ದಾವಣಗೆರೆ: ಧರ್ಮಸ್ಥಳ ಸಂಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಶಾಲೆಗಳನ್ನು ತೆರೆದು ಉಚಿತ ಶಿಕ್ಷಣ ನೀಡಿದರೆ, ಈ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಡ ತಾಯೆಂದಿಯರ ಮಕ್ಕಳು ಶಿಕ್ಷಣ ಪಡೆದು ಈ ದೇಶದ ಸತ್ಪ್ರಜೆಯಾಗಲು ಸಹಕಾರಿಯಾಗುತ್ತದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಆಶಯ ವ್ಯಕ್ತಪಡಿಸಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಚನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವ _ಸಹಾ ಯ ಸಂಘಗಳ ಒಕ್ಕೂಟದ ತ್ಯಾವಣಗಿ ವಲಯದ ಆಶ್ರಯದಲ್ಲಿ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಬಗ್ಗೆ ಸಂಘಟನೆಯ ಮುಖ್ಯಸ್ಥರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಬಳಿ ಚರ್ಚಿಸುವಂತೆ ಸಲಹೆ ನೀಡಿದರು.
ಸಮಾಜದಲ್ಲಿ ಸಮನ್ವಯತೆ, ಸಾಮರಸ್ಯ, ಒತ್ತಡದ ಬದುಕಿನಲ್ಲಿ ಮಾನಸಿಕ ನೆಮ್ಮದಿ ಕಾಪಾಡಲು ಸಾಮೂಹಿಕ ಪೂಜೆ ಕಾರ್ಯಕ್ರಮ ಸಹಕಾರಿಯಾಗಿದೆ. ಹುಟ್ಟಿದ ಮನುಷ್ಯನಿಗೆ ಸಾವು ನಿಶ್ಚಿತ. ಆದರೆ ಮಾಡಿದ ಒಳ್ಳೆಯ ಕೆಲಸಗಳು ಎಂದು ಶಾಶ್ವತವಾಗಿವೆ. ಮಕ್ಕಳಿಗೆ ಧರ್ಮ ಸಂಸ್ಕಾರ ತಿಳಿ ಹೇಳಿ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗುವಂತೆ ನೋಡಿಕೊಳ್ಳಬೇಕು. ಅತಿಯಾದ ಮೊಬೈಲ್ ಬಳಕೆಯಿಂದಾಗಿ ಪರಸ್ಪರ ಬಾಂಧವ್ಯಗಳು ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮದ್ಯಪಾನ, ದುಶ್ಚಟ ನಿರ್ಮೂಲನೆ ಮಾಡುವ ಜೊತೆಗೆ ಆರೋಗ್ಯ, ಶಿಕ್ಷಣ, ಪಿಂಚಣಿ, ಶಿಷ್ಯವೇತನ, ಕಾಯಕ, ಮನೆ ನಿರ್ಮಿಸಿಕೊಟ್ಟು ಆರ್ಥಿಕ ಚೈತನ್ಯ ತುಂಬಿದ ಧರ್ಮಸ್ಥಳ ಸಂಘಟನೆ ಯೋಜನೆ ಗ್ರಾಮೀಣ ಪ್ರದೇಶದ ಬಡ ಸಾಮಾನ್ಯ ವರ್ಗದ ಬದುಕು ಬದಲಿಸಿದೆ. ಮೇಲ್ವರ್ಗಕ್ಕೆ ಸೀಮಿತವಾಗಿದ್ದ ಪೂಜಾವಿಧಿ ವ್ರತಾಚರಣೆ ಕುಗ್ರಾಮಗಳ ಜನಸಾಮಾನ್ಯರು ಸಾಮೂಹಿಕವಾಗಿ ಕಡಿಮೆ ಖರ್ಚಿನಲ್ಲಿ ಆಚರಿಸುವ ಸದಾವಕಾಶ ಸಂಘಟನೆ ರೂಪಿಸಿ ಧರ್ಮಾನುಷ್ಠಾನಗೊಳಿಸುತ್ತಿರುವುದು ಉತ್ತಮ ಸಂಪ್ರದಾಯ’ ಎಂದರು.

