Kannada News | Dinamaana.com | 25-05-2024
ಧರ್ಮಾಧಾರಿತ ರಾಜಕಾರಣದ ಒಳಸುಳಿಗಳಿಗೆ ಸಿಕ್ಕ ಭಾರತೀಯ ರಾಜಕಾರಣಕ್ಕೀಗ ಸಂಕಷ್ಟದ ಕಾಲ. ಗಾಂಧಿ, ಅಂಬೇಡ್ಕರ್, ಮಾರ್ಕ್ಸ್ ಮತ್ತು ಲೋಹಿಯಾರಂಥವರ ನೆನಪುಗಳೂ ಇಲ್ಲದ ಅಪಾಯಕಾರಿ ರಾಜಕಾರಣದತ್ತ ಭಾರತ ಸಾಗುತ್ತಿದೆ.
ಎಲ್ಲೋ ಅಲ್ಲೊಂದು ಇಲ್ಲೊಂದು ಗಾಂಧಿವಾದಿ, ಲೋಹಿಯಾ ವಾದಿ, ಅಂಬೇಡ್ಕರ್ ವಾದಿಗಳ, ಮಾರ್ಕ್ಸ್ ವಾದಿಗಳ ಕ್ಷೀಣ ದನಿಗಳು ಕೇಳಿಸುತ್ತಿವೆಯಾದರೂ, ವಿರಳ ಸಂಖ್ಯೆಯ ಪ್ರಾಮಾಣಿಕ ರಾಜಕಾರಣಿಗಳು ವಿನಾಶದ ಅಂಚಿನಲ್ಲಿರುವಂತೆ ಕಾಣಿಸುತ್ತಿದ್ದಾರೆ.
ಜನರ ಶ್ರಮದ ಬೆವರಿಗೆ ಸರಿಯಾದ ಬೆಲೆ ಇಲ್ಲ
ಕಾಲ ಬದಲಾಗಿದೆ. ಜನರೂ ಸಹ ವಿಷಯಗಳನ್ನು ಸ್ವೀಕರಿಸುವ ವೇಗವೂ ಸಹ ಬದಲಾಗಿದೆ.ಇಂತಹ ವೇಗದ ಬದುಕಿನಲ್ಲಿ ಸೋಷಿಯಲ್ ಮೀಡಿಯಾ, ಟಿ.ವಿ.ಚಾನೆಲ್ ಗಳ ಗದ್ದಲದಂತಿರುವ ವಿಶ್ಲೇಷಣೆಗಳು ಮತ್ತಿತರ ಮೀಡಿಯಾಗಳಿಂದಾಗಿ ಜನರ ಶ್ರಮದ ಬೆವರಿಗೆ ಸರಿಯಾದ ಬೆಲೆ ನಿರ್ಧಾರವಾಗುತ್ತಿಲ್ಲ. ಸತ್ಯ-ವಾಸ್ತವಾಂಶಗಳನ್ನು ದೂರವಿರಿಸಿ ಇಂದು ವಿವಾದಗಳು ಸೃಷ್ಟಿಸುವ ಮೀಡಿಯಾ.
ಭಾರತದ ರಾಜಕಾರಣ ಆರೋಗ್ಯಪೂರ್ಣವಾಗಿರಬೇಕಾದರೆ, ದೇಶದ ನ್ಯಾಯಾಂಗ ಮತ್ತು ಮಾಧ್ಯಮಗಳ ಕೈ-ಬಾಯಿಗಳು ಶುದ್ಧವಾಗಿರಬೇಕು. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸೈದ್ಧಾಂತಿಕ ಬಂಡಾಯದ ಬಾವುಟಗಳು, ಹೋರಾಟದ ಧ್ವಜಗಳು ಹಾಜರಾಗಬೇಕಿತ್ತು.ಆದರೆ, ಸದ್ಯದ ಭಾರತದ ತುಂಬೆಲ್ಲ ಧರ್ಮದ ಬಾವುಟಗಳು ರಾರಾಜಿಸುತ್ತಿರುವುದು ಒಳ್ಳೆಯ ಲಕ್ಷಣವಲ್ಲ.
