ಕೆಲ ದಿನಗಳ ಹಿಂದೆ ಕರ್ನಾಟಕದ ಆರೆಸ್ಸೆಸ್ ಮುಖಂಡರೊಬ್ಬರನ್ನು ಸಂಪರ್ಕಿಸಿದ ಬಿಜೆಪಿಯ ವರಿಷ್ಟರು ಒಂದು ಗಂಭೀರ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಕನ್ನಡಪರ ಧ್ವನಿ ತಾರಕಕ್ಕೇರುವ ಮುನ್ನ ಅದನ್ನು ಶಾಂತಗೊಳಿಸಿ ಎಂಬುದು ಅವರ ಮಾತು.
ಅಂದ ಹಾಗೆ ಕರ್ನಾಟಕದಲ್ಲಿ ಐಟಿ-ಬಿಟಿ ಯುಗ ಆರಂಭವಾದ ನಂತರ ದೇಶದ ವಿವಿಧ ಭಾಗಗಳಿಂದ ಬಂದು ಜನ ನೆಲೆಯಾಗುತ್ತಿರುವುದು ಹೊಸ ವಿಷಯವೇನಲ್ಲ. ಆದರೆ, ಪರಭಾಷಿಕರು ಹೆಚ್ಚಾದಂತೆ ಕರ್ನಾಟಕದ ಆರ್ಥಿಕ,ಸಾಮಾಜಿಕ ಚೌಕಟ್ಟು ಬದಲಾಗುತ್ತಾ ಇಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುತ್ತಿದ್ದಾರೆ. ದಿನ ಕಳೆದಂತೆ ಅವರ ಶಕ್ತಿ ಕುಗ್ಗುತ್ತಿದೆ ಎಂಬ ಅಸಮಾಧಾನ ಸುನಾಮಿಯಂತೆ ಮೇಲೆದ್ದಿದೆ.
ಅಂದ ಹಾಗೆ ಪರಭಾಷಿಕರ ಪ್ರಾಬಲ್ಯದ ಬಗ್ಗೆ ಕೂಗೆದ್ದಿರುವುದು ಇದು ಮೊದಲೇನಲ್ಲ.ಹಿಂದಿನಿಂದಲೂ ಇಂತಹ ಕೂಗು,ಇದಕ್ಕೆ ಪೂರಕವಾಗಿ ಕನ್ನಡ ಪರ ಹೋರಾಟಗಳು ನಡೆಯುತ್ತಲೇ ಬಂದಿವೆ. ಅದರೆ, ಐಟಿ-ಬಿಟಿ ಯುಗ ಶುರುವಾದ ನಂತರ ಈ ಕೂಗು ಮತ್ತಷ್ಟು ತಾರಕಕ್ಕೇರಿದೆಯಲ್ಲದೆ ಪರಭಾಷಿಕರ ಹೊಡೆತದಿಂದ ನಮ್ಮ ಆಸ್ಮಿತೆಗೇ ಗಂಡಾಂತರ ಬಂದಿದೆ ಎಂಬ ಭಾವನೆ ದಟ್ಟವಾಗಿ, ಕನ್ನಡಿಗರಲ್ಲಿ ಒಂದು ಅಗ್ರೆಸಿವ್ ಭಾವನೆ ಬೆಳೆದು ನಿಂತಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಏಷ್ಯಾದ ದೊಡ್ಡ ಮಾಲ್ ಒಂದರಲ್ಲಿ ರೈತನಿಗೆ ಅವಮಾನವಾದ ಘಟನೆ ಇರಬಹುದು, ತಮಿಳೇ ಕನ್ನಡದ ತಾಯಿ ಎಂಬರ್ಥದಲ್ಲಿ ನಟ ಕಮಲ ಹಾಸನ್ ಮಾತನಾಡಿದ ಎಪಿಸೋಡೇ ಇರಬಹುದು ಅಥವಾ ಎಲ್ಲೋ ಇದ್ದ ಕನ್ನಡಿಗರೊಬ್ಬರಿಗೆ ಅವಮಾನಿಸಿದ ಪ್ರಸಂಗ ಇರಬಹುದು. ಒಟ್ಟಿನಲ್ಲಿ ಇಂತಹ ಪ್ರಕರಣಗಳು ವರದಿಯಾದ ಕೂಡಲೇ ಕನ್ನಡ ಪರ ಹೋರಾಟಗಾರರು ಬೀದಿಗಿಳಿಯುತ್ತಿದ್ದಾರೆ.ಅಷ್ಟೇ ಅಲ್ಲ,ಕನ್ನಡ ವಿರೋಧಿಗಳು ಅನ್ನಿಸಿಕೊಂಡವರು ಸುಸ್ತಾಗಿ ಹೋಗುವಂತೆ ಮಾಡುತ್ತಿದ್ದಾರೆ.
