ದಾವಣಗೆರೆ : ದೊಡ್ಡ ಕನಸು ಕಾಣುವುದು ಕೇವಲ ಮಕ್ಕಳಷ್ಟೇ ಅಲ್ಲ, ಪೋಷಕರದ್ದೂ ಆಗಿರಬೇಕು. ಉಜ್ವಲ ಭವಿಷ್ಯ ರೂಪಿಸಲು ಹಗಲಿರುಳು ಶ್ರಮಿಸುವ ತಂದೆ ತಾಯಿಗಳು ಕನಸು ಸಾಕಾರಗೊಳ್ಳಲು ಬೇಕಾದ ಸಂಸ್ಕೃತಿ, ಸಂಸ್ಕಾರ ಮತ್ತು ಮಕ್ಕಳು ಪುಸ್ತಕ ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರೂ ಆದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಸಲಹೆ ನೀಡಿದರು.
ಹರಿಹರ ಪಟ್ಟಣದ ಐಟಿಐ ಕಾಲೇಜಿನಲ್ಲಿ ಸಂಸ್ಕಾರ ಟ್ಯೂಷನ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ದೊಡ್ಡ ಕನಸು ಎಂದರೆ ಹುದ್ದೆಗೆ ಹೋಗುವುದಷ್ಟೇ ಅಲ್ಲ. ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿಯೂ ಓದಬೇಕೆಂಬ ಆಸೆ ಇರಬೇಕು. ದೆಹಲಿಯಲ್ಲಿ ಏಮ್ಸ್, ಐಎಟಿ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಛಲ ಮಕ್ಕಳಲ್ಲಿ ಬರುವಂತೆ ಪ್ರೇರೇಪಿಸಬೇಕು. ಮಕ್ಕಳಿಗೆ ಕಾದಂಬರಿ, ಸಾಹಿತ್ಯ, ವ್ಯಕ್ತಿ ಪರಿಚಯ, ಸಾಹಿತ್ಯೇತರ ಪುಸ್ತಕಗಳು, ದಿನಪತ್ರಿಕೆ ಓದುವ ರೂಢಿ ಮಾಡಬೇಕು. ಆಗ ಪ್ರಪಂಚ ಹಾಗೂ ದೇಶದಲ್ಲಿ ಆಗುತ್ತಿರುವ ಹಲವಾರು ವಿಚಾರಗಳು ಗೊತ್ತಾಗುತ್ತವೆ. ಆಯ್ಕೆ ಮಾಡಿಕೊಳ್ಳಲು ಸುಲಭವಾಗುತ್ತದೆ ಎಂದು ಪ್ರತಿಪಾದಿಸಿದರು.
ಕಳೆದ 11 ವರ್ಷದಿಂದ ಐಎಎಸ್ ಕೋಚಿಂಗ್ ಸೆಂಟರ್ ನಡೆಸುತ್ತಿದ್ದೇನೆ. ಕರ್ನಾಟಕ ಮಾತ್ರವಲ್ಲ ಜಮ್ಮು ಕಾಶ್ಮೀರ, ಲಖ್ನೋ, ಹೈದರಾಬಾದ್, ದಾವಣಗೆರೆಯಲ್ಲಿಯೂ ಐಎಎಸ್ ಕೋಚಿಂಗ್ ಸೆಂಟರ್ ಆರಂಭಿಸಲಾಗಿದೆ. ಈ ಮೂಲಕ ದಾವಣಗೆರೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಕ್ಕಳೂ ಐಎಎಸ್, ಐಪಿಎಸ್ ಆಗಬೇಕೆಂಬ ಸದುದ್ದೇಶದಿಂದ ನಡೆಸಲಾಗುತ್ತಿದೆ. ಇದುವರೆಗೆ 1500 ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳು ನಮ್ಮ ಸಂಸ್ಥೆಯಲ್ಲಿ ಓದಿದವರು ಆಗಿದ್ದಾರೆ. ಇದು ನಮಗೆ ಹೆಮ್ಮೆಯ ವಿಚಾರ. ಏಮ್ಸ್, ಐಎಟಿಯಲ್ಲೂ ಓದಿದವರು ನನ್ನ ವಿದ್ಯಾರ್ಥಿಗಳು. ಎಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ದೊಡ್ಡ ಸಂಸ್ಥೆಗಳಲ್ಲಿ ಓದಿದವರು ಸಹ ನಮ್ಮಲ್ಲಿ ಕೋಚಿಂಗ್ ಪಡೆದಿದ್ದಾರೆ ಎಂದು ತಿಳಿಸಿದರು.
ಕೇವಲ ಪಠ್ಯ ಪುಸ್ತಕಗಳು ಮಾತ್ರವಲ್ಲ. ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳಬೇಕು. ಯುಎಸ್, ಫ್ರೆಂಚ್ ಟೆನಿಸ್ ಟೂರ್ನಿಗಳು ನಡೆಯುತ್ತಿವೆ. ಮಕ್ಕಳು ನೋಡಿದರೆ ಆಟಗಾರರ ಪರಿಚಯವಾಗುತ್ತದೆ. ಅವರಿಗೂ ಟೆನಿಸ್ ಆಟಗಾರನಾಗಬೇಕೆಂಬ ಆಸೆ ಬರುತ್ತದೆ. ಇಂಗ್ಲೀಷ್ ಮಾಧ್ಯಮದ ಜೊತೆಗೆ ಅಕಾಡೆಮಿಕ್ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಇದ್ದರೆ ಜ್ಞಾನಾರ್ಜನೆ, ನಾಯಕತ್ವ ಗುಣ, ಉನ್ನತ ಗುರಿ ತಲಪುವ ಕನಸು ನನಸಾಗುತ್ತದೆ ಎಂದು ಅವರು ಹೇಳಿದರು.