ಹುಸಿ ರಾಷ್ಟ್ರೀಯತೆ, ಹಿಂದುತ್ವ ಮುನ್ನಲೆಗೆ ಅಪಾಯದ ಮುನ್ಸೂಚನೆ
ರಾಜಕೀಯ ಎಂಬುದು ಕಡು ಕಷ್ಟದ, ತನು ಮನ ಧನ ತ್ಯಾಗದ ಕ್ರಿಯೆಯಾಗಬೇಕಿತ್ತು. ಜನತೆಯ ಪ್ರೀತಿ, ಉತ್ಸಾಹ, ಉಕ್ಕಿಸುವ ಸೇವಾ ಮನೋಭಾವದ ಕ್ರಿಯೆಯಾಗಬೇಕಿತ್ತು. ಆದರೆ, ಇವತ್ತಿನ ಯುವ ತಲೆಮಾರಿನ ಮತದಾರರಿಗೆ ಗಾಂಧಿ,ಅಂಬೇಡ್ಕರ್,ಜೇಪಿ,ಲೋಹಿಯಾ ಗುರುತೇ ಇಲ್ಲವೇನೋ ಎಂಬಂತೆ,ಅವರ ಎದೆಗಳ ತುಂಬಾ ಹುಸಿ ರಾಷ್ಟ್ರೀಯತೆ, ಹಿಂದುತ್ವ ಮುಂತಾದುವುಗಳು ಮುನ್ನೆಲೆಗೆ ಬಂದಿರುವುದು ಅಪಾಯದ ಮುನ್ಸೂಚನೆ ಎಂದೇ ಭಾವಿಸಬೇಕಿದೆ.
ಭಾರತ ಕೇವಲ 27 ರಾಜ್ಯಗಳ ಒಕ್ಕೂಟ ಮಾತ್ರವಲ್ಲ.ಇದು ಸುಮಾರು 5000 ಜಾತಿಗಳ ಜನರನ್ನು ಒಳಗೊಂಡ ಸಂಕೀರ್ಣ ದೇಶವಾಗಿದೆ. ಒಂದು ಅಧ್ಯಯನದ ಪ್ರಕಾರ ದೇಶದಲ್ಲಿ 4653 ಜಾತಿಗಳ ಅಸ್ತಿತ್ವವನ್ನು ದಾಖಲಿಸಲಾಗಿದೆ. ಜಾತಿಗಳು ಸಮಾನಾಂತರ ರೇಖೆಗಳ ರೀತಿಯಲ್ಲಿ ಇರದೇ ಒನ್ ಬೈ ಒನ್ ಕ್ರಮಾನುಗತ ಕ್ರಮಗಳ ಮೇಲೆ ಜೋಡಿಸಲಾಗಿದೆ.ಹೀಗೆ ಶ್ರೇಣೀಕರಿಸಲಾದ ಜಾತಿಗಳು ಮೂಲದ ಆಧಾರದ ಮೇಲೆ ವರ್ಗಗಳಾಗಿವೆ. ಡಾ.ಬಿ.ಆರ್.ಅಂಬೇಡ್ಕರ್ ಗುರುತಿಸಿದ ಹಾಗೆ ಜಾತಿ ವ್ಯವಸ್ಥೆಯು ಒಂದು ಬಹುಮಹಡಿ ಕಟ್ಟಡವಾಗಿದ್ದ ಹಾಗೆ.ಆದರೆ, ಈ ಬಹುಮಹಡಿಗಳ ಕಟ್ಟಡಕ್ಕೆ ಮೆಟ್ಟಿಲುಗಳು ಇಲ್ಲ ಎಂದರು.
ಮೇಲಿದ್ದವನು ಕೆಳಗಿಳಿದು ಬರಲು,ಅಥವಾ ಕೆಳಗಿದ್ದವನು ಮೇಲಕ್ಕೆ ಹೋಗಲು ಅವಕಾಶಗಳಿಲ್ಲದ ರೀತಿಯಲ್ಲಿ ಈ ದೇಶದ ಜಾತಿ ವ್ಯವಸ್ಥೆ ರೂಪುಗೊಂಡಿದೆ.ಮೇಲಿನ ಜಾತಿಯವನು ಮೇಲೆಯೇ ಇದ್ದರೆ,ಕೆಳಗಿದ್ದವನು ಕೆಳಗಡೆಯೇ ಇರಬೇಕಾಗುತ್ತದೆ ಎಂದಿದ್ದರು.
ಇಂತಹ ಸಂಕೀರ್ಣ ದೇಶದಲ್ಲಿ ಒಂದು ಜಾತಿ-ಮತ್ತೊಂದಕ್ಕಿಂತ ಆಚಾರ,ವಿಚಾರ,ಉಡುಗೆ-ತೊಡುಗೆಗಳಿಂದಲೂ ಸಹ ಭಿನ್ನವಾಗಿರುವುದು ಕಂಡುಬರುತ್ತದೆ.ಇಲ್ಲಿರುವ ಯಾವ ಜಾತಿಗಳೂ ಸಹ ಒಂದೇ ರೀತಿಯ ಸ್ಥಾನಮಾನಗಳನ್ನು ಹೊಂದಿಲ್ಲ. ಪ್ರತಿಯೊಂದು ಜಾತಿಯೂ ಕೂಡ ತನ್ನದೇ ಆದ ಶ್ರೇಣಿಯನ್ನು ಹೊಂದಿದೆ.