ಕನ್ನಡ ಪರ ಹೋರಾಟಗಳ ದಿಕ್ಕು ನೋಡಿದರೆ ಮುಂದಿನ ದಿನಗಳಲ್ಲಿ ಕನ್ನಡ ಆಸ್ಮಿತೆ ಎಂಬುದು ಮತ್ತಷ್ಟು ಪ್ರಬಲವಾಗಿ ಮಹಾರಾಷ್ಟ್ರ,ತಮಿಳುನಾಡಿನಂತಹ ರಾಜ್ಯಗಳಲ್ಲಿ ಉದ್ಭವವಾದ ಪರಿಸ್ಥಿತಿ ಉಂಟಾಗಬಹುದು.ಅರ್ಥಾತ್,ಅಲ್ಲಿನ ರಾಜಕಾರಣದ ಮೇಲೆ ಆಯಾ ರಾಜ್ಯಗಳ ಭಾಷಾ ಆಸ್ಮಿತೆ ಕೆಲಸ ಮಾಡಿದಂತೆ ಕರ್ನಾಟಕದಲ್ಲೂ ಕೆಲಸ ಮಾಡಬಹುದು. ಮಹಾರಾಷ್ಟ್ರದಲ್ಲಿ ಶುರುವಾದ ಮರಾಠಾ ಆಸ್ಮಿತೆ ಅಲ್ಲಿ ಬಾಳ್ ಠಾಕ್ರೆಯಂತಹ ಪವರ್ ಪುಲ್ ನಾಯಕನನ್ನು ಸೃಷ್ಟಿಸಿ ದಶಕಗಳ ಕಾಲದಿಂದ ರಾಜಕಾರಣದ ಮೇಲೆ ಪ್ರಭಾವ ಬೀರಿತು.
ತಮಿಳುನಾಡಿನಲ್ಲಿ ತಮಿಳು ಆಸ್ಮಿತೆ ಹೇಗೆ ಕೆಲಸ ಮಾಡುತ್ತಿದೆಯೆಂದರೆ ಡಿಎಂಕೆ,ಎಐಎಡಿಎಂಕೆಯೇ ಇರಲಿ,ಇನ್ಯಾವ ಪಕ್ಷಗಳೇ ಇರಲಿ.ತಮಿಳು ಆಸ್ಮಿತೆಯನ್ನು ಹೊದ್ದುಕೊಂಡೇ ಇರಬೇಕು. ನಾಳೆ ಕರ್ನಾಟಕದಲ್ಲಿ ಇಂತಹ ಪರಿಸ್ಥಿತಿ ನೆಲೆಸಿದರೆ ದೊಡ್ಡ ಹೊಡೆತ ಬೀಳುವುದು ಬಿಜೆಪಿಗೆ.ಯಾಕೆಂದರೆ ಅದು ಹಿಂದಿ ಭಾಷಿಕರ ಪರ ಎಂಬ ಭಾವನೆ ಇರುವುದರಿಂದ ಸಹಜವಾಗಿಯೇ ಅದಕ್ಕೆ ಡ್ಯಾಮೇಜ್ ಆಗುತ್ತದೆ.
ಒಂದು ಅಂದಾಜಿನ ಪ್ರಕಾರ:ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಕನ್ನಡ ಅಂತಲೇ ಮತ ಚಲಾಯಿಸುವ ಹದಿನೈದು ಪರ್ಸೆಂಟಿನಷ್ಟು ಮತಗಳು ಕನ್ ಸಾಲಿಡೇಟ್ ಆಗಲಿವೆ.ಮತ್ತು ಹಾಗೆ ಕನ್ ಸಾಲಿಡೇಟ್ ಅಗುವ ಮತಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಹಂಚಿಕೊಳ್ಳಲಿವೆ. ಹಾಗೇನಾದರೂ ಆದರೆ ಒಂದು ಮಟ್ಟದಲ್ಲಿ ಬಿಜೆಪಿಗೆ ಹೊಡೆತ ಬೀಳುವುದು ನಿಶ್ಚಿತ. ಹೀಗಾಗಿ ಸನ್ನಿವೇಶವನ್ನು ನಿಭಾಯಿಸಲು ನಾವು ಹೊಸ ಮಾರ್ಗ ಅನುಸರಿಸಬೇಕು ಎಂಬುದು ಬಿಜೆಪಿ ವರಿಷ್ಟರ ಸಿಗ್ನಲ್ಲು.
