ದಾವಣಗೆರೆ: ಕಾರ್ಡಿಯೋಪಲ್ಮನರಿ ರಿಸಸಿಟೇಶನ್ (ಸಿಪಿಆರ್) ಎಂದರೆ ಹೃದಯ ಮತ್ತು ಶ್ವಾಸಕೋಶಗಳ ಪುನಶ್ಚೇತನ. ಅಂದರೆ ಹೃದಯ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಾಗ ಮಾಡುವ ತುರ್ತು ಜೀವ ರಕ್ಷಕ ವಿಧಾನ ಎಂದು ಬಾಪೂಜಿ ಮಕ್ಕಳ ಆಸ್ಪತ್ರೆ ಪ್ರಾಧ್ಯಾಪಕ ಡಾ. ಮಧು ಪೂಜಾರ್ ಹೇಳಿದರು.
ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಕಳೆದ ವಾರ ಏರ್ಪಾಡಾಗಿದ್ದ `ಜೀವ ರಕ್ಷಣೆಗೆ ಮೊದಲ ಸಹಾಯ ಸಿಪಿಆರ್ ಬಗ್ಗೆ ನಿಮಗೆ ಗೊತ್ತೇ’ ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.
ಸಿಪಿಆರ್ ಅರಿವಿನ ಕೊರತೆಯಿಂದಾಗಿ ದೊಡ್ಡ ಆರೋಗ್ಯ ಸವಾಲು ಎದುರಾಗಿದೆ. ಭಾರತದ ಜನಸಂಖ್ಯೆಯಲ್ಲಿ ಶೇ.2 ಗಿಂತ ಕಡಿಮೆ ಜನರಿಗೆ ಮಾತ್ರ ಸಿಪಿಆರ್ ಬಗ್ಗೆ ಅರಿವು ಇದೆ. ಬಹುತೇಕ ಆಕಸ್ಮಿಕ ಹೃದಯ ನಿಲುಗಡೆ ಪ್ರಕರಣಗಳಲ್ಲಿ ಜನರಿಂದ ತಕ್ಷಣ ನೆರವು ಸಿಗುವುದಿಲ್ಲ. ಭಾರತದಲ್ಲಿ ಹೃದಯ ನಿಲುಗಡೆ ಅನುಭವಿಸುವವರಲ್ಲಿ ಶೇ.95 ಗಿಂತ ಹೆಚ್ಚು ಮಂದಿ ಆಸ್ಪತ್ರೆಗೆ ಸೇರುವ ಮೊದಲು ಸಾಯುತ್ತಾರೆ. ಹೃದಯ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಾಗ ಮಾಡುವ ಈ ತುರ್ತು ಜೀವ ರಕ್ಷಕ ವಿಧಾನದಲ್ಲಿ ಎದೆ ಸಂಕೋಚನಗಳು ಅಥವಾ ರೆಸ್ಕ್ಯೂ ಉಸಿರಾಟ ನೀಡುವುದು ಒಳಗೊಂಡಿದೆ. ಆಮ್ಲಜನಕಯುಕ್ತ ರಕ್ತವನ್ನು ಶರೀರದ ಪ್ರಮುಖ ಅಂಗಗಳಿಗೆ ಕಳುಹಿಸುವುದು. ಹೃದಯದ ಸಾಮಾನ್ಯ ಕಾರ್ಯ ಪ್ರಾರಂಭವಾಗುವವರೆಗೆ ಅಥವಾ ಉನ್ನತ ವೈದ್ಯಕೀಯ ನೆರವು ಸಿಗುವವರೆಗೆ ಚಿಕಿತ್ಸೆ ಅವಶ್ಯಕತೆ ಇರುತ್ತದೆ. ಸಮಸ್ಯೆ ಎದುರಾದಾಗ ಜೋರಾಗಿ ಕೂಗಿ. ಸುತ್ತಮುತ್ತಲಿನವರ ನೆರವು ಪಡೆಯಿರಿ. ನಿಮ್ಮ ಮೊಬೈಲ್ ಬಳಸಿ ಸ್ಥಳೀಯ ತುರ್ತುಸೇವೆ ಸಂಖ್ಯೆಗೆ ಕರೆ ಮಾಡಿ ನೆರವು ಪಡೆಯಬೇಕು ಎಂದರು.
