ದಾವಣಗೆರೆ (Davanagere )ಮಾ.12: ಯುವ ಜನತೆ ಈ ದೇಶದ ಆಸ್ತಿ, ದೇಶ ಭವಿಷ್ಯ ನಿಮ್ಮ ಕೈಯಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಾಯೋಗಿಕವಾಗಿ ಅನುಕರಣೆ ಮಾಡಲು ಹೋಗಿ ವ್ಯಸನಗಳಿಗೆ ದಾಸರಾಗುತ್ತಿರುವುದು ಹೆಚ್ಚಾಗಿದೆ. ಇದನ್ನು ತಡೆಗಟ್ಟುವ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಇದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.
ಬುಧವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಹಯೋಗದಲ್ಲಿ ಏರ್ಪಡಿಸಲಾದ “ಮದ್ಯ ಹಾಗೂ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣ ಹಾಗೂ ಜಾಗೃತಿ ಕಾರ್ಯಕ್ರಮ” ಉದ್ಘಾಟಿಸಿ ಅವರು ಮಾತಾಡಿದರು.
ಕೆಲವರು ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ಮಾಡುತ್ತಿದ್ದು, ಇದರಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಪೋಷಕರು ನಮ್ಮ ಹುಟ್ಟು, ಬೆಳವಣಿಗೆ ನೋಡಿ ಸಂಭ್ರಮಿಸುತ್ತಾರೆ. ಆದರೆ ನಾವು ಅವರ ಪ್ರೀತಿ, ನಂಬಿಕೆ ಉಳಿಸಿಕೊಳುವುದರಲ್ಲಿ ವಿಫಲರಾಗುತ್ತಿದ್ದೇವೆ. ಕೇವಲ ಮಾದಕ ವಸ್ತುಗಳ ವ್ಯಸನವಷ್ಟೇ ಮಾದಕವಲ್ಲ. ಅತಿಯಾದ ಮೊಬೈಲ್ ಗೀಳು ಕೂಡ ಒಂದು ರೀತಿಯ ವ್ಯಸನ. ತಮ್ಮ ಎಲ್ಲಾ ಹುಚ್ಚುತನದ ವ್ಯಸನಗಳಿಂದ ಹೊರಬರಬೇಕು. ಆಗಾದಾಗ ಮಾತ್ರ ದೇಶ, ನಾಡು, ಕುಟುಂಬ ಹಾಗೂ ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಿ ಬದುಕಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಯುವ ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಜಿಲ್ಲಾ ಸರ್ಜನ್ ಡಾ; ನಾಗೇಂದ್ರಪ್ಪ ಮಾತನಾಡಿ, ಮಾದಕ ವಸ್ತುಗಳ ಸೇವನೆಯು ಒಂದು ಸಾಮಾಜಿಕ ಪಿಡುಗು. ಇದನ್ನು ತೊಲಗಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾಜವನ್ನು ಪರಿವರ್ತನೆ ಮಾಡುವ ಶಕ್ತಿ ಹೆಣ್ಣಿಗಿದೆ. ಹಾಗಾಗಿ ಮಹಿಳಾ ಕಾಲೇಜಿನಲ್ಲಿ ಆಯೋಜನೆ ಮಾಡಿರುವುದು ಸಫಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚಿಗಟೇರಿ ಆಸ್ಪತ್ರೆಯ ಮನೋವೈದ್ಯ ಡಾ; ಮರುಳಸಿದ್ದಪ್ಪ ಉಪನ್ಯಾಸ ನೀಡಿ ಆಸ್ಪತ್ರೆಯಲ್ಲಿ ದಿನನಿತ್ಯ ಬರುವ ಅಪಘಾತಗಳಲ್ಲಿ ಶೇ 60 ಕ್ಕಿಂತಲೂ ಹೆಚ್ಚು ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ್ದು ಕಂಡು ಬರುತ್ತದೆ. ಯುವ ಜನರು ಮಾದಕ ವಸ್ತುಗಳಿಗೆ ಹೆಚ್ಚು ಬಲಿಯಾಗುತ್ತಿದ್ದು ಇದರಿಂದ ಹೊರಬರುವುದು ಕಷ್ಟಕರವಾಗಿದೆ. ಮದ್ಯ ಹಾಗೂ ಮಾದಕ ವಸ್ತುಗಳ ವ್ಯಸನದಿಂದ ಸಾಮಾಜಿಕ, ಆರ್ಥಿಕ, ದೈಹಿಕ, ಮಾನಸಿಕವಾಗಿ ಅನಾರೋಗ್ಯವಾಗುತ್ತಾರೆ. ಇಂತಹ ವ್ಯಸನಗಳಿಂದ ಮುಕ್ತರಾಗಲು ಚಿಗಟೇರಿ ಆಸ್ಪತ್ರೆ ಸೇರಿದಂತೆ ಬಾಪೂಜಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಜೊತೆಗೆ ವ್ಯಸನ ಮುಕ್ತ ಕೇಂದ್ರಗಳಿವೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಎಂ.ಮಂಜಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ತೊಪ್ಪಲ ಮಲ್ಲಿಕಾರ್ಜುನ ಸ್ವಾಗತಿಸಿದರು. ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು.
Read also : ಮಹಿಳೆಯರು ಸಂಕೋಲೆಗಳನ್ನು ಬದಿಗೊತ್ತಿ ಸಾಧನೆಗಷ್ಟೆ ಗಮನವಿರಲಿ : ರಾಜೇಶ್ವರಿ.ಎನ್ ಹೆಗಡೆ
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಚಾಲಕ ಭೀಮಪ್ಪ, ಎನ್.ಶಿವರಾಜ್ ಸೇರಿದಂತೆ ವಿದ್ಯಾರ್ಥಿಗಳು, ಸಿಬ್ಬಂದಿಯವರು ಉಪಸ್ಥಿತರಿದ್ದರು.ಕಲಾವಿದರಾದ ಐರಣಿ ಚಂದ್ರ, ಬನಪ್ಪ ಜಾಗೃತಿ ಗೀತೆಗಳನ್ನು ಹಾಡಿದರು.