Read also : Political analysis | ಅಮಿತ್ ಶಾ ಆತುರಕ್ಕೆ ಏನು ಕಾರಣ?
ಅದರ ಪ್ರಕಾರ ಮುಂದಿನ ದಿನಗಳಲ್ಲಿ ಕನ್ನಡಿಗ ವರ್ಸಸ್ ಪರಭಾಷಿಕ ಎಂಬ ಸಂಘರ್ಷದ ವಾತಾವರಣವನ್ನು ತಿಳಿಗೊಳಿಸಬೇಕು.ಸ್ಥಳೀಯ ಭಾಷೆ ಮತ್ತು ಸಂಸ್ಜೃತಿಗೆ ಪರಭಾಷಿಕರು ಗೌರವ ಕೊಡುವಂತೆ ಮಾಡಬೇಕು. ಇದಕ್ಕೆ ಪೂರಕವಾಗಿ ರಾಜ್ಯಾದ್ಯಂತ ತಂಡಗಳನ್ನು ರಚಿಸಿ ಪರಭಾಷಿಕರಿಗೆ ಕನ್ನಡ ಕಲಿಸುವ ಕೆಲಸ ಆರಂಭಿಸಬೇಕು. ಯಾವಾಗ ಇದು ಸಾಧ್ಯವಾಗುತ್ತದೋ? ಅಗ ಸಹಜವಾಗಿಯೇ ಕನ್ನಡ ವರ್ಸಸ್ ಪರಭಾಷಿಕ ಎಂಬ ಸಂಘರ್ಷ ಕಡಿಮೆಯಾಗಿ ಬಿಜೆಪಿಯ ಶಕ್ತಿ ಹಿಗ್ಗುತ್ತದೆ ಎಂಬುದು ವರಿಷ್ಟರ ಥಿಂಕಿಂಗು.
ಇದನ್ನೇ ಅವರು ಕರ್ನಾಟಕದ ಆರೆಸ್ಸೆಸ್ ನಾಯಕರಿಗೆ ವಿವರಿಸಿದ್ದು,ಅದರ ಆಧಾರದ ಮೇಲೆ ಕನ್ನಡಿಗ ವರ್ಸಸ್ ಪರಭಾಷಿಕ ಸಂಘರ್ಷವನ್ನು ಕಡಿಮೆ ಮಾಡಲು ಪ್ರಾಥಮಿಕ ಕಸರತ್ತು ಆರಂಭವಾಗಿದೆ ಎಂಬುದು ಆರೆಸ್ಸೆಸ್ ಮೂಲಗಳ ಮಾತು.
ವಿಜಯೇಂದ್ರ ಪಟ್ಟಾಭಿಷೇಕ ಗ್ಯಾರಂಟಿ (Political analysis)
ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲ ಆಗಸ್ಟ್ ವೇಳೆಗೆ ಬಗೆಹರಿಯಲಿದೆ. ಮೂಲಗಳ ಪ್ರಕಾರ,ಪಕ್ಷದ ಜಿಲ್ಲಾಧ್ಯಕ್ಷರುಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು,ಮೂವತ್ತೊಂಭತ್ತು ಮಂದಿ ಜಿಲ್ಲಾಧ್ಯಕ್ಷರ ಪೈಕಿ ಮೂವತ್ತೈದು ಮಂದಿ ವಿಜಯೇಂದ್ರ ಅವರ ಪರವಾಗಿ ನಿಲ್ಲಲಿದ್ದಾರೆ.ಹೀಗಾಗಿ ಚುನಾವಣೆ ನಡೆದರೂ ವಿಜಯೇಂದ್ರ ಅವರು ಗೆಲ್ಲುವುದು ನಿಶ್ಚಿತ.