ಬಾಯಿಯಿಂದ ಬಾಯಿಗೆ ಉಸಿರಾಡಲು ಮೂಗಿನ ಹೊಳ್ಳೆಗಳನ್ನು ಬಿಗಿಯಾಗಿ ಮುಚ್ಚಿ. ವ್ಯಕ್ತಿಯ ಬಾಯಿಯನ್ನು ನಿಮ್ಮ ಬಾಯಿಯಿಂದ ಮುಚ್ಚಿ ಸೀಲ್ ಮಾಡಿ. ಎರಡು ಬಾರಿ ಉಸಿರಿನ ರಕ್ಷಣೆ ನೀಡಲು ಸಿದ್ಧರಾಗಿ. ಮೊದಲ ಉಸಿರು ನೀಡಲು ಒಂದು ಸೆಕೆಂಡ್ ದೀರ್ಘ ಉಸಿರು ನೀಡಿ. ಎದೆ ಏರುತ್ತದೆಯೇ ಎಂದು ನೋಡಿ. ಎದೆ ಏಳುತ್ತಿದ್ದರೆ ಎರಡನೇ ಉಸಿರನ್ನು ನೀಡಿ. ಎದೆ ಏಳದಿದ್ದರೆ ತಲೆಯನ್ನು ಓರೆಯಾಗಿಸಿ. ಗಲ್ಲವನ್ನು ಎತ್ತುವ ತಂತ್ರವನ್ನು ಪುನರಾವರ್ತಿಸಿ. ನಂತರ ಎರಡನೇ ಉಸಿರನ್ನು ನೀಡಿ ಎಂಬ ಸಲಹೆಯನ್ನು ಪ್ರಾತ್ಯಕ್ಷಿಕೆ ಮೂಲಕ ಅವರು ವಿವರಿಸಿದರು.
ಆಸ್ಪತ್ರೆ ಹೊರಗಿನ ಹೃದಯ ನಿಲುಗಡೆ ಸಂದರ್ಭಗಳಲ್ಲಿ ಸಾಮಾನ್ಯ ಸಿಪಿಆರ್ ಸಾಧ್ಯವಾಗದಿದ್ದರೆ ಬಳಸುವ ಜೀವ ರಕ್ಷಕ ವಿಧಾನವಾಗಿ, ವಿಶೇಷವಾಗಿ ವಯಸ್ಕರ ಹೃದಯ ನಿಲುಗಡೆ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಈ ಚಿಕಿತ್ಸೆ ನೀಡಬಹುದು. ಕುಟುಂಬವೇ ಮೊದಲು. ಆದ್ದರಿಂದ ನಿಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ಈ ತರಬೇತಿ ಅಗತ್ಯ. ಒಂದು ವೇಳೆ ನೀವು ಸಿಪಿಆರ್ ತಿಳಿದಿದ್ದರೆ ಸುರಕ್ಷಿತರು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ. ಜಿ. ಗುರುಪ್ರಸಾದ್, ಮಕ್ಕಳ ತಜ್ಞ ಡಾ. ಬಾಣಾಪುರ್ ಮಠ್, ಡಾ. ಕೌಜಲಗಿ, ಡಾ. ಮೃತ್ಯುಂಜಯ, ಡಾ. ರೇವಪ್ಪ, ಡಾ. ಮಾನಸ ಕುಸಗೂರು, ಡಾ. ಡಿ. ಎಂ. ಶಶಿಧರ್, ವ್ಯವಸ್ಥಾಪಕ ಎಸ್. ಎನ್. ಗುಬ್ಬಿ ಮತ್ತಿತರರು ಉಪಸ್ಥಿತರಿದ್ದರು.