ದಾವಣಗೆರೆ (Davanagere): ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಈಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭಾನುವಾರ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ದಿಂಡದಹಳ್ಳಿ ಮತ್ತು ಕೊಗ್ಗನೂರು ಗ್ರಾಮದಲ್ಲಿ ಸುರಿದ ಮಳೆಯಿಂದ ಕುಸಿದು ಬಿದ್ದಿರುವ ಮನೆಗಳನ್ನು ಪರಿಶೀಲನೆ ನಡೆಸಿದರು.
ಈಚೆಗೆ ಸುರಿದ ಮಳೆಗೆ ಕ್ಷೇತ್ರದ ಸಾಕಷ್ಟು ಗ್ರಾಮಗಳಲ್ಲಿ ಮನೆಗಳು ಭಾಗಶಃ ಹಾನಿಯಾಗಿವೆ. ಅಲ್ಲದೇ ಮೆಕ್ಕೆಜೋಳ ಸೇರಿದಂತೆ ಇನ್ನಿತರೆ ಬೆಳೆಗಳು ಕೂಡ ನಿರಂತರ ಮಳೆಗೆ ಕೊಳೆತು ಹೋಗಿವೆ. ಕೃಷಿ ಮತ್ತು ಕಂದಾಯ ಅಧಿಕಾರಿಗಳ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಕಳೆದುಕೊಂಡ ರೈತರಿಗೆ ಮತ್ತು ಮನೆ ಕಳೆದುಕೊಂಡ ನಿರಾಶ್ರಿತರಿಗೆ ಪರಿಹಾರ ನೀಡುವ ಜೊತೆಗೆ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಸಂಬಂಧಪಟ್ಟ ತಹಸೀಲ್ದಾರ್, ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಜೆಜೆಎಂ ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್ ಕಳಪೆ ಗುಣಮಟ್ಟದಿಂದ ಕೂಡಿದೆ. ನೀರು ಬರುವುದಿಲ್ಲ ಎಂದು ಗ್ರಾಮಸ್ಥರು ಶಾಸಕರ ಬಳಿ ಸಮಸ್ಯೆ ಬಿಚ್ಚಿಟ್ಟರು. ಕಾಮಗಾರಿ ಪರಿಶೀಲಿಸಿದ ಶಾಸಕರು, ಕಳಪೆ ಕಾಮಗಾರಿ ಕಂಡು ಗುತ್ತಿಗೆದಾರರ ವಿರುದ್ಧ ಕೆಂಡಾಮಂಡಲರಾದರು. ಕೂಡಲೇ ಗುಣಮಟ್ಟದ ಕಾಮಗಾರಿ ನಡೆಸಿ ಗ್ರಾಮಸ್ಥರಿಗೆ ಸಮಪರ್ಕ ಕುಡಿಯುವ ನೀರು ಪೂರೈಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪರಶುರಾಮ್, ಗಣೇಶಪ್ಪ, ಹೊನ್ನೂರಪ್ಪ, ಬಸಣ್ಣ, ಶ್ರೀಕಾಂತ್, ಕೆಂಚಪ್ಪ ಹಾಗೂ ಗ್ರಾಮಸ್ಥರು ಇದ್ದರು.
ವಾಲ್ಮೀಕಿ ಜಯಂತಿ: ದಿಂಡದಹಳ್ಳಿ ಗ್ರಾಮದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಕೆ.ಎಸ್.ಬಸವಂತಪ್ಪ, ಮಹರ್ಷ ವಾಲ್ಮೀಕಿಯವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ಸತ್ಪçಜೆಗಳನ್ನಾಗಿ ಮಾಡಬೇಕೆಂದು ಕಿವಿಮಾತು ಹೇಳಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಮಂಜುನಾಥ್, ನಾಗರಾಜ್, ಗಣೇಶ್, ಪರಶುರಾಮ್, ಬಸಣ್ಣ ಹಾಗೂ ಸಮಾಜ ಬಾಂಧವರು ಭಾಗವಹಿಸಿದ್ದರು.
ನಿರಾಶ್ರಿತರಲ್ಲಿ ಆತಂಕ ಬೇಡ..
ನಿರಂತರ ಮಳೆ ಸುರಿದು ಕುಸಿದು ಬಿದ್ದಿರುವ ಮನೆಗಳಿಗೆ ಪರಿಹಾರ ಕೊಟ್ಟರೆ, ಮನೆ ಮಂಜೂರು ಆಗುವುದಿಲ್ಲ. ಮನೆ ಬೇಕೋ ಅಥವಾ ಪರಿಹಾರ ಬೇಕೋ ಎಂದು ಅಧಿಕಾರಿಗಳು ಹೇಳುತ್ತಾರೆ ನಿರಾಶ್ರಿತರು ಶಾಸಕರ ಬಳಿ ಪರಿಹಾರ ಮತ್ತು ಮನೆ ಮಂಜೂರು ಮಾಡಿಸುವಂತೆ ಮನವಿ ಮಾಡಿದರು. ಇದಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ, ಮಳೆಯಿಂದ ಮನೆಗಳು ಹಾನಿಗೊಳಗಾದ ನಿರಾಶ್ರಿತರಿಗೆ ಸರ್ಕಾರ ಪರಿಹಾರನೂ ಕೊಡುತ್ತದೆ. ಮನೆನೂ ಮಂಜೂರು ಮಾಡುತ್ತದೆ. ಯಾವುದೇ ಕಾರಣಕ್ಕೆ ನಿರಾಶ್ರಿತರು ಆತಂಕ ಪಡಬೇಡಿ ಎಂದು ಧೈರ್ಯ ತುಂಬಿದರು.