ಇದೇ ಕಾರಣಕ್ಕಾಗಿ ವಿಜಯೇಂದ್ರ ವಿರೋಧಿ ಪಾಳಯ ಪಕ್ಷಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬದಲು ತಾತ್ವಿಕ ವಿರೋಧಕ್ಕೆ ಅಂಟಿಕೊಂಡಿದೆ. ಇಷ್ಟಾದರೂ ಪಕ್ಷಾಧ್ಯಕ್ಷ ಸ್ಥಾನದ ವಿಷಯದಲ್ಲಿ ಡಿಫರೆಂಟ್ ಕಸರತ್ತುಗಳು ನಡೆಯುತ್ತಿದ್ದು,ಪಕ್ಷಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಮತ್ತು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರೂ ಏಟು ಹಾಕಿದಂತಿದೆ.
ಒಂದು ಮೂಲದ ಪ್ರಕಾರ,ಮುಂದಿನ ತಿಂಗಳು ಕರ್ನಾಟಕಕ್ಕೆ ಬರಲಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು ಅಧಿಕೃತವಾಗಿ ವಿಜಯೇಂದ್ರ ಅವರನ್ನು ಅಧ್ಯಕ್ಷ ಪಟ್ಟದಲ್ಲಿ ಕೂರಿಸಿ ವಾಪಸಾಗಲಿದ್ದಾರೆ.ಆದರೆ ಆರು ತಿಂಗಳ ನಂತರ ಪಟ್ಟದಿಂದ ವಿಜಯೇಂದ್ರ ಅವರನ್ನಿಳಿಸಿ ವಿ.ಸೋಮಣ್ಣ ಅವರನ್ನು ತಂದು ಕೂರಿಸುವ ಕೆಲಸವಾಗಲಿದೆ.
ಇದೇ ಮೂಲಗಳ ಪ್ರಕಾರ,ಈ ಕುರಿತು ಸೋಮಣ್ಣ ಅವರಿಗೆ ಪಕ್ಷದ ವರಿಷ್ಟರು ಭರವಸೆ ನೀಡಿದ್ದು ಇನ್ನು ಆರು ತಿಂಗಳು ಸುಮ್ಮನಿರಿ ಎಂದಿದ್ದಾರೆ. ಇನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಕೂಡಾ ಕಸರತ್ತು ನಡೆಸುತ್ತಿದ್ದು ಅವರಿಗೆ ಖುದ್ದು ಅಮಿತ್ ಷಾ ಅವರೇ ಭರವಸೆ ನೀಡಿದ್ದಾರಂತೆ. ಮುಂದಿನ ವರ್ಷದ ಶುರುವಿನಲ್ಲಿ ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ.ಆ ಸಂದರ್ಭದಲ್ಲಿ ನೀವೇ ಪಕ್ಷದ ರಾಜ್ಯಾಧ್ಯಕ್ಷರಾಗಲಿದ್ದೀರಿ ಅಂತ ಅಮಿತ್ ಶಾ ಪ್ರಾಮಿಸ್ಸು ಮಾಡಿದ್ದಾರಂತೆ.
ಮುಂದಿನ ವರ್ಷವೂ ನಾನೇ ಸಿಎಂ (Political analysis)
ಈ ಮಧ್ಯೆ ರಾಜ್ಯ ವಿಧಾನಪರಿಷತ್ತಿಗೆ ಡಿ.ಜಿ.ಸಾಗರ್,ದಿನೇಶ್ ಅಮೀನ್ ಮಟ್ಟು,ರಮೇಶ್ ಬಾಬು ಮತ್ತು ಆರತಿ ಕೃಷ್ಣ ಅವರು ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಕಳೆದ ವಾರ ಸಿಎಂ ಸಿದ್ದರಾಮಯ್ಯ ದಿಲ್ಲಿಗೆ ಹೋಗಿದ್ದರಲ್ಲ? ಈ ಸಂದರ್ಭದಲ್ಲಿ ಸದರಿ ಪಟ್ಟಿಗೆ ಹೈಕಮಾಂಡ್ ತಡೆ ನೀಡಿದೆ ಎಂಬ ಸುದ್ದಿ ಹರಡಿತ್ತು.