ಪ್ರಪಂಚದ ಇನ್ಯಾವ ದೇಶಗಳಲ್ಲೂ ಶ್ರೇಣೀಕೃತ ಜಾತಿ ವ್ಯವಸ್ಥೆಯಿಲ್ಲ
ಭಾರತದಲ್ಲಿರುವಷ್ಟು ಶ್ರೇಣೀಕೃತ ಜಾತಿ ವ್ಯವಸ್ಥೆ ಪ್ರಪಂಚದ ಇನ್ಯಾವ ದೇಶಗಳಲ್ಲೂ ಕಂಡುಬರುವುದಿಲ್ಲ. ಬ್ರಾಹ್ಮಣರಿಂದ ಹಿಡಿದು ಅಸ್ಪೃಶ್ಯರವರೆಗಿನ ಶ್ರೇಣೀಕೃತ ಸಮಾಜದಲ್ಲಿನ ಪ್ರತಿಯೊಂದು ಜಾತಿಯೂ ಸಹ ಸೈದ್ಧಾಂತಿಕವಾಗಿ ಪರಸ್ಪರ ಒಪ್ಪಿಕೊಳ್ಳುವ ಒಂದೇ ಒಂದು ಜಾತಿಯೂ ಭಾರತದಲ್ಲಿಲ್ಲ.ಇಂತಹ ದೇಶದಲ್ಲಿ ಜನರು ಆಗಾಗ ಅಸಮಾನತೆಯ ಬೆಂಕಿಗೆ,ಅಸಹಿಷ್ಣುತೆ,ಅನ್ಯಾಯಗಳಿಗೆ ಮತ್ತೆ ಮತ್ತೆ ತುತ್ತಾಗುತ್ತಲೇ ಇರುತ್ತಾರೆ.
ಒಂದು ಜಾತಿಯಿಂದ ಮತ್ತೊಂದು ಜಾತಿಗೆ ಮತಾಂತರವಾಗುವುದು ಸಾಧ್ಯವಿಲ್ಲ
ಇಂದಿನ ಭಾರತದಲ್ಲಿ ಒಬ್ಬ ಸಾಮಾನ್ಯ ಪ್ರಜೆ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಬಹಳ ಸುಲಭವಾಗಿ ಹೋಗಲು ಅವಕಾಶವಿದೆ. ಹಾಗೆಯೇ ಒಂದು ಭಾಷೆಯಿಂದ ಮತ್ತೊಂದು ಭಾಷೆಯನ್ನು ಮಾತನಾಡಲು ಸ್ವತಂತ್ರ ಕೂಡ ಆಗಿದ್ದಾನೆ.ಆದರೆ, ಒಂದು ಜಾತಿಯಿಂದ ಮತ್ತೊಂದು ಜಾತಿಗೆ ಮತಾಂತರವಾಗುವುದು ಸಾಧ್ಯವಿಲ್ಲ.
ಭಾರತೀಯರಲ್ಲಿ’ಜಾತಿ’ ಎಂಬುದರ ಬೇರು ಬಹಳ ಆಳಕ್ಕೆ ಇಳಿದಿದೆ
ಭಾರತೀಯರಲ್ಲಿ’ಜಾತಿ’ ಎಂಬುದರ ಬೇರು ಬಹಳ ಆಳಕ್ಕೆ ಇಳಿದಿದೆ. ಹಾಗಾಗಿ,ಇಲ್ಲಿನ ಹಿಂದೂಗಳು ಜಾತಿಗಳಲ್ಲಿ ಹುಟ್ಟುತ್ತಾರೆ. ಜಾತಿಗಳಲ್ಲಿ ಕೆಲಸ ಮಾಡುತ್ತಾರೆ. ಜಾತಿಗಳಲ್ಲಿ ಮದುವೆಯಾಗುತ್ತಾರೆ. ಜಾತಿಗಳಲ್ಲಿ ಸಾಯುತ್ತಾರೆ ಮತ್ತು ಯಾವಾಗಲೂ ಪ್ರತ್ಯೇಕವಾದ ಜಾತಿಗೆ ಒಂದರಂತೆ ಇರುವ ಸ್ಮಶಾನಗಳಲ್ಲಿ ಹೂಳುತ್ತಾರೆ, ಸುಡುತ್ತಾರೆ.ಇದು ವಾಸ್ತವ.
