ದಾವಣಗೆರೆ (Davanagere) : ನಗರದ ಎಂಸಿಸಿ ಬಿ ಬ್ಲಾಕ್ ನ ವಿವಿಧ ಪ್ರದೇಶಗಳಿಗೆ ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್ ಸಾಬ್, ಉಪಮೇಯರ್ ಸೋಗಿ ಶಾಂತಕುಮಾರ್, ಆಯುಕ್ತೆ ರೇಣುಕಾ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ವಾರ್ಡ್ ನ ಸ್ವಚ್ಛತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕೆ. ಚಮನ್ ಸಾಬ್ ಅವರು, ಪಾಲಿಕೆಯ ಅಧಿಕಾರಿಗಳೊಂದಿಗೆ ಎಲ್ಲಾ ವಾರ್ಡ್ ಗಳಿಗೆ ಭೇಟಿ ನೀಡುತ್ತಿದ್ದೇವೆ. ವಾರ್ಡ್ ಗಳಲ್ಲಿನ ಸಮಸ್ಯೆಗಳನ್ನು ತಿಳಿಯುವ ಕೆಲಸ ಮಾಡಲಾಗುತ್ತಿದೆ. ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ವಾರ್ಡ್ ಗಳಲ್ಲಿನ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಎಂಸಿಸಿ ಬಿ ಬ್ಲಾಕ್ ವಾರ್ಡ್ ನ ಪ್ರದೇಶಗಳಿಗೆ ಭೇಟಿ ನೀಡಿದ್ದು, ಇಲ್ಲಿನ ಸ್ವಚ್ಛತೆ ಮೆಚ್ಚುವಂಥದ್ದು. ಇದೊಂದು ಮಾದರಿ ವಾರ್ಡ್ ಎಂದರೂ ತಪ್ಪಾಗಲಾರದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವಾರ್ಡ್ ಜನರ ಕುಂದುಕೊರತೆ ಆಲಿಸುವ ಜೊತೆಗೆ ಸ್ವಚ್ಥತೆ, ಕಸ ನಿರ್ವಹಣೆ, ರಸ್ತೆಗಳಲ್ಲಿ ಗುಂಡಿ ಬೀಳದಂತೆ ಎಚ್ಚರ ವಹಿಸುವುದೂ ಸೇರಿದಂತೆ ಹೆಚ್ಚಿನ ಅನುದಾನ ತಂದು ಉತ್ತಮ ಕಾರ್ಯ ಮಾಡುತ್ತಿರುವ ಪಾಲಿಕೆ ಸದಸ್ಯರೂ ಆದ ಆಡಳಿತ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ಅವರ ಕಾರ್ಯವೈಖರಿ ಪ್ರಶಂಸನೀಯ. ಜನರೊಂದಿಗಿನ ಒಡನಾಟ, ಅಭಿವೃದ್ಧಿ ಕಾರ್ಯಗಳು, ಶುಚಿತ್ವಕ್ಕೆ ಜಾಸ್ತಿ ಆದ್ಯತೆ ನೀಡಲಾಗಿದೆ. ನಾವು ನೋಡಿದಾಗಲೇ ಇದು ಗೊತ್ತಾಗುತ್ತದೆ. ಮಾದರಿ ವಾರ್ಡ್ ಮಾತ್ರವಲ್ಲ, ಮಾದರಿ ಕಾರ್ಪೊರೇಟರ್ ಎಂಬ ಪ್ರಶಸ್ತಿ ನೀಡಬಹುದು. ಅಷ್ಟು ಶುದ್ಧವಾಗಿ ವಾರ್ಡ್ ಇದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆಯ ಆಯುಕ್ತೆ ರೇಣುಕಾ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿನ ಕೆಲ ವಾರ್ಡ್ ಗಳಲ್ಲಿ ಶುಚಿತ್ವದ ಸಮಸ್ಯೆ ಇದೆ. ಕಸ ವಿಲೇವಾರಿಯ ತೊಂದರೆಯೂ ಆದೆ. ಆದ್ರೆ, ಎಂಸಿಸಿ ಬಿ ಬ್ಲಾಕ್ ನಲ್ಲಿ ಈ ರೀತಿಯ ಸಮಸ್ಯೆಗಳು ಇಲ್ಲ. ಕಸ ನಿರ್ವಹಣೆ ತುಂಬಾ ಚೆನ್ನಾಗಿ ಆಗುತ್ತಿದೆ. ಇದು ಹೀಗೆ ಮುಂದುವರಿಯಲಿ. ಮತ್ತಷ್ಟು ಒಳ್ಳೆಯ ಕೆಲಸ ಆಗಲಿ ಎಂದು ಹಾರೈಸಿದರು.
ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು ಮಾತನಾಡಿ, ವಾರ್ಡ್ ನಲ್ಲಿನ ಸ್ವಚ್ಛತೆಗೆ ಜನರು ನೀಡಿದ ಸಹಕಾರವೇ ಕಾರಣ. ಕಸ ವಿಲೇವಾರಿಯ ಯಾವುದೇ ಸಮಸ್ಯೆ ಇಲ್ಲ. ನಾಗರಿಕರು ನೀಡಿದ ಸೂಚನೆಯನ್ನು ಪಾಲಿಸುತ್ತಿದ್ದಾರೆ. ಇದರಿಂದಾಗಿಯೇ ವಾರ್ಡ್ ಇಷ್ಟೊಂದು ಶುಚಿತ್ವದಿಂದ ಇರಲು ಸಾಧ್ಯವಾಗಿದೆ.
Read also : Relationship | ಸಂಬಂಧಗಳೆಂದರೆ ಹೀಗೆಕೇ…?
ಏನೇ ಸಮಸ್ಯೆ ಇದ್ದರೂ ಕೂಡಲೇ ಸ್ಪಂದಿಸುವ ಕಾರ್ಯ ಮಾಡಲಾಗುತ್ತಿದೆ. ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಈಗಾಗಲೇ ವಾರ್ಡ್ ನ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಅನುದಾನ ನೀಡಲಿದ್ದಾರೆ. ಒಟ್ಟಾರೆ ವಾರ್ಡ್ ನ ಮತ್ತಷ್ಟು ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧನಾಗಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಸೂಪರಿಟೆಡೆಂಟ್ ಎಂಜಿನಿಯರ್, ಎಕ್ಸಿಕ್ಯೂಟೀವ್ ಇಂಜಿನಿಯರ್, ಎಇ, ಎಇಇ, ವಾಟರ್ ವಿಭಾಗದ ಸಿಬ್ಬಂದಿ, ಅಧಿಕಾರಿಗಳು ಮತ್ತಿತರರು ಹಾಜರಿದ್ದರು.