ದಾವಣಗೆರೆ (Davanagere) : ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನದ ಹಿನ್ನಲೆಯಲ್ಲಿ ಏ.14ರಂದು ಕರ್ನಾಟಕ ಭೀಮ್ ಸೇನೆ ವತಿಯಿಂದ ನಗರದಲ್ಲಿ ಪಥ ಸಂಚಲನ ಏರ್ಪಡಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಆರ್.ಸೂರ್ಯಪ್ರಕಾಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ಅಂದು ಬೆಳಗ್ಗೆ 8.30ಕ್ಕೆ ಪಾಲಿಕೆ ಕಚೇರಿ ಆವರಣದಿಂದ ಪಿಬಿ ರಸ್ತೆ, ಗಾಂಧಿ ವೃತ್ತ, ಜಯದೇವ ವೃತ್ತದ ಮುಖಾಂತರ ಅಂಬೇಡ್ಕರ್ ವೃತ್ತದ ವರೆಗೆ ಪಥ ಸಂಚಲನ ನಡೆಯಲಿದ್ದು, ಈ ಪಥ ಸಂಚಲನದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರಕಾರಿ ನೌಕರರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಅಂಬೇಡ್ಕರ್ ಜನ್ಮ ದಿನದ ಹಿನ್ನೆಲೆಯಲ್ಲಿ ನಮ್ಮ ಸಂಘಟನೆಯಿಂದ ರೈಲ್ವೆ ಮತ್ತು ಬಸ್ ನಿಲ್ದಾಣ, ಸರಕಾರಿ ಕಚೇರಿಗಳಿಗೆ ಅಂಬೇಡ್ಕರ್ ಭಾವಚಿತ್ರ ಇರುವ ಬ್ಯಾಡ್ಜ್ ಒದಗಿಸಲಾಗುವುದು. ಈ ಬ್ಯಾಡ್ಜ್ ಧರಿಸಿಕೊಂಡು ಸರಕಾರಿ ನೌಕರರು ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಳ್ಳಬೇಕು ಎಂದರು.
Read also : ಗಣತಿಗೆ ಬಂದಾಗ “ಮಾದಿಗರು” ಎಂದು ನಮೂದಿಸಿ
ಅಂಬೇಡ್ಕರ್ ಜಯಂತಿಯಲ್ಲಿ ಸರಕಾರಿ ನೌಕರರು ಪಾಲ್ಗೊಳ್ಳದೇ ಕೇವಲ ಕಾಟಾಚಾರಕ್ಕೆ ಮಾತ್ರ ಆಚರಿಸಲಾಗುತ್ತಿದೆ. ಆದ್ದರಿಂದ ಸರಕಾರ ಎಲ್ಲಾ ನೌಕರರು ಕಡ್ಡಾಯವಾಗಿ ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಹಾಗೂ ಗುಡಿ, ಚರ್ಚ್, ಮಸೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸುವಂತೆ ಸುತ್ತೋಲೆ ಹೊರಡಿಸಬೇಕು ಎಂದು ಒತ್ತಾಯಿಸಿದರು.