ಹೊನ್ನಾಳಿ,12: ವೀರಶೈವರಿಗೆ ಜಾತಿ ಭೇದ ಇಲ್ಲ. ಸರ್ವರ ಏಳಿಗೆ ಬಯಸುವವರೇ ವೀರಶೈವರು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಸೇವಾ ಸಮಿತಿಯ ವತಿಯಿಂದ ಹಮ್ಮಿಕೊಂಡ ಇಷ್ಟಲಿಂಗ ಪೂಜೆ-ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ವೃತ್ತಿದರ್ಮ ಪಾಲಿಸಲು ಅನುಕೂಲ ಆಗಲಿ ಎಂಬ ಉದ್ದೇಶದಿಂದ ಜಾತಿ ಮಾಡಿಕೊಂಡಿದ್ದೇವೆ. ವೀರಶೈವ ಎಂದರೆ ಪ್ರತಿ ದಿನ ಇಷ್ಟಲಿಂಗ ಪೂಜಿಸುವವರು ಎಂಬ ಅರ್ಥ ಇದೆ. ಎಲ್ಲರನ್ನೂ ಗೌರವಿಸುವುದು, ಎಲ್ಲರೊಂದಿಗೆ ಪ್ರೀತಿಯಿಂದ ಜೀವಿಸುವುದು ಧರ್ಮವಾಗಿದೆ. ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವ ದಾರಿಯಲ್ಲಿ ಸಾಗುವುದೇ ನೈಜ ಧರ್ಮ.
ಆದ್ದರಿಂದ, ಎಲ್ಲರೂ ಧರ್ಮ ಮಾರ್ಗದಲ್ಲಿ ನಡೆದು ಉತ್ತಮ ಬದುಕು ಸಾಗಿಸಬೇಕು. ಸಮಾಜದಲ್ಲಿ ಎಲ್ಲರೊಂದಿಗೆ ಸಹಬಾಳ್ವೆ ನಡೆಸಬೇಕು. “ವೀರಶೈವ ಲಿಂಗಾಯತರೇ ನಾವೆಲ್ಲ ಒಂದು, ವಿಶ್ವವೇ ನಮ್ಮ ಬಂಧು” ಎಂಬ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಆಸ್ತಿಕತೆ-ನಾಸ್ತಿಕತೆ ಬಗ್ಗೆ ಪ್ರಾಚೀನ ಕಾಲದಿಂದಲೂ ವಾದ-ವಿವಾದಗಳು ನಡೆದುಕೊಂಡು ಬಂದಿವೆ. ಆದರೆ, ದೇವರ ಅಸ್ತಿತ್ವ ಅನನ್ಯ, ಅನುಪಮ. ದೇವರನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ನಮ್ಮ ದೇಹದಲ್ಲಿ ಪಂಚಭೂತಗಳ ಅಂಶಗಳು ಇವೆ. ದೇವರು ಇದ್ದಾನೆ ಎಂಬುದಕ್ಕೆ ನಮ್ಮ ಅಸ್ತಿತ್ವವೇ ಸಾಕ್ಷಿ ಎಂದು ಪ್ರತಿಪಾದಿಸಿದರು.
ಕೊಠಡಿಗಳ ನಿರ್ಮಾಣಕ್ಕೆ ಕ್ರಮ: ಶ್ರೀಶೈಲ ಪೀಠಕ್ಕೆ ಆಗಮಿಸುವ ಭಕ್ತರಿಗೆ ಕೊಠಡಿಗಳ ಕೊರತೆಯಿಂದಾಗಿ ಸಮಸ್ಯೆ ಆಗುತ್ತಿದೆ. ಇದನ್ನು ಮನಗಂಡು ಆಂಧ್ರಪ್ರದೇಶ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸಿ 10 ಎಕರೆ ಜಾಗವನ್ನು ಪಡೆದುಕೊಳ್ಳಲಾಗಿದೆ. ಆ ಪೈಕಿ 5 ಎಕರೆ ಪ್ರದೇಶದಲ್ಲಿ ಗೋಶಾಲೆ, ಐಸಿಎಸ್‍ಇ ಶಿಕ್ಷಣ ಸಂಸ್ಥೆ, ಕಂಬಿ ಮಂಟಪ, ಆಸ್ಪತ್ರೆ ಹಾಗೂ 500 ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಭಕ್ತರು 300 ಕೊಠಡಿಗಳ ನಿರ್ಮಾಣಕ್ಕೆ ಹಣ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಇತರ ಕಾರ್ಯಗಳಿಗೂ ಭಕ್ತರು ದಾನ ನೀಡಬಹುದು ಎಂದು ತಿಳಿಸಿದರು.