‘ಗ್ರಾಮೀಣ ಜನರ ಬದುಕಿನ ಸುಧಾರಣೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ಪಾತ್ರ ದೊಡ್ಡದು’. ಈ ಸಂಸ್ಥೆ ನಿರಂತರವಾಗಿ ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಮಹಿಳೆಯರ ಬದುಕಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಆರ್ಥಿಕ ನೆರವಿನ ಮೂಲಕ ಸ್ವಾವಲಂಬನೆಯ ದಾರಿ ತೋರಿಸುತ್ತಿದೆ ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ತಪೊಕ್ಷೇತ್ರ,ಕಣ್ವ ಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರವಣ, ಚಿಂತನ ಮತ್ತು ಮನನ ಈ ಮೂರು ಜೀವನದಲ್ಲಿ ಬಹಳ ಮುಖ್ಯವಾದದ್ದು. ಹಿರಿಯರು ಹೇಳಿದ್ದನ್ನು ಸಮಾಧಾನವಾಗಿ ಕೇಳಬೇಕು. ನಂತರ ಚಿಂತನ, ಆ ವಿಷಯವನ್ನು ಕುರಿತು ಚಿಂತನ ಮಾಡಬೇಕು. ತದನಂತರ ಮನನ. ಆ ವಿಷಯಗಳಲ್ಲಿ ಇರುವ ಒಳ್ಳೊಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಾವುದೇ ಸಭೆ, ಪುರಾಣ, ಪ್ರವಚನ, ಸತ್ಯ ನಾರಾಯಣ ಪೂಜೆ, ಹೀಗೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಹೋದರೆ ಈ ಮೂರು ನಿಯಮಗಳು ಅತ್ಯಾವಶ್ಯಕ ಎಂದರು.
ಈ ಜಗತ್ತಿನ ದೊಡ್ಡ ಶಕ್ತಿ ಯಾವುದು ಎಂದರೆ ತಾಯಿ ಎಂದು ಹೇಳುತ್ತೇವೆ. ನೀವು ವಿಚಾರ ಮಾಡಬಹುದು ಆದಿಶಕ್ತಿ. ಅಂದರೆ ಮೂಲ ಯಾವುದು ಎಂದರೆ ಈ ಜಗತ್ತಿನ ಮೂಲ ಸೃಷ್ಟಿಗೆ ಕಾರಣೀಭೂತಳಾದ ಜಗನ್ಮಾತೆ ಆದಿ ಶಕ್ತಿ. ಮೂಲ ಅವಳೇ ಇದ್ದಾಳೆ. ನಂತರ ಗಂಗೆಮಾತೆ, ಗೋಮಾತೆ, ಭೂಮಾತೆ, ಭಾರತಮಾತೆ ಈ ಎಲ್ಲರಿಗೂ ಕೂಡ ಮಾತೆಯ ಸ್ಥಾನ ನೀಡಲಾಗಿದೆ. ಏಕೆಂದರೆ ಭೂಮಿ ಇಲ್ಲದೆ ಹೋದರೆ ಈ ಜಗತ್ತು ನಿಲ್ಲುವುದು ಯಾವುದರ ಮೇಲೆ. ನಾವು ಭೂಮಿಯಿಂದ ಏನೆಲ್ಲ ಬೆಳೆಯುತ್ತೇವೆ, ಏನೆಲ್ಲ ಬಿತ್ತುತ್ತೇವೆ, ಏನೆಲ್ಲ ಪಡೆಯುತ್ತೇವೆ, ಏನೆಲ್ಲ ಕೊಡುತ್ತೇವೆ. ಭೂಮಿಯಿಂದ ಸರ್ವವನ್ನು ಪಡೆಯುತ್ತೇವೆ. ಹೀಗಾಗಿ ಭೂಮಿಗೆ ತಾಯಿ ಸ್ಥಾನ ನೀಡಲಾಗಿದೆ ವಿವರಿಸಿದರು.
ಅದೇ ರೀತಿ ಗಂಗಾಮಾತೆಗೂ ತಾಯಿ ಸ್ಥಾನ ನೀಡಲಾಗಿದೆ. ಜಲವಿಲ್ಲದೇ ಹೋದರೆ ಸ್ನಾನ ಮಾಡಲು, ಕುಡಿಯಲು, ಶರೀರವನ್ನು ಪವಿತ್ರಗೊಳಿಸಲು, ಅಡುಗೆ ಮಾಡಲು, ಬಿತ್ತಿ ಬೆಳೆಯಲು ಪ್ರತಿಯೊಂದಕ್ಕೂ ನೀರು ಅತ್ಯಾವಶ್ಯಕ. ನೀರು ಇಲ್ಲದೆ ಹೋದರೆ ಜಗತ್ತು ಇಲ್ಲ. ಭೂಮಿ ಇಲ್ಲದೆ ಹೋದರೆ ಜಗತ್ತು ಇಲ್ಲ, ನೀರು ಇಲ್ಲದೇ ಹೋದರೆ ಬದುಕು ಇಲ್ಲ. ಅದಕ್ಕೇ ಗಂಗಾಮಾತೆ ಎಂದು ಹೇಳಿದರು.
