ದಾವಣಗೆರೆ: ಕಟ್ಟಡ ಕಾರ್ಮಿಕರ ಹಕ್ಕೋತ್ತಾಯಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಎಸಿ ಮೂಲಕ ಮುಖ್ಯಮಂತ್ರಿ, ಕಾರ್ಮಿಕ ಮಂತ್ರಿ ಹಾಗೂ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಕಾರ್ಮಿಕ ಮುಖಂಡ ಆವರಗೆರೆ ಹೆಚ್.ಜಿ.ಉಮೇಶ್, ಕಾರ್ಮಿಕರಿಗೆ ಅವಶ್ಯಕತೆಯಿಲ್ಲದ ಕಿಟ್ ನೀಡುವುದನ್ನು ತಕ್ಷಣದಲ್ಲೇ ನಿಲ್ಲಿಸಬೇಕು, ಕರ್ನಾಟಕ ಹೈಕೋರ್ಟ ನೀಡಿರುವ ಕಿಟ್ಗಳ ವಿತರಣೆಯ ತಡೆಯಾಜ್ಞೆಯನ್ನು ಸರ್ಕಾರ ಚಾಚುತಪ್ಪದೇ ಪಾಲಿಸಬೇಕು. ಕಾರ್ಮಿಕರ ಆರೋಗ್ಯ ತಪಾಸಣೆಯ ಹೆಸರಲ್ಲಿ ಖಾಸಗೀ ಆಸ್ಪತ್ರೆಗಳಿಗೆ ಕೊಟ್ಟಿರುವ ಗುತ್ತಿಗೆಯನ್ನು ರದ್ದುಮಾಡಿ, ಕಟ್ಟಡ ಕಾರ್ಮಿಕರಿಗೆ ಬಿಬಿಎಂಪಿ ಮಾದರಿಯಲ್ಲಿ ಇಎಸ್.ಐ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಮೊದಲು ಇದ್ದ ಶೈಕ್ಷಣಿಕ ಧನಸಹಾಯವನ್ನು ಮುಂದುವರೆಸಬೇಕು ಹಾಗೂ ಹೈ ಕೋರ್ಟ ಆದೇಶದಂತೆ ಬಾಕಿ ಇರುವ ಎಲ್ಲಾ ವಿದ್ಯಾರ್ಥಿಗಳಿಗೆ ಧನಸಹಾಯವನ್ನು ಬಿಡುಗಡೆ ಮಾಡಬೇಕು. ಶೈಕ್ಷಣಿಕ ಧನಸಹಾಯ ಅರ್ಜಿಯನ್ನು ಕಲ್ಯಾಣ ಮಂಡಳಿಯ ವೆಬ್ ಸೈಟ್ ನಲ್ಲಿಯೇ ಅರ್ಜಿಹಾಕಲು ಕ್ರಮಕೈಗೊಳ್ಳಬೇಕು. ನಕಲಿ ಕಾರ್ಮಿಕರ ಹೆಸರಿನಲ್ಲಿ ನೈಜ ಕಾರ್ಮಿಕರ ಕಾರ್ಡಗಳನ್ನು ತಿರಸ್ಕರಿಸುವುದನ್ನು ನಿಲ್ಲಿಸಬೇಕು ಮತ್ತು ಬಾಕಿ ಇರುವ ಧನಸಹಾಯ ಅರ್ಜಿಗಳನ್ನು ಬೇಗನೇ ವಿಲೇವಾರಿ ಮಾಡಬೇಕೆಂದು ಮನವಿ ಮಾಡಿದರು.
ಸಿಐಟಿಯು ಮುಖಂಡ ಕೆ.ಹೆಚ್.ಅನಂದರಾಜ್ ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಏಕಪಕ್ಷೀಯ ತೀರ್ಮಾನ ಕೈಬಿಡಬೇಕು. ಕಾರ್ಮಿಕ ಸಂಘಟನೆಗಳ ಜೊತೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆಸಿ ತ್ರಿಪಕ್ಷೀಯ ತೀರ್ಮಾನಕ್ಕೆ ಬರಬೇಕು. ಕಾರ್ಮಿಕರಿಗೆ ಹೊರೆಯಾಗಿರುವ ದಿನನಿತ್ಯದ ಬಳಕೆಯ ವಸ್ತುಗಳಾದ ಪೆಟ್ರೋಲ್, ಡಿಸೇಲ್, ಹಾಲಿನದರ, ತರಕಾರಿಗಳ ಬೆಲೆ ಸೇರಿದಂತೆ ದಿನ ನಿತ್ಯ ಬಳಕೆಯ ವಸ್ತುಗಳ ದರ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿ.ಲಕ್ಷ್ಮಣ, ಶಿವಕುಮಾರ್.ಡಿ.ಶೆಟ್ಟರ್, ಹೆಚ್‍ಕೆಆರ್ ಸುರೇಶ್, ಎಸ್.ಕೆ.ಆದಿಲ್ ಖಾನ್, ಮಹಮ್ಮದ್ ರಫೀಕ್, ನಾಗಮ್ಮ, ಸತೀಶ್ ಅರವಿಂದ್, ಲಕ್ಷ್ಮಣ್, ಭರಮಪ್ಪ, ಹನುಮಂತಪ್ಪ, ತಿಪ್ಪೇಶ್ ಇತರರು ಇದ್ದರು.