ದಾವಣಗೆರೆ: ‘ಸಮಾಜದ ಕಟ್ಟಕಡೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರಿ ಶಾಲೆಗಳು ಬಹು ದೊಡ್ಡ ಕೊಡುಗೆ ನೀಡುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪ್ರತಿಯೊಬ್ಬ ವಿದ್ಯಾರ್ಥಿಗೂ ಉತ್ತಮ ಶಿಕ್ಷಣ ನೀಡಲು ಅಗತ್ಯ ಸೌಲಭ್ಯ ಒದಗಿಸಲು ಮುಂದಾಗಿದೆ’ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ತಾಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಈಚಘಟ್ಟ ಗ್ರಾಮದಲ್ಲಿ ಶುಕ್ರವಾರ 19 ಲಕ್ಷ ರೂ. ವೆಚ್ಚದ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ನಗರ ಪ್ರದೇಶದ ಮಕ್ಕಳಿಗೆ ಸಿಗುವ ಶಿಕ್ಷಣ, ಹಳ್ಳಿಗಳಲ್ಲಿ ಸಿಗಬೇಕೆಂಬ ಉದ್ದೇಶದಿಂದ ಹಿರಿಯ ಪ್ರಾಥಮಿಕ ಶಾಲೆಯನ್ನು ಮೇಲ್ದರ್ಜೆಗೆರಿಸಿ ಪ್ರೌಢಶಾಲೆಯನ್ನಾಗಿ ಮಾಡಲಾಗಿತ್ತು. ಆದರೆ ಕೊಠಡಿಗಳ ಸಮಸ್ಯೆಯಿಂದ ಮಕ್ಕಳು ಸಮುದಾಯ ಭವನದಲ್ಲಿ ಪಾಠ, ಪ್ರವಚನ ಮಾಡಲಾಗುತ್ತಿತ್ತು. ಇದನ್ನು ಗಮನಿಸಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ತೆಗೆದುಕೊಂಡು ಇಂದು ಭೂಮಿಪೂಜೆ ನೆರವೇರಿಸಲಾಗಿದೆ. ಗ್ರಾಮಸ್ಥರು ಗುಣಮಟ್ಟ ಕಾಮಗಾರಿಗೆ ನಿಗಾ ವಹಿಸಬೇಕೆಂದರು.
ಮುಂದಿನ ದಿನಗಳಲ್ಲಿ ಐದಾರು ಕೊಠಡಿಗಳ ನಿರ್ಮಾಣ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು. ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವ ಜೊತೆಗೆ ಮಕ್ಕಳ ಸಂಖ್ಯೆ ಹೆಚ್ಚಳ ಮಾಡಲು ಎಲ್ಲಾ ಶಿಕ್ಷಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರ ವಿರುದ್ಧ ಗರಂ: ಕಾರ್ಯಕ್ರಮ ಮುಗಿದ ಬಳಿಕ ಶಾಲೆಗೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ, ಶಿಕ್ಷಕರ ಹಾಜರಾತಿ, ಮಕ್ಕಳ ಹಾಜರಾತಿ, ಮಕ್ಕಳಿಗೆ ಪಾಠ, ಪ್ರವಚನದ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಶಿಕ್ಷಕರು ಹಾಜರಾತಿ ಪುಸಕ್ತದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನದ ಸಹಿಯನ್ನು ಒಂದೇ ಬಾರಿ ಮಾಡಿರುವುದನ್ನು ಕಂಡು ಶಿಕ್ಷಕರ ವಿರುದ್ಧ ಗರಂ ಆದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರೇವಣಸಿದ್ಧಪ್ಪ, ಶಿವಾನಂದಪ್ಪ, ಭಾಗ್ಯಮ್ಮ, ಕವಿತಾ, ಗ್ರಾಮದ ಮುಖಂಡರಾದ ಕರಿಬಸಪ್ಪ, ಶಿವಕುಮಾರ್, ಸತೀಶ್, ಕೆಂಚಪ್ಪ, ಎಂಜಿನಿಯರ್ ಆಸ್ಮಾ ಪರ್ವೀದ್, ಗುತ್ತಿಗೆದಾರ ಮಹಾಂತೇಶ್ ನಾಯ್ಕ್ ಹಾಗೂ ವಿಜಯಕುಮಾರ್, ಶಾಲಾ ಮುಖ್ಯ ಶಿಕ್ಷಕ ನಾಗರಾಜ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭೋವಿ, ಲಂಬಾಣಿ ಮತ್ತು ಆದಿ ಕರ್ನಾಟಕ ಕಾಲೋನಿಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ರಸ್ತೆ ಅಭಿವೃದ್ಧಿ, ಚರಂಡಿಗಳ ವ್ಯವಸ್ಥೆ ಮಾಡಬೇಕೆಂದು ನಿವಾಸಿಗಳು ಬೇಡಿಕೆ ಇಟ್ಟರು. ಮುಂದಿನ ದಿನಗಳಲ್ಲಿ ಸುಸಜ್ಜಿತ ಚರಂಡಿಗಳನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.