ಆದರೆ, ಈಗಿನ ವರ್ತಮಾನದ ಪ್ರಕಾರ,ಈ ನಾಲ್ವರ ಹೆಸರುಗಳಿಗೆ ವರಿಷ್ಟರು ಒಪ್ಪಿಗೆ ಸೂಚಿಸಿದ್ದಾರೆ.ಆದರೆ ಇದ್ದುದರಲ್ಲಿ ರಮೇಶ್ ಬಾಬು ಮತ್ತು ಆರತಿ ಕೃಷ್ಣ ಅವರ ಸ್ಥಾನಗಳು ಮಾತ್ರ ಅದಲು-ಬದಲಾಗಿವೆ. ಹೇಗೆಂದರೆ ಈ ಮುಂಚೆ ಆರತಿಕೃಷ್ಣ ಅವರಿಗೆ ಸಿ.ಪಿ.ಯೋಗೇಶ್ವರ್ ತೆರವು ಮಾಡಿದ ಜಾಗಕ್ಕೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಅರ್ಥಾತ್,ಆರತಿ ಕೃಷ್ಣ ಅವರಿಗೆ ಒಂದು ವರ್ಷದ ಕಾಲಾವಧಿ ಮಾತ್ರ ಸಿಗಲಿತ್ತು. ಆದರೆ ಈ ವಿಷಯ ಕನ್ ಫರ್ಮ್ ಆಗುತ್ತಿದ್ದಂತೆಯೇ ಕಾಂಗ್ರೆಸ್ಸಿನ ಹಿರಿಯ ನಾಯಕ,ದಿವಂಗತ ರಾಜೀವ್ ಗಾಂಧಿಯವರ ಆಪ್ತ ಸ್ಯಾಮ್ ಪಿತ್ರೋಡಾ ಅವರು ಮಧ್ಯೆ ಪ್ರವೇಶಿಸಿ ಸೀನ್ ಬದಲಿಸಿದ್ದಾರೆ.
ಅದರ ಪ್ರಕಾರ,ಈ ಹಿಂದೆ ಆರತಿಕೃಷ್ಣ ಅವರಿಗೆ ನಿಗದಿ ಮಾಡಿದ್ದ ಒಂದು ವರ್ಷದ ಪರಿಷತ್ ಸ್ಥಾನ ರಮೇಶ್ ಬಾಬು ಅವರಿಗೆ ಫಿಕ್ಸ್ ಆಗಿ,ರಮೇಶ್ ಬಾಬು ಅವರಿಗೆ ಫಿಕ್ಸ್ ಆಗಿದ್ದ ಆರು ವರ್ಷದ ಪರಿಷತ್ ಸ್ಥಾನ ಆರತಿ ಕೃಷ್ಣ ಅವರಿಗೆ ಫಿಕ್ಸ್ ಆಗಿದೆ. ಈ ಬದಲಾವಣೆಯಿಂದ ಅಸಮಾಧಾನಗೊಂಡ ರಮೇಶ್ ಬಾಬು ಸಿಎಂ ಸಿದ್ದರಾಮಯ್ಯ ಅವರ ಬಳಿ ಹೋದರೆ:’ಅದೇನು ಫಿಕ್ಸಾಗಿದೆಯೋ ಒಪ್ಕೊಳಿ ಬಾಬು. ಒಂದು ವರ್ಷದ ನಂತರವೂ ನಾನೇ ಸಿಎಂ ಆಗಿರ್ತೀನಲ್ಲ? ನಿಮ್ಮನ್ನು ಮತ್ತೆ ಕಂಟಿನ್ಯೂ ಮಾಡಿಸ್ತೀನಿ’ಅಂತ ಪ್ರಾಮಿಸ್ಸು ಮಾಡಿದರಂತೆ.
