ದಾವಣಗೆರೆ (Davanagere): ಹರಿಹರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನದಿ ದಡದ ಗ್ರಾಮಗಳ ಪಟ್ಟಾ ಭೂಮಿ ಹಾಗೂ ಸರ್ಕಾರಿ ಜಮೀನುಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಅದನ್ನು ತಕ್ಷಣ ತಡೆಯಬೇಕು. ಇಲ್ಲವಾದರೆ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಬಣದ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹರಿಹರ ತಾಲ್ಲೂಕಿನ ಹರ್ಲಾಪುರ, ಗುತ್ತೂರು, ಸಾರಥಿ, ಪಾಮೇನಹಳ್ಳಿ, ದೀಟೂರು, ಚಿಕ್ಕಬಿದರಿ, ಕರಲಹಳ್ಳಿ, ಬುಳ್ಳಾಪುರ, ಹಲಸಬಾಳು, ರಾಜನಹಳ್ಳಿ, ತಿಮ್ಲಾಪುರ, ಧೂಳೆಹೊಳೆ, ಇಂಗಳಗೊಂದಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿನ ಪಟ್ಟಾ ಭೂಮಿ ಹಾಗೂ ಸರ್ಕಾರಿ ಜಮೀನುಗಳಲ್ಲಿ ಅಕ್ರಮ ಮಣ್ಣಿನ ಗಣಿಗಾರಿಕೆ ಈ ಹಿಂದಿನ ವರ್ಷಗಳಲ್ಲಿ ಅವ್ಯಾಹತವಾಗಿ ನಡೆಸಲಾಗಿದೆ ಎಂದು ಹೇಳಿದರು.
ನದಿ ದಡದ ಹಲವಾರು ಗ್ರಾಮಗಳಲ್ಲಿ 15 ರಿಂದ 20 ಅಡಿಗಳ ಆಳದವರೆಗೆ ಜೆಸಿಬಿ, ಇಟಾಚಿಯಂತಹ ಬೃಹತ್ ಯಂತ್ರಗಳಿಂದ ಗುಂಡಿಗಳನ್ನು ತೋಡುತ್ತಾ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಲಾಗಿದೆ. ಭೂ ವಿಜ್ಞಾನ ಮತ್ತು ಗಣಿ, ಕಂದಾಯ ಮತ್ತು ಕೃಷಿ ಇಲಾಖೆಯಿಂದ ಅನುಮತಿ ಪಡೆದು ಏರಿ ಅಥವಾ ಕಲ್ಲುಗಳಿದ್ದರೆ ಮೂರು ಅಡಿಯಷ್ಟು ಮಾತ್ರ ಜಮೀನುಗಳನ್ನು ಸಮತಟ್ಟ ಮಾಡಲು ಅವಕಾಶವಿದೆ, ಮೂರು ಅಡಿಗಿಂತ ಹೆಚ್ಚು ಮಣ್ಣನ್ನು ತೆಗೆಸಿದರೆ ಅಂತಹ ಪಟ್ಟಾ ಜಮೀನುಗಳನ್ನು ಸರ್ಕಾರ ಭೂ ಕಂದಾಯ ಕಾಯ್ದೆ ಅನ್ವಯ ತನ್ನ ಸುಪರ್ದಿಗೆ ಪಡೆಯಲು ಅವಕಾಶವಿದ್ದರೂ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಗಿರೀಶ್ ದೇವರ ಮನಿ ಮಾತನಾಡಿ, ಮಣ್ಣು ಗಣಿಗಾರಿಕೆ ಆರಂಭಿಸಲು ಪಟ್ಟಭದ್ರರು ಈಗಾಗಲೇ ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಅನೌಪಚಾರಿಕ ಅನುಮತಿಗೆ ಕೋರಿದ್ದಾರೆ. ಈ ಹಿಂದಿನ ಹತ್ತಾರು ವರ್ಷಗಳ ಕಾಲ ನಡೆಸಿರುವ ಅಕ್ರಮ ಮಣ್ಣು ಗಣಿಗಾರಿಕೆಯಿಂದ ತಾಲ್ಲೂಕಿನ ಪರಿಸರ ಹಾಳಾಗಿದೆ, ಈ ವರ್ಷವೂ ಗಣಿಗಾರಿಕೆಗೆ ಅಲಿಖಿತವಾಗಿ ಅವಕಾಶ ನೀಡಲಾಗಿದ್ದು ತಾಲ್ಲೂಕಿನ ಭೌಗೋಳಿಕ ರಚನೆ ಮೇಲೆ ತೀವ್ರ ದುಷ್ಪರಿಣಾಮ ಬೀರುವ ಅಪಾಯವಿದೆ ಎಂದು ಕಿಡಿಕಾರಿದರು.
ಹರಿಹರ ತಾಲ್ಲೂಕಿನಲ್ಲಿ ಈವರೆಗೆ ನಡೆದಿರುವ ಅಕ್ರಮ ಮಣ್ಣು ಗಣಿಗಾರಿಕೆಯ ದುಷ್ಪರಿಣಾಮ ಗಮನಿಸಿದರೆ ಮತ್ತೊಂದು ರಿಪಬ್ಲಿಕ್ ಬಳ್ಳಾರಿ ಯಂತೆ ತಪ್ಪು ಹೆಜ್ಜೆಯತ್ತ ಸಾಗುತ್ತಿದೆಯೆ ಎಂಬ ದಟ್ಟ ಅನುಮಾನ ಮೂಡುತ್ತಿದೆ, ಕೂಡಲೆ ರಾಜ್ಯ ಸರ್ಕಾರವು ಹರಿಹರ ತಾಲ್ಲೂಕಿನ ಅಕ್ರಮ ಗಣಿಗಾರಿಕೆಯನ್ನು ಪರಿಶೀಲಿಸಲು ದ್ರೋಣ್ ಯಂತ್ರದ ಸಹಾಯ ಪಡೆಯಬೇಕು, ಇದಕ್ಕೆ ಸಹಕಾರ ನೀಡಿದ ಸಂಬಂಧಿತ ಹಿಂದಿನ, ಈಗಿನ ಇಲಾಖಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಆದ್ದರಿಂದ ಎಷ್ಟೆ ಒತ್ತಡ ಬಂದರೂ ಕೂಡ ಮಣ್ಣು ಗಣಿಗಾರಿಕೆಗೆ ಅವಕಾಶ ನೀಡಬಾರದು, ಈ ಬಗ್ಗೆ ಒಂದು ವಾರದೊಳಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು. ಇದನ್ನು ಮೀರಿ ಒಂದು ವೇಳೆ ಅವಕಾಶ ನೀಡಿದಲ್ಲಿ ಡಿಎಸ್ ಎಸ್ ಸಂಘಟನೆಯು ಇತರ ಪ್ರಗತಿಪರ ಹಾಗೂ ಪರಿಸರ ಸಂಘಟನೆಗಳ ಸಹಕಾರದೊಂದಿಗೆ ತೀವ್ರತರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಕೆ.ಗೋಪಿನಾಥ್ ಚಾರ್, ಡಿಎಸ್.ಎಸ್. ಹರಿಹರ ತಾಲೂಕಿನ ಸಂಚಾಲಕ ಪಿ.ಜೆ.ಮಹಾಂತೇಶ್, ಸುನೀಲ್ ಹೊಟ್ಟಿಗನಹಳ್ಳಿ, ಮಂಜುನಾಥ್ ಹಾಲುವರ್ತಿ, ಶಿವಶಂಕರ್ ಇತರರು ಇದ್ದರು.