ದಾವಣಗೆರೆ : ನಮ್ಮ ಬೇಡಿಕೆಗಳು ಈಡೇರಿಸದಿದ್ದರೆ ಕೆಲಸ ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುವುದು ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ(108) ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಮಂಜುನಾಥ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 108 ಅಂಬ್ಯುಲೆನ್ಸ್ ಸೇವೆಯಲ್ಲಿ ಇ.ಎಂ.ಟಿ(ಸ್ಯಾಫ್ ನರ್ಸ್) ಹಾಗೂ ಪೈಲಟ್(ಚಾಲಕರು) ಸಿಬ್ಬಂದಿ ಹಗಲಿರುಳು ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದರೂ, ಕಳೆದ ಡಿಸೆಂಬರ್ ತಿಂಗಳಿಂದ ಈವರೆಗೆ ವೇತನ ಪಾವತಿಯಾಗಿಲ್ಲ. ಸುಮಾರು 5 ವರ್ಷಗಳಿಂದ ಮೂರ್ನಾಲ್ಕು ತಿಂಗಳಿಗೊಮ್ಮೆಯೂ ವೇತನ ಪಡೆಯಲು ಪರದಾಡುವಂತಾಗಿದೆ.
ಹೆಚ್ಚುವರಿ ಹೊಸ ವೇತನವನ್ನು ಕೇವಲ 6 ತಿಂಗಳುಗಳ ಕಾಲ ಮಾತ್ರ ನೀಡಿದ್ದು, ಮಾರ್ಚ 2023ರಿಂದ ಇ.ಎಂ.ಟಿ.ಗೆ 32,774 ರೂ. ಮತ್ತು ಪೈಲಟ್ ಗೆ 29,221 ರೂ. ನೀಡಲಾಗುತ್ತಿದೆ. ಯಾವುದೇ ಕಾರಣ ನೀಡದೇ ಇ.ಎಂ.ಟಿ.ಗೆ 4,000 ರೂ., ಪೈಲಟ್ ಗೆ 6,000 ರೂ.ಗಳನ್ನು ಏಕಾಏಕಿ ಕಡಿತಗೊಳಿಸಲಾಗಿದೆ ಎಂದು ದೂರಿದರು.
ನಮಗೆ ಬರಬೇಕಾಗಿರುವ ಎರಡು ವರ್ಷದ ಹೆಚ್ಚುವರಿ ವೇತನ ಪಾವತಿ ಮಾಡಿಲ್ಲ. ಪ್ರಸ್ತುತ ವೇತನವನ್ನು ಮತ್ತೊಮ್ಮೆ ಕಡಿತಗೊಳಿಸಲು ಇಲಾಖೆ ಸಜ್ಜಾಗಿರುವ ಕುರಿತು ವದಂತಿಗಳು ಹರಿದಾಡುತ್ತಿವೆ. ಆರೋಗ್ಯ ಸಚಿವರು, ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಂಸ್ಥೆಯ ಮುಖ್ಯಸ್ಥರು ನಮ್ಮ ಸಂಘಟನೆಯ ರಾಜ್ಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ಈ ಎಲ್ಲಾ ಗೊಂದಲಗಳಿಗೆ ಇತಿಶ್ರೀ ಹಾಕಬೇಕು.
ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು. ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಎಲ್ಲಾ ಸಿಬ್ಬಂದಿಗಳು ಸಾಮೂಹಿಕ ರಜೆ ಪಡೆದುಕೊಂಡು ಸೇವೆಯನ್ನು ಸ್ಥಗಿತಗೊಳಿಸುತ್ತೇವೆ. ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಸಂಸ್ಥೆಯ ಅಧಿಕಾರಿ ವರ್ಗದವರು ನೇರ ಹೊಣೆಯಾಗಿರುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ರಮೇಶ ನಾಯ್ಕ, ಮುಖಂಡರಾದ ನಟರಾಜ, ವೆಂಕಟೇಶ, ತಿಪ್ಪಣ್ಣ, ರಾಜನಾಯ್ಕ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.