ದಾವಣಗೆರೆ :
ಅಭಿವೃದ್ದಿ ಹೊಂದಿದ ಹಾಗೂ ಏಕ ರಾಷ್ಟ್ರ ಮತ್ತು ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಗುರಿಯನ್ನು ಸಾಧಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಇನ್ನಷ್ಟು ಕ್ರಿಯಾಶೀಲ ಪ್ರಯತ್ನಗಳ ಅವಶ್ಯಕತೆ ಇದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ದಾವಣಗೆರೆಯಲ್ಲಿ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಮೃತ ಮಹೋತ್ಸವ ಭವನ ಉದ್ಘಾಟಿಸಿ ಮಾತನಾಡಿದರು.
ಜನರ ಜೀವನ ಮಟ್ಟ ಸುಧಾರಿಸಲು ತಾಂತ್ರಿಕತೆ ಪ್ರಮುಖ ಪಾತ್ರ
ತಾಂತ್ರಿಕ ಶಿಕ್ಷಣದಿಂದ ನುರಿತ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಮೂಲಕ, ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸುವ ಮೂಲಕ, ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ತಾಂತ್ರಿಕತೆ ಪ್ರಮುಖ ಪಾತ್ರ ವಹಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂತ್ರಜ್ಞಾನಗಳನ್ನು ಉತ್ತೇಜಿಸಲು ಸಕ್ರಿಯ ಪ್ರಯತ್ನಗಳನ್ನು ಮಾಡುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.
‘ಡಿಜಿಟಲ್ ಇಂಡಿಯಾ’ ಅಭಿಯಾನದಲ್ಲಿ ಸಕ್ರಿಯರಾಗಿ
ತಂತ್ರಜ್ಞಾನವು ನಾವು ಊಹಿಸುವುದಕ್ಕಿಂತ ವೇಗವಾಗಿ ಬದಲಾಗುತ್ತಿದೆ. ಆದ್ದರಿಂದ ನಮ್ಮ ಸಂಶೋಧಕರು, ವಿಜ್ಞಾನಿಗಳು ಮತ್ತು ತಜ್ಞರು ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನೆಚ್ಚರಿಕೆ ವಹಿಸುವುದು ಮತ್ತು ಅದಕ್ಕೆ ಅನುಗುಣವಾಗಿ ಯೋಜಿಸುವುದು ಅವಶ್ಯಕವಾಗಿದೆ. ‘ಡಿಜಿಟಲ್ ಇಂಡಿಯಾ’ ಅಭಿಯಾನದಲ್ಲಿ ನಮ್ಮ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವಿಜ್ಞಾನಿಗಳು ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸುವ ಮೂಲಕ ತಮ್ಮ ಸಕ್ರಿಯ ಪಾತ್ರವನ್ನು ವಹಿಸುವ ಅಗತ್ಯವಿದೆ. ಪ್ರಸ್ತುತ ಉತ್ಪಾದನೆ ಮತ್ತು ಉದ್ಯಮಶೀಲತೆಯ ಯುಗವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಮಾತನಾಡಿ, ದಾವಣಗೆರೆಯಲ್ಲಿ ಹಿಂದೆ ಸಾಕಷ್ಟು ಕಾಟನ್ ಮಿಲ್ಗಳು ಇದ್ದುದರಿಂದ ಮ್ಯಾಂಚೇಸ್ಟರ್ ಎಂದೇ ಕರೆಯಲಾಗುತ್ತಿತ್ತು. ಈ ಕಾಲೇಜು ಕಟ್ಟಲು ದೇವೇಂದ್ರಪ್ಪ, ತವನಪ್ಪ ಕುಟುಂಬ ಅಂದಿನ ಕಾಲದಲ್ಲಿ ರೂ.5 ಲಕ್ಷ ದೇಣಿಗೆ ನೀಡಿದ್ದರು. ಇಂದು ಅತ್ಯುತ್ತಮ ಕಾಲೇಜಾಗಿ ಬೆಳೆದಿದೆ. ಕಾಲೇಜು ಮೊದಲು ಮೈಸೂರು ವಿ.ವಿ. ನಂತರ ಕುವೆಂಪು ವಿವಿ ಹಾಗೂ ದಾವಣಗೆರೆ ವಿವಿ ವ್ಯಾಪ್ತಿಗೆ ಬಂದಿತು. ತಾಂತ್ರಿಕ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಬೇಕೆಂದು ವಿಟಿಯುಗೆ ಸೇರಿಸಲಾಗಿದ್ದು ಇದು ವಿಶ್ವವಿದ್ಯಾನಿಲಯದ ಏಕೈಕ ಕಾಲೇಜು ಆಗಿದೆ ಎಂದರು.
ಇಲ್ಲಿನ ಪ್ರಾಧ್ಯಾಪಕರ ವೇತನ ಸೇರಿದಂತೆ ಎಲ್ಲಾ ಆಡಳಿತಾತ್ಮಕ ನಿರ್ವಹಣೆಗಾಗಿ ಪ್ರತಿ ತಿಂಗಳು ರೂ.4 ಕೋಟಿ ಬೇಕಾಗಿದ್ದು ಇದರ ನಿರ್ವಹಣೆ ಕಷ್ಟವಾಗುತ್ತಿದ್ದು ಸರ್ಕಾರದಿಂದ ವೇತನ ನೀಡಲು ವಿಸಿ ಮನವಿ ಮಾಡಿದ್ದಾರೆ. ಈ ಹಿಂದೆ ವಿಶ್ವವಿದ್ಯಾನಿಲಯದಲ್ಲಿ ರೂ.500 ಕೋಟಿ ಠೇವಣಿ ಇದ್ದು ಆದಾಯ ತೆರಿಗೆ ಪಾವತಿಸಿಲ್ಲ ಎಂದು ಠೇವಣಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದರಿಂದ ವಿಶ್ವವಿದ್ಯಾನಿಲಯ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ತಕರಾರನ್ನು ಇತ್ಯರ್ಥ ಮಾಡಿ ಠೇವಣಿ ಆದಷ್ಟು ಬೇಗ ವಾಪಸ್ ಕೊಡಿಸಬೇಕೆಂದರು.
ಉನ್ನತ ಶಿಕ್ಷಣ ಸಚಿವರಾದ ಡಾ.ಎಂ ಸಿ ಸುಧಾಕರ್ ಮಾತನಾಡಿ, ದಾವಣಗೆರೆಯಲ್ಲಿ ದಂತ ವೈದ್ಯಕೀಯ ವಿದ್ಯಾರ್ಥಿಯಾಗಿ ಒಂದೂವರೆ ವರ್ಷ ನಡೆದ ಇಲ್ಲಿನ ಘಟನೆಗಳನ್ನು ಸ್ಮರಿಸುತ್ತಾ ಇಂದು ಉನ್ನತ ಶಿಕ್ಷಣ ಸಚಿವನಾಗಿದ್ದೇನೆ ಎಂದು ತನ್ನ ಸಂತೋಷ ವ್ಯಕ್ತಪಡಿಸಿದರು.
ಸಂಸದ ಡಾ. ಜಿ. ಎಂ. ಸಿದ್ದೇಶ್ವರ್, ಹರಿಹರ ಶಾಸಕ ಬಿ.ಪಿ.ಹರೀಶ್, ವಿಟಿಯು ಕುಲಪತಿ ಪ್ರೋ. ವಿದ್ಯಾಶಂಕರ್, ಬಿಡಿಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ.ಪಿ. ನಾಗರಾಜಪ್ಪ ಇತರರು ಇದ್ದರು.