ದಾವಣಗೆರೆ,ಮಾ.14
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿಂತನೆಗಳು, ಆದರ್ಶಗಳನ್ನು ತಿಳಿಸಿಕೊಡುವುದರೊಂದಿಗೆ ಇತಿಹಾಸ, ಸಾಹಿತ್ಯಾತ್ಮಕ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಪುಸ್ತಕವುಳ್ಳ ಗ್ರಂಥಾಲಯವನ್ನು ಗಾಂಧಿ ಭವನದಲ್ಲಿ ಸ್ಥಾಪನೆ ಮಾಡುವುದರೊಂದಿಗೆ ಸಾರ್ವಜನಿಕರಿಗೆ, ಓದುಗರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದು ಇದರ ಸದುಪಯೋಗ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಕರೆ ನೀಡಿದರು.
ನಗರದ ಹೊರ ವಲಯದಲ್ಲಿರುವ ರಾಮನಗರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಿರ್ಮಾಣ ಮಾಡಿರುವ ಗಾಂಧಿ ಭವನದಲ್ಲಿ ಗ್ರಂಥಾಲಯ ಇಲಾಖೆಯಿಂದ ನಗರ ಗ್ರಂಥಾಲಯ ಶಾಖೆಯನ್ನು ಪ್ರಾರಂಭಿಸಿ ಮಾತನಾಡಿದರು.
ಗಾಂಧಿ ಚಿಂತನೆಗಳನ್ನು ಜನರು ಮತ್ತು ಯುವ ಜನರಲ್ಲಿ ಬೆಳೆಸಬೇಕೆಂದು ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ ಮಾಡಲು ಉದ್ದೇಶಿಸಿ ದಾವಣಗೆರೆಯಲ್ಲಿ ಸುಂದರವಾದ ಗಾಂಧಿ ಭವನ ನಿರ್ಮಾಣ ಮಾಡಲಾಗಿದೆ. ಗಾಂಧಿ ಭವನದಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಬೇಕೆಂದು ಇಲ್ಲಿ ಗ್ರಂಥಾಲಯ ಶಾಖೆಯನ್ನು ಸ್ಥಾಪನೆ ಮಾಡುವ ಮೂಲಕ ಗಾಂಧಿ ಕುರಿತ ಪುಸ್ತಕಗಳು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳು, ಕಥೆ, ಕಾದಂಬರಿ ಸೇರಿದಂತೆ ಪಠ್ಯಕ್ರಮದ ಪುಸ್ತಕಗಳನ್ನು ಇಲ್ಲಿನ ಗ್ರಂಥಾಲಯದಲ್ಲಿ ಸಂಗ್ರಹಿಸಲಾಗಿದೆ. ಮತ್ತು ದಿನನಿತ್ಯ ಬರುವ ರಾಜ್ಯ ಮಟ್ಟದ ಪ್ರಮುಖ ದಿನಪತ್ರಿಕೆಗಳು, ಸ್ಥಳೀಯ ಪತ್ರಿಕೆಗಳು ಇಲ್ಲಿ ಓದುಗರಿಗೆ ಲಭಿಸಲಿದೆ ಎಂದರು.
ಗ್ರಂಥಾಲಯವು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮುಕ್ತವಾಗಿದ್ದು ಪ್ರಶಾಂತತೆ ಕಾಪಾಡಿಕೊಂಡು ಓದುಗರು ಇದರ ಲಾಭ ಪಡೆಯಬಹುದಾಗಿದೆ. ಪ್ರತಿ ಸೋಮವಾರ, ಎರಡನೇ ಮಂಗಳವಾರ, 4 ನೇ ಶನಿವಾರ ಹಾಗೂ ವಿಶೇಷ ಸರ್ಕಾರಿ ರಜಾ ದಿನಗಳಂದು ಮಾತ್ರ ಗ್ರಂಥಾಲಯಕ್ಕೆ ರಜೆ ಇರುತ್ತದೆ. ಉಳಿದಂತೆ ಪ್ರತಿ ನಿತ್ಯ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಗ್ರಂಥಾಲಯ ಓದುಗರಿಗೆ ತೆರೆದಿರುತ್ತದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ, ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕರಾದ ಪಿ.ಆರ್.ತಿಪ್ಪೇಸ್ವಾಮಿ, ಅವರಗೆರೆ ರುದ್ರಮುನಿ, ಐಗೂರು ತಿಮ್ಮಣ್ಣ, ಹನುಮನಹಳ್ಳಿ ರಾಜು, ಪಿ.ಆಂಜಿನಪ್ಪ, ಬಸವರಾಜು, ಉಷಾರಾಣಿ, ನೀಲಕಂಠಪ್ಪ ಉಪಸ್ಥಿತರಿದ್ದರು.
ರು.
ಗಾಂಧಿ ಭವನದಲ್ಲಿ ಗ್ರಂಥಾಲಯ ಆರಂಭ
