ಈ ಮಧ್ಯೆ ರಾಜ್ಯ ರಾಜಕೀಯದ ಪಡಸಾಲೆಯಲ್ಲಿ ಕುತೂಹಲಕಾರಿ ವಿಷಯವೊಂದು ಚರ್ಚೆಯಾಗುತ್ತಿದೆ.ಅದರ ಪ್ರಕಾರ, ಕರ್ನಾಟಕದ ನೆಲೆಯಲ್ಲಿ ಪ್ರಗತಿಪರ ಜನತಾದಳ ಮತ್ತೆ ತಲೆ ಎತ್ತಕಿದೆ.
ಇಪ್ಪತ್ತು ವರ್ಷಗಳ ಹಿಂದೆ ಕರ್ನಾಟಕದ ರಾಜಕೀಯಕ್ಕೆಹೊಸ ದಿಕ್ಕು ತೋರಿಸಿದ್ದ ಮತ್ತು ಕಾಂಗ್ರೆಸ್ ಪಡಸಾಲೆಯಲ್ಲಿ ಲೀನವಾಗಿದ್ದ ಪ್ರಗತಿಪರ ಜನತಾದಳಕ್ಕೆ ಮರು ಚೈತನ್ಯ ನೀಡುವ ಸಲುವಾಗಿ, ಸಿದ್ದು ಸಂಪುಟದ ಕೆಲ ಸಚಿವರು ಮತ್ತು ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ಮಾತುಕತೆ ಆರಂಭಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆಗಾಗಿ ನಡೆಯುತ್ತಿರುವ ಕಿತ್ತಾಟ ಮುಂದಿನ ದಿನಗಳಲ್ಲಿ ತಾರಕಕ್ಕೇರಲಿದ್ದು ಇದರ ಪರಿಣಾಮವಾಗಿ ಪಕ್ಷದ ಶಕ್ತಿ ಕುಗ್ಗಲಿದೆ. ಹೀಗೆ ಪಕ್ಷದ ಶಕ್ತಿ ಕುಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವು ಗೆಲ್ಲುವುದು ಕಷ್ಟ. ಹೀಗಾಗಿ ಈ ಹಿಂದೆ ಕಾಂಗ್ರೆಸ್ ಪಕ್ಷದ ಜತೆ ಲೀನವಾದ ಅಖಿಲ ಭಾರತ ಪ್ರಗತಿಪರ ಜನತಾದಳಕ್ಕೆ ಮರುಜೀವ ಕೊಡೋಣ ಮತ್ತು ಜೆಡಿಎಸ್ ಜತೆ ಕೈ ಜೋಡಿಸೋಣ.
ಹೀಗೆ ಜೆಡಿಎಸ್ ಜತೆ ಕೈ ಜೋಡಿಸಿ ಬಿಜೆಪಿಯ ಮಿತ್ರತ್ವದೊಂದಿಗೆ ಚುನಾವಣೆಗೆ ಹೋದರೆ ಗೆಲ್ಲುವುದು ಸುಲಭ ಮತ್ತು ಆ ಮೂಲಕ ನಮ್ಮ ನೆಲೆಯನ್ನು ಉಳಿಸಿಕೊಳ್ಳುವುದು ಸುಲಭ ಎಂಬುದು ಇಂತಹ ಸಚಿವರು,ಶಾಸಕರ ಲೆಕ್ಕಾಚಾರ.
ಮೂಲಗಳ ಪ್ರಕಾರ,ಈ ಲೆಕ್ಕಾಚಾರಕ್ಕೆ ತೀವ್ರತೆ ಸಿಕ್ಕಿಲ್ಲವಾದರೂ ಸಿದ್ಧರಾಮಯ್ಯ ಅವರನ್ನಿಳಿಸುವ ಕೆಲಸಕ್ಕೆ ವರಿಷ್ಟರು ಕೈ ಹಾಕಿದರೆ ಶರವೇಗದಲ್ಲಿ ಹೊಸ ಶಕ್ತಿ ಮೇಲೇಳುವುದು ನಿಶ್ಚಿತ. ಕುತೂಹಲಕಾರಿಯಾದ ಮತ್ತೊಂದು ಅಂಶವೆಂದರೆ, ಹೀಗೆ ತಲೆ ಎತ್ತಲು ಸಜ್ಜಾಗುತ್ತಿರುವ ಹೊಸ ಶಕ್ತಿಗೆ ಸೇರಲು ಬಿಜೆಪಿಯ ಕೆಲ ಮಾಜಿ ಸಚಿವರು ಸಜ್ಜಾಗಿರುವುದು.
ಹಿಂದೆ ಯಡಿಯೂರಪ್ಪ ಅವರ ಭುಜಕ್ಕೆ ಭುಜ ಕೊಟ್ಟು ದುಡಿದ ತಮಗೀಗ ವಯಸ್ಸಿನ ಕಾರಣ ನೀಡಿ ವಿಜಯೇಂದ್ರ ಸೈಡ್ ಲೈನಿಗೆ ತಳ್ಳಿದ್ದಾರೆ.ಆದರೆ ಈಗಲೂ ಚುನಾವಣೆಯಲ್ಲಿ ಗೆಲ್ಲುವ ಶಕ್ತಿ ತಮಗಿದೆ. ಹೀಗಾಗಿ ಹೊಸಶಕ್ತಿಯ ಜತೆ ಕೈ ಜೋಡಿಸಿ ಆಟಕ್ಕಿಳಿಯಬಹುದು ಎಂಬುದು ಈ ಮಾಜಿ ಸಚಿವರ ಯೋಚನೆ.
ಇನ್ನು ಮೂಲಗಳ ಪ್ರಕಾರ,ಅಖಿಲ ಭಾರತ ಪ್ರಗತಿಪರ ಜನತಾದಳಕ್ಕೆ ಮರುಜೀವ ಕೊಡಲು ತಯಾರಿ ನಡೆಸಿರುವ ನಾಯಕರು,ಅದಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ,ಕೇಂದ್ರದ ಉಕ್ಕು ಮತ್ತು ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಜತೆ ಮಾತುಕತೆ ನಡೆಸಿದ್ದಾರೆ.
ಅಂದ ಹಾಗೆ ಸಹಜವಾಗಿಯೇ ಇದು ಕುಮಾರಸ್ವಾಮಿ ಅವರಿಗೆ ಒಪ್ಪಿಗೆಯಾಗಿದೆ.ಹೀಗಾಗಿಯೇ ಅವರು ಪ್ರಧಾನಮಂತ್ರಿ ನರೇಂದ್ರಮೋದಿಯವರ ಬಳಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ನಮಗೆ ಎಂಬತ್ಮೂರು ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂದು ಕೇಳಿಕೊಂಡಿದ್ದಾರೆ.
ಹೀಗೆ ಕೇಳಿರುವ ಎಂಬತ್ಮೂರು ಕ್ಷೇತ್ರಗಳ ಪೈಕಿ ಎಪ್ಪತ್