Read also : ಆಯುರ್ವೇದ ಮತ್ತು ಶಸ್ತ್ರ ಚಿಕಿತ್ಸೆ : ಡಾ. ಬಿ.ಶಿವಕುಮಾರ
ಇನ್ನು ಗೋಮಾತೆಗೂ ಕೂಡ ತಾಯಿ ಸ್ಥಾನ ನೀಡಲಾಗಿದೆ. ಜನ್ಮ ಕೊಟ್ಟ ತಾಯಿ, ತನ್ನ ಮಗುವಿಗೆ ವರ್ಷಗಳ ಕಾಲ ಎದೆ ಹಾಲುಣಿಸಿ ಬೆಳೆಸುತ್ತಾಳೆ. ಜೀವನ ಪರ್ಯಾಂತರ ಹಾಲನ್ನು ಗೋಮಾತೆ ಕೊಡು ತ್ತಿದ್ದಾಳೆ. ಆ ಗೋಮಾತೆಯಲ್ಲಿ 33 ಕೋಟಿ ದೇವತೆಗಳ ನಿವಾಸ ಸ್ಥಾನ ಎಂದು ಹೇಳುತ್ತೇವೆ ಅದಕ್ಕೆ ಗೋಮಾತೆ ಎಂದು ಕರೆಯುತ್ತೇವೆ ಎಂದು ಹೇಳಿದರು.
ತದನಂತರ ಭಾರತಮಾತೆ, ಈ ಭಾರತ ನಮಗೆಲ್ಲ ಒಂದು ಗೌರವವನ್ನ, ಸ್ಥಾನವನ್ನ, ಮಾನವನ್ನ, ಘನತೆಯನ್ನ ತಂದುಕೊಟ್ಟ ದೇಶ ಭಾರತ. ಅದಕ್ಕೆ ಭಾರತ ವಿಶ್ವದ ಗುರು ಎಂದು ಕರೆಯುತ್ತೇವೆ. ಹೀಗಾಗಿ ತಾಯಿ ಸ್ಥಾನವನ್ನು ಈ ನಾಲ್ಕು ಸ್ಥಾನಗಳಿಗೆ ಬಹಳ ಪೂರ್ವದಲ್ಲಿಯೇ ಕೊಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಸಿ.ಗೋವಿಂದಸ್ವಾಮಿ, ಸಂತೇಬೆನ್ನೂರು ಠಾಣೆಯ ವೃತ್ತ ನಿರೀಕ್ಷಕರಾದ ಮಲ್ಲಮ್ಮ ಆರ್.ಚೌಬೆ, ಮುಖಂಡರಾದ ಬಿ.ಎಚ್.ಹಾಲಪ್ಪ, ನಲ್ಕುದುರೆ ಶಶಿಕಲಾ ಮೂರ್ತಿ ಹಾಗೂ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ನಮ್ಮ ನಡೆ-ನುಡಿಗಳೆ ನಮ್ಮ ಧರ್ಮವನ್ನು ಹೇಳುತ್ತಿವೆ. ಅದನ್ನು ಅರ್ಥ ಮಾಡಿಕೊಂಡು ಸಮಾಜದಲ್ಲಿ ನುಡಿದು ನಡೆಯಬೇಕು. ಆಗಾದಾಗ ಮಾತ್ರ ನಮ್ಮ ಬದುಕಿಗೆ ಒಂದು ಅರ್ಥ ಬರುತ್ತದೆ. ಇದು ಸಮಾಜದಲ್ಲಿ ಸಮನ್ವಯತೆ, ಸಾಮರಸ್ಯ ಸಾಧಿಸಲು ಸಾಧ್ಯ.– ಕೆ.ಸ್.ಬಸವಂತಪ್ಪ, ಶಾಸಕ.