Read also : ದಾವಣಗೆರೆ | ಮಹಿಳೆಯರಿಗೆ ಉಚಿತ ಫಾಸ್ಟ್ ಪುಡ್ ತಯಾರಿಕೆ ತರಬೇತಿ
ದಾವಣಗೆರೆಯಂಥ ನಗರಗಳಲ್ಲಿ ಕಲೆ, ನಾಟಕ, ಸಾಹಿತ್ಯ ಚಟುವಟಿಕೆಗಳು ಹೆಚ್ಚಾಗಬೇಕು. ಬೆಂಗಳೂರಿನಲ್ಲಿ ರಂಗಶಂಕರ ಇದೆ. ಖ್ಯಾತ ಸಿನಿಮಾ ನಟರೆಲ್ಲರೂ ರಂಗಭೂಮಿಯಿಂದ ಬಂದವರು. ದ್ರಾವಿಡ್ ಪಡುಕೋಣೆ ಅಕಾಡೆಮಿ, ಪ್ರಕಾಶ್ ಪಡುಕೋಣೆ ಅಕಾಡೆಮಿಯಂಥ ಕ್ರೀಡಾ ಚಟುವಟಿಕೆಗಳು ನಡೆಸುವ ಸ್ಥಳಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ. ಅದೇ ರೀತಿಯಲ್ಲಿ ಮೌಂಟ್ ಕಾರ್ನಲ್ ಸ್ಕೂಲ್ ನಲ್ಲಿ ದೀಪಿಕಾ ಪಡುಕೋಣೆ, ರಾಧಿಕಾ ಪಂಡಿತ್ ಸೇರಿದಂತೆ ಖ್ಯಾತನಾಮರು ಓದಿದ ಸಂಸ್ಥೆ. ದೊಡ್ಡ ಸಂಸ್ಥೆಗಳು, ವಿವಿಗಳಲ್ಲಿ ಓದಿದಾಗ ಅವಕಾಶಗಳು ಬೇಗನೇ ಹುಡುಕಿಕೊಂಡು ಬರುತ್ತವೆ ಎಂದು ಸಲಹೆ ನೀಡಿದರು.
ನವೋದಯ ಶಾಲೆಯಲ್ಲಿ ನಾನು ಓದಿದ್ದರಿಂದ ಇಷ್ಟೊಂದು ಸಾಧನೆ ಮಾಡಲಾಯಿತು. ಕಕ್ಕರಗೊಳ್ಳದಲ್ಲೇ ಓದಿಕೊಂಡು ಇದ್ದವರು ದನ ಕಾಯುತ್ತಿದ್ದಾರೆ. ಸಂಪನ್ಮೂಲ, ಜ್ಞಾನಾರ್ಜನೆ ಪಡೆದುಕೊಳ್ಳಲು ನವೋದಯ, ಉನ್ನತ ಶಿಕ್ಷಣ ಸಂಸ್ಥೆಗಳು ಸಹಕಾರಿ ಎಂದು ಹೇಳಿದರು.
ವೇದಿಕೆಯಲ್ಲಿ ಹರಿಹರ ಶಾಸಕ ಬಿ. ಪಿ. ಹರೀಶ್, ಐಟಿಐ ಕಾಲೇಜಿನ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ರಿಸ್ಕ್ ತೆಗೆದುಕೊಳ್ಳಬೇಕು: ಜಿಬಿವಿ
ನಾನು ದಾವಣಗೆರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದೆ. ಇಲ್ಲಿ ನಮಗಿಂತ ದೊಡ್ಡವರು, ಬುದ್ಧಿವಂತರು ಶ್ರೀಮಂತರು ಇದ್ದಾರೆ. ಆದರೂ ರಿಸ್ಕ್ ತೆಗೆದುಕೊಂಡು ಕಣಕ್ಕಿಳಿದೆ. ಸ್ಪರ್ಧಾತ್ಮಕ ಯುಗದಲ್ಲಿ ಸವಾಲು ಎದುರಿಸದಿದ್ದರೆ ಗುರಿ ಮುಟ್ಟಲು ಆಗದು. ಮಕ್ಕಳು ತಪ್ಪು ಮಾಡಿದಾಗ ಸರಿಪಡಿಸಬೇಕು. ಅವರಲ್ಲಿನ ಬುದ್ದಿವಂತಿಕೆ ಇದೆ ಎಂಬುದು ಗೊತ್ತಾದರೆ ಮಕ್ಕಳ ತಪ್ಪು ಕ್ಷಮಿಸಿ. ಪೋಷಕರು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು.
ಜಿ. ಬಿ. ವಿನಯ್ ಕುಮಾರ್, ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರು