ಸೌಲಭ್ಯಗಳ ಮಾಹಿತಿಯನ್ನು ಪ್ರದರ್ಶನ ಮಾಡಲಾಗಿತ್ತು.
Read also : ವಸತಿ ಶಾಲೆಗಳನ್ನು ತೆರೆದು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿ : ಶಾಸಕ ಕೆ.ಎಸ್.ಬಸವಂತಪ್ಪ ಆಶಯ
ಕಥೆ ಹೇಳುವುದು, ಸಾಲಡ್ ತಯಾರಿಕೆ, ಗಟ್ಟಿ ಓದು, ಜ್ಞಾಪಕ ಪರೀಕ್ಷೆ, ಸುಂದರ ಕೈಬರಹ, ಸಂತೋಷದಾಯಕ ಗಣಿತ, ವಿಶೇಷವಾಗಿ ಪೋಷಕ ಮತ್ತು ಮಕ್ಕಳ ಸಹ ಸಂಬಂಧ ಚಟುವಟಿಕೆ, ಇದರ ಜೊತೆಗೆ ಗರಿಷ್ಠ ಮಗ್ಗಿ ಹೇಳುವ ಚಟುವಟಿಕೆಯನ್ನು ಆಯೋಜಿಸಲಾಗಿತ್ತು, ಪೋಷಕ ಮಕ್ಕಳ ಸಹಕಾರದೊಂದಿಗೆ ಆಡುವ ಆಟ ಅತ್ಯಂತ ಸಂತೋಷದಾಯಕವಾಗಿತ್ತು, ಎಲ್ಲರಿಗೂ ಸಿಹಿ ಅಡುಗೆ ಊಟ ಏರ್ಪಡಿಸಲಾಗಿತ್ತು.
ಮಕ್ಕಳು ಉತ್ತರ ಕರ್ನಾಟಕ ಶೈಲಿಯಲ್ಲಿ ಎಫ್ಎಲ್ಎನ್ ಕಲಿಕಾ ಹಬ್ಬವನ್ನು ಸಂಭಾಷಣೆ ಮೂಲಕ ಪರಿಚಯಿಸಿದರು. ಸ್ವಾಗತ ನೃತ್ಯ ಮಾಡಿದರು.
ಕಾರ್ಯಕ್ರಮದ ರೂವಾರಿಯಾದ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ ಹೆಚ್, ರವರು ಸರ್ವರನ್ನು ಸ್ವಾಗತಿಸುವುದರೊಂದಿಗೆ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಮುಖ್ಯ ಶಿಕ್ಷಕರಾದ ವಾಣಿ ರವರು ವಂದಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ತೇಜಸ್ವಿನಿ ನಡೆಸಿಕೊಟ್ಟರು.