ಕುಮಾರಣ್ಣನ ಲೇಟೆಸ್ಟು ಯೋಚನೆ (Political analysis)
ಇನ್ನು ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಪಕ್ಷದ ಹಾಲಿ,ಮಾಜಿ ಶಾಸಕರ ಸಭೆಯಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಒಂದು ವಿಷಯವನ್ನು ಒತ್ತಿ ಹೇಳಿದ್ದಾರಂತೆ. ಅದೆಂದರೆ ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ 33 ಪರ್ಸೆಂಟ್ ಮಹಿಳಾ ಮೀಸಲಾತಿ ಜಾರಿಗೆ ಬರುವುದು ಕನ್ ಫರ್ಮ್ ಎಂಬುದು. ಹೀಗೆ ವಿಧಾನಸಭೆ ಚುನಾವಣೆಯ ಹೊತ್ತಿಗೆ ಮಹಿಳಾ ಮೀಸಲಾತಿ ಜಾರಿಗೊಂಡರೆ ಎಪ್ಪತ್ತಕ್ಕೂ ಹೆಚ್ಚು ಮಂದಿ ಮಹಿಳೆಯರಿಗೆ ಪಕ್ಷ ಟಿಕೆಟ್ ಕೊಡಬೇಕಾಗುತ್ತದೆ.
ಅಂದ ಹಾಗೆ ಹೀಗೆ ಮಹಿಳಾ ಮೀಸಲಾತಿ ಜಾರಿಗೊಂಡರೆ ಅವರಿಗೆ ಯಾವ್ಯಾವ ಕ್ಷೇತ್ರಗಳು ಫಿಕ್ಸ್ ಆಗುತ್ತವೋ ಗೊತ್ತಿಲ್ಲ.ಆದರೆ ಹಾಗೆ ಫಿಕ್ಸಾಗುವ ಕಾಲಕ್ಕೆ ಪಕ್ಷ ಮಹಿಳಾ ಅಭ್ಯರ್ಥಿಗಳನ್ನು ಗುರುತಿಸಿರಬೇಕು.ಇಲ್ಲವಾದರೆ ಕೊನೆಯ ಕ್ಷಣದಲ್ಲಿ ಪರದಾಡುವ ಸ್ಥಿತಿ ಸೃಷ್ಟಿಯಾಗಬಹುದು ಎಂಬುದು ಕುಮಾರಸ್ವಾಮಿ ಅವರ ಯೋಚನೆ. ಹೀಗಾಗಿ ಈಗಿನಿಂದಲೇ ಮಹಿಳಾ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಶುರುವಾಗಲಿ ಎಂಬುದು ಕುಮಾರಸ್ವಾಮಿ ಮಾತು.
ಅಂದ ಹಾಗೆ ಹಾಲಿ ವಿಧಾನಸಭೆಯ ಬಲಾಬಲ 224.ಈ ಸಂಖ್ಯೆಗೆ ಅನುಗುಣವಾಗಿ ಮಹಿಳಾ ಮೀಸಲಾತಿ ಜಾರಿಗೆ ಬಂದರೆ ರಾಜಕೀಯ ಪಕ್ಷಗಳು ತಲಾ 73 ರಷ್ಟು ಮಹಿಳೆಯರಿಗೆ ಸೀಟು ಕೊಡಬೇಕು. 2028 ರಲ್ಲಿ ಚುನಾವಣೆ ನಡೆದರೆ ಅಷ್ಟೊತ್ತಿಗೆ ಕ್ಷೇತ್ರ ಪುನರ್ವಿಂಗಡಣೆಯೂ ಆಗಬಹುದು.ಹಾಗೇನಾದರೂ ಆದರೆ ವಿಧಾನಸಭೆ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಿ ಅವರಿಗೆ 80 ರಷ್ಟು ಸೀಟು ಕೊಡುವ ಅನಿವಾರ್ಯತೆ ಬರುತ್ತದೆ.
ಆದರೆ, ಪುನರ್ವಿಂಗಡಣೆಗೂ ಮುನ್ನ ಕರ್ನಾಟಕದ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆದರೆ? ಎಂಬುದು ಕುಮಾರಸ್ವಾಮಿ ಯೋಚನೆ.ಹೀಗಾಗಿ ಆದಷ್ಟು ಬೇಗ ಮಹಿಳಾ ಅಭ್ಯರ್ಥಿಗಳ ಶೋಧ ಕಾರ್ಯ ಮುಗಿಯಬೇಕು ಎಂಬುದು ಕುಮಾರಸ್ವಾಮಿ ಲೆಕ್ಕಾಚಾರ. ಅದನ್ನೇ ಕಳೆದ ವಾರ ನಡೆದ ಸಭೆಯಲ್ಲಿ ಸೂಚ್ಯವಾಗಿ ಹೇಳಿದ ಅವರು ಅರ್ಹ ಲೇಡಿಸ್ ಕ್ಯಾಂಡಿಡೇಟುಗಳನ್ನು ಶೋಧಿಸುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ.