ಹುಟ್ಟಿನೊಂದಿಗೆ ಅಂಟಿಕೊಂಡು ಬರುವ ಜಾತಿಮೂಲವು ಮನುಷ್ಯನನ್ನು ಮನುಷ್ಯನನ್ನಾಗಿ ನೋಡದೆ ಇರುವಂತಹ ಕ್ರೌರ್ಯದತ್ತ ಭಾರತ ಸಾಗುತ್ತಿದೆ. ದಿನೇ ದಿನೇ ಜಾತಿಯ ಭಿನ್ನತೆಗಳು,ಆಚರಣೆಗಳ ಜನರ ನಡುವೆ ಕೇವಲ ಮೌನ ಅಂತರವನ್ನು ಹೆಚ್ಚಿಸುತ್ತಿದ್ದ ಕಾಲದಿಂದ ನಾವೀಗ ‘ಬೆಂಕಿ’ಹಚ್ಚುವ,ಸುಡುವ,ಕೊಚ್ಚಿಹಾಕುವ ಮಾತುಗಳನ್ನು ಕೇಳುತ್ತಿದ್ದೇವೆ. ಕರುಳ ಕಂದಮ್ಮಗಳನ್ನು ಮರ್ಯಾದಾಗೇಡು ಹತ್ಯೆಗಳವರೆಗೆ ಬಂದು ನಿಂತಿದ್ದೇವೆ. ಜಾತಿ ಎಂಬುದು ನಿಸ್ಸಂದೇಹವಾಗಿಯೂ ತಾರತಮ್ಯದ ಬಹುದೊಡ್ಡ ರೂಪವಾಗಿದೆ.
ಧರ್ಮ ಮತ್ತು ಬಣ್ಣಕ್ಕಿಂತ ಜಾತಿ ಬಹಳ ಆಳವಾಗಿದೆ
ಸುಮಾರು 250 ಮಿಲಿಯನ್ನಿಗಿಂತಲೂ ಹೆಚ್ಚಿರುವ ಇಲ್ಲಿನ ಹೊಲೆಯರು,ಮಾದಿಗರು,ಚಾಂಡಾಲರು ಮುಂತಾದ ಅಸ್ಪೃಶ್ಯರಿಗೆ ನೀಡಲಾದ ಎಲ್ಲಾ ರೀತಿಯ ಜಾತಿ ತಾರತಮ್ಯಗಳನ್ನು ಹೊಂದಿರುವುದು ಸುಳ್ಳಲ್ಲ. ಎಲ್ಲಾ ಮನುಷ್ಯರು ಸ್ವತಂತ್ರರು ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಸಮಾನವಾಗಿ ಹೊಂದಿದ್ದಾರೆ ಎಂದು ನಾವು ಎಷ್ಟೇ ಹೇಳಿಕೊಂಡರೂ ಸಹ,ವಾಸ್ತವ ಭಾರತದ ಕಥಾನಕಗಳು ಮತ್ತೆ ಮತ್ತೆ ಕರಾಳ ಭಾರತದ ದರ್ಶನಗಳನ್ನು ಮೂಡಿಸುತ್ತಲೇ ಇರುತ್ತವೆ. ಧರ್ಮ ಮತ್ತು ಬಣ್ಣಕ್ಕಿಂತ ಜಾತಿ ಬಹಳ ಆಳವಾಗಿರುವುದು ನಮಗೆ ಗೋಚರಿಸುತ್ತಲೇ ಇರುತ್ತದೆ.
ಧರ್ಮ ರಾಜಕಾರಣ ಯಾರಿಗೂ ಒಳ್ಳೆಯದಲ್ಲ
ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾಧಿಸುವ ಗುರಿಯನ್ನು ಸಂವಿಧಾನದ ಮುನ್ನುಡಿಯಲ್ಲಿ ಘೋಷಿಸಿದೆ ಎಂಬುದೇನೋ ನಿಜವೆ. ಆದರೆ , ಅದನ್ನೂ ಬದಲಾಯಿಸುವ ಮಾತುಗಳನ್ನಾಡುವ ಧರ್ಮ ರಾಜಕಾರಣ ಯಾರಿಗೂ ಒಳ್ಳೆಯದಲ್ಲ.
ಇಂಥವೇ ಗಹನ ವಿಷಯಗಳ ಮೇಲೆ ಚರ್ಚೆಗಳಿಗಾಗಿ ಇದೇ ಮೇ ತಿಂಗಳು 25 ಮತ್ತು 26 ನೇ ತಾರೀಖಿನಂದು ನಡೆಯುವ ಮೇ ಮೇಳದಲ್ಲಿ ನಾನಂತೂ ಕುಟುಂಬ ಸಮೇತ ಹಾಜರಿರುತ್ತೇನೆ.
ನೀವೂ ಬನ್ನಿ….
ಹೊಸ ಹೊಸ ಯುವ ಪೀಳಿಗೆಯನ್ನು ಕರೆತನ್ನಿ.
ಭರವಸೆಯ ಭಾರತವನ್ನು ಕಟ್ಟೋಣ.
ಬಿ.ಶ್ರೀನಿವಾಸ