ದಾವಣಗೆರೆ : ಎರಡು ರಾಷ್ಟ್ರೀಯ ಪಕ್ಷಗಳು ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಟಿಕೇಟ್ ನೀಡದೆ ಅನ್ಯಾಯ ಮಾಡಿವೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಹೋರಾಟಕ್ಕಾದರೂ ಸಮಾಜ ಸಿದ್ದವಿದೆ
ಹರಿಹರದ ಪಂಚಮಸಾಲಿ ಪೀಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯ ಹೆಚ್ಚು ಇರುವ ಕ್ಷೇತ್ರಗಳಲ್ಲೇ ಟಿಕೆಟ್ ನೀಡದೇ ಅನ್ಯಾಯ ಮಾಡಲಾಗಿದೆ. ಸೋದರ ಸಮಾಜದವರಿಗೆ ಸಂಖ್ಯೆ ಕಡಿಮೆ ಇದ್ದರೂ ನಾಲ್ಕು ಪ್ಲಸ್ ಟಿಕೆಟ್ ನೀಡಲಾಗಿದೆ. ನಮ್ಮ ಸಮುದಾಯದ ಸಂಖ್ಯೆ ಜಾಸ್ತಿ ಇದ್ದರೂ ಆ ಪ್ರಮಾಣದಲ್ಲಿ ಟಿಕೇಟ್ ನೀಡಿಲ್ಲ.
ಉತ್ತರ ಕರ್ನಾಟಕದ ೧೫ ಜಿಲ್ಲೆಗಳಲ್ಲಿ ಪಂಚಮಸಾಲಿ ಸಬಲ
ಈ ಅನ್ಯಾಯ ಸರಿಪಡಿಸದಿದ್ದರೆ ಎಂತಹ ಹೋರಾಟಕ್ಕಾದರೂ ಸಮಾಜ ಸಿದ್ದವಿದೆ. ಉತ್ತರ ಕರ್ನಾಟಕದ ೧೫ ಜಿಲ್ಲೆಗಳಲ್ಲಿ ಪಂಚಮಸಾಲಿ ಸಬಲವಾಗಿದೆ.
ರಾಜ್ಯದಲ್ಲಿ ೮೦ ಲಕ್ಷ ಜನಸಂಖ್ಯೆ ಇರುವ ಸಮುದಾಯಕ್ಕೆ ಅನ್ಯಾಯವಾಗಿದೆ. ಬಹುಸಂಖ್ಯಾತ ಪಂಚಮಸಾಲಿ ಸಮುದಾಯಕ್ಕೆ ಟಿಕೇಟ್ ತಪ್ಪಿಸಲಾಗಿದೆ. ರಾಷ್ಟ್ರೀಯ ಪಕ್ಷಗಳು ಈ ಅನ್ಯಾಯ ಸರಿಪಡಿಸದಿದ್ದರೆ ವೀರಶೈವ ಲಿಂಗಾಯತ ಹರಿಹರ ಪೀಠದ ನೇತೃತ್ವದಲ್ಲೇ ಈ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇನ್ನೂ ಅವಕಾಶವಿದೆ ಸರಿಪಡಿಸಿ
ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ ಕೇವಲ ಒಂದೇ ಒಂದು ಸೀಟ್ ನೀಡಿದೆ. ಕಾಂಗ್ರೆಸ್ ೨ ಸೀಟು ನೀಡಿದೆ. ಬಿಜೆಪಿಯವರು ಪಂಚಮಸಾಲಿ ಸಮುದಾಯಕ್ಕೆ ೩ ಸೀಟು ನೀಡಬೇಕು. ಬಿ ಫಾರಂ ಕೊಡಲು ಇನ್ನು ಸಮಯಾವಕಾಶ ಇದೆ ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಹೇಳಿದರು.
ರಾಷ್ಟ್ರೀಯ ಪಕ್ಷಗಳು ಸಮಾಜವನ್ನು ನಿರ್ಲಕ್ಷ್ಯ
ಸುಮಾರು ೧೫ ಲೋಕಸಭಾ ಕ್ಷೇತ್ರಗಳಲ್ಲಿ ಸಮುದಾಯ ಫಲಿತಾಂಶದಲ್ಲಿ ನಿರ್ಣಾಯಕವಾಗಿದೆ. ರಾಜ್ಯದ ಆಕಾಂಕ್ಷಿಗಳು ನಮಗೆ ಕರೆ ಮಾಡಿ ತಮಗಾದ ಅನ್ಯಾಯ ತೋಡಿಕೊಂಡಿದ್ದಾರೆ. ಟಿಕೇಟ್ ಹಂಚುವ ವಿಚಾರವಾಗಿ ಎರಡು ರಾಷ್ಟ್ರೀಯ ಪಕ್ಷಗಳು ಸಮಾಜವನ್ನು ನಿರ್ಲಕ್ಷ್ಯ ಮಾಡಿದ್ದಾರೆ.ಎರಡು ರಾಷ್ಟ್ರೀಯ ಪಕ್ಷಗಳು ಪಕ್ಷದಲ್ಲಿನ ನಿಷ್ಠಾವಂತ ನಾಯಕರಿಗೆ ಟಿಕೇಟ್ ಕೊಡಿ ಇಲ್ಲವಾದರೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಡಿದರು.
ಎರಡು ರಾಷ್ಟ್ರೀಯ ಪಕ್ಷಗಳು ಸಮುದಾಯದ ಸಂಖ್ಯೆಗೆ ಅನುಗುಣವಾಗಿ ಟಿಕೆಟ್ ನೀಡಿಲ್ಲ. ಏಪ್ರಿಲ್ ನಂತರ ಪಂಚಮಸಾಲಿ ಸಮುದಾಯ ಚುನಾವಣೆ ಮೇಲೆ ಪರಿಣಾಮ ಬೀರಬಲ್ಲ ನಿರ್ಣಯ ಕೈಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿ.ಸಿ.ಉಮಾಪತಿ,ಎಚ್.ಎಸ್.ನಾಗರಾಜ ಸೇರಿದಂತೆ ಇತರರು ಇದ್ದರು.