ಲಾಸ್ಟ್ ಸಿಪ್ (Political analysis)
ಕಳೆದ ವಾರ ಬೆಂಗಳೂರಿನಲ್ಲಿ ನಡೆದ ವಿವಾಹ ಸಮಾರಂಭವೊಂದಕ್ಕೆ ಮಹಿಳಾ ಇನ್ಸ್ ಪೆಕ್ಟರ್ ಒಬ್ಬರು ಸಿವಿಲ್ ಡ್ರೆಸ್ಸಿನಲ್ಲಿ ಹೋಗಿದ್ದರಂತೆ. ಈ ಸಂದರ್ಭದಲ್ಲಿ ಅತಿಥಿಗಳನ್ನು ಸ್ವಾಗತಿಸಲು ಮಹಾದ್ವಾರದಲ್ಲಿ ನಿಂತಿದ್ದ ಶಾಸಕರೊಬ್ಬರು ಗೊತ್ತಿಲ್ಲದೆ ಅವರನ್ನು ತಡೆದಿದ್ದಾರೆ.
ಆದರೆ ಆ ಮಹಿಳಾ ಇನ್ಸ್ ಪೆಕ್ಟರ್:’ನನಗಿಲ್ಲಿ ಕೆಲಸವಿದೆ.ನಾನು ಒಳಹೊಗಲೇಬೇಕು’ ಎಂದಿದ್ದಾರೆ.ಹೀಗೆ ಒಳಗೆ ಹೋಗಲೇಬೇಕು ಎಂದು ಅವರು ಪಟ್ಟು ಹಿಡಿದಿದ್ದರಿಂದ ಸಿಟ್ಟಿಗೆದ್ದ ಶಾಸಕರು ಒಂದೇಟು ಹಾಕಿಯೇ ಬಿಟ್ಟಿದ್ದಾರೆ. ಯಾವಾಗ ಸಿವಿಲ್ ಡ್ರೆಸ್ಸಿನಲ್ಲಿದ್ದ ಮಹಿಳಾ ಇನ್ಸ್ ಪೆಕ್ಟರ್ ಗೆ ಆ ಶಾಸಕರು ಹೊಡೆದರೋ?ಅದನ್ನು ನೋಡಿ ಸ್ಥಳದಲ್ಲೇ ಇದ್ದ ಹಿರಿಯ ಪೋಲೀಸ್ ಅಧಿಕಾರಿಯೊಬ್ಬರು ಕೆಂಡಾಮಂಡಲಗೊಂಡು ಆ ಶಾಸಕರ ವಿರುದ್ದ ಮುಗಿಬಿದ್ದಿದ್ದಾರೆ.
ಅಷ್ಟೇ ಅಲ್ಲ,ಆ ಮಹಿಳಾ ಪೋಲೀಸ್ ಇನ್ಸ್ ಪೆಕ್ಟರ್ ಕಡೆ ತಿರುಗಿ:’ಮೇಡಂ,ಹೋಗಿ ಇವರ ವಿರುದ್ದ ಒಂದು ಕಂಪ್ಲೇಂಟ್ ಕೊಡಿ.ನೋಡಿಯೇ ಬಿಡೋಣ’ ಎಂದಿದ್ದಾರೆ. ಈ ಹಂತದಲ್ಲಿ ಶುರುವಾದ ಗೊಂದಲವನ್ನು ನೋಡಿದ ಪ್ರಮುಖ ನಾಯಕರೊಬ್ಬರು ಮಧ್ಯೆ ಪ್ರವೇಶಿಸಿದ್ದಲ್ಲದೆ jaat ಚಿತ್ರದ ಹೀರೋ ಸನ್ನಿ ಡಿಯೋಲ್ ತರ ನಿಂತು:’say sorry’ ಅಂತ ಆ ಶಾಸಕರಿಗೆ ಸೂಚಿಸಿದ್ದಾರೆ.ಅವರ ಸೂಚನೆಯಂತೆ ಶಾಸಕರು ಸಾರಿ ಕೇಳಿದ ಮೇಲೆ ಪ್ರಕರಣ ಅಂತ್ಯ ಕಂಡಿದೆ.
ಆರ್.ಟಿ.ವಿಠ್ಠಲಮೂರ್ತಿ