ದಾವಣಗೆರೆ ಏ.22 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಸಹಾಯದೊಂದಿಗೆ ಸೋಮವಾರ ಹೈಸ್ಕೂಲ್ ಮೈದಾನದಲ್ಲಿ ಗಾಳಿಪಟ ಹಾರಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು .
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ವಿಭಿನ್ನ ರೀತಿಯಲ್ಲಿ ಉನ್ನತ ಮಟ್ಟದಲ್ಲಿ ಗಾಳಿಪಟ ಹಾರಿಸುವ ಮೂಲಕ ಮತದಾನ ಜಾಗೃತಿ ಸಂದೇಶ ನೀಡಲಾಗಿದೆ. ಗಾಳಿಪಟವು ಹೇಗೆ ಸ್ವತಂತ್ರವಾಗಿ ಹಾರಾಡುತ್ತದೆ, ಅದೇ ರೀತಿ ನೀವು ಸಹ ಸ್ವತಂತ್ರವಾಗಿ, ನ್ಯಾಯ ಸಮ್ಮತವಾಗಿ, ಯಾವುದೇ ಆಮಿಷಗಳಿಗೆ ಒಳಗಾಗದೆ ಮೇ 7 ರಂದು ತಮ್ಮ ಅಮೂಲ್ಯ ಮತ ಚಲಾಯಿಸಬೇಕೆಂದು ತಿಳಿಸಿದರು.
ಗಾಳಿಪಟದಲ್ಲಿ ಮತದಾರರ ಸಂದೇಹ, ಮಾಹಿತಿಗೆ 1950 ಬಳಸಿ, ಯಾವುದೇ ಮತದಾರರು ಮತದಾನದಿಂದ ಹೊರಗುಳಿಯಬಾರದು. ಮೇ 7 ರಂದು ನಮ್ಮ ನಡೆ, ಮತಗಟ್ಟೆ ಕಡೆ ಎಂಬಿತ್ಯಾದಿ ಘೋಷವಾಕ್ಯಗಳು ಗಾಳಿಪಟದಲ್ಲಿ ರಾರಾಜಿಸುತ್ತಿದ್ದವು.
ಚುನಾವಣಾ ಐಕಾನ್ ಚಿತ್ರನಟ ಪೃಥ್ವಿ ಶಾಮನೂರ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರು ಡಾ; ಚಂದ್ರಶೇಖರ್ ಸುಂಕದ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗಾಯಿತ್ರಿ ಕೆ.ಎಚ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬೇಬಿ ಸುನೀತ ಹಾಗೂ ಇನ್ನಿತರರು ಉಪಸ್ಥಿತರಿದ್ದರು.