ಮುಂದಿನ ವರ್ಷ ಶ್ರೀಶೈಲ ಪಾದಯಾತ್ರೆ ಸಂದರ್ಭದಲ್ಲಿ ಹೊನ್ನಾಳಿಯಿಂದ ಶ್ರೀಶೈಲ ಪೀಠಕ್ಕೆ ಶ್ರೀ ಜಡೆಯ ಶಂಕರ ಮಹಾಸ್ವಾಮಿಗಳು ಮತ್ತು ಶ್ರೀ ಚನ್ನಪ್ಪ ಸ್ವಾಮಿಗಳ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ತರುವ ಸಂಕಲ್ಪವನ್ನು ಹಿರೇಕಲ್ಮಠದ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾಡಿದ್ದಾರೆ. ಈ ಮಹತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ. ಶ್ರೀಶೈಲಕ್ಕೆ ಪಾದಯಾತ್ರೆ ಬನ್ನಿ ಎಂದು ಭಕ್ತರಿಗೆ ನುಡಿದರು.
ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯನಿಗೆ ಆಯುಷ್ಯ, ಕೀರ್ತಿ, ಯಶೋಬಲ ಸೇರಿದಂತೆ ಸಕಲವೂ ಗುರುಗಳ ಸೇವೆಯಿಂದ ಲಭಿಸುತ್ತದೆ. ಆದ್ದರಿಂದ, ಎಲ್ಲರೂ ಸೇವಾ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಪಾವನರಾಗಬೇಕು ಎಂದು ತಿಳಿಸಿದರು.
ಚೀಲೂರು ಗ್ರಾಮಸ್ಥರಲ್ಲಿ ಭಕ್ತಿ-ಭಾವ ಮನೆ ಮಾಡಿದೆ. ಭಕ್ತಿ ಸಮರ್ಪಿಸುವಲ್ಲಿ ಚೀಲೂರು ಗ್ರಾಮಸ್ಥರು ಅತ್ಯಂತ ಹೆಚ್ಚಿನ ಶ್ರೀಮಂತರಾಗಿದ್ದಾರೆ. ಯಾವುದೇ ಕೆಲಸ ಮಾಡುವ ಮೊದಲು ಗುರುವಿನ ಆಶೀರ್ವಾದ ಪಡೆದುಕೊಳ್ಳುವುದನ್ನು ಚೀಲೂರು ಗ್ರಾಮಸ್ಥರು ಪರಿಪಾಲಿಸುತ್ತಿದ್ದಾರೆ. ಪಾದಯಾತ್ರೆಯಿಂದ ಮನುಷ್ಯನ ಆರೋಗ್ಯ ವರ್ಧಿಸುತ್ತದೆ. ರಕ್ತದೊತ್ತಡ, ಸಕ್ಕರೆ ಖಾಯಿಲೆ, ಹೃದಯ ಸಂಬಂಧಿ ರೋಗಗಳು ಸೇರಿದಂತೆ ಅನೇಕ ವ್ಯಾಧಿಗಳನ್ನು ಇಲ್ಲವಾಗಿಸಬಹುದು. ಆದ್ದರಿಂದ, ಎಲ್ಲರೂ ಪಾದಯಾತ್ರೆ ಮಾಡಬೇಕು. ಹೊನ್ನಾಳಿಯಿಂದ ಶ್ರೀಶೈಲ ಪೀಠಕ್ಕೆ ನಾವು ಕಳೆದ ಎಂಟು ವರ್ಷಗಳಿಂದ ಪಾದಯಾತ್ರೆ ಮಾಡುತ್ತಿದ್ದೇವೆ.
ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಚೀಲೂರು ಗ್ರಾಮದ ಮುಖಂಡರಾದ ಯತೀಶ್‍ಚಂದ್ರ ಕೋರಿ, ಚೇತನ್ ಹುಲಿಕೆರೆ, ಗಿರೀಶ್ ಹುಲಿಕೆರೆ, ಜವಳಿ ಪ್ರದೀಪ್, ಜವಳಿ ಚಂದ್ರಶೇಖರ್, ಜವಳಿ ಮಹೇಶ್, ಕೆ. ಶಿವಲಿಂಗಪ್ಪ, ಕೆ. ಮಲ್ಲಿಕಾರ್ಜುನ್, ಜವಳಿ ವೀರೇಶ್ ಇತರರು ಇದ್ದರು.
ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ಕಟ್ಟಡ ನಿರ್ಮಾಣದ ದಾನಿಗಳನ್ನು ಸನ್ಮಾನಿಸಲಾಯಿತು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಧರ್ಮಸಭೆಗೂ ಮುನ್ನ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಭಕ್ತರು ಪಾಲ್ಗೊಂಡಿದ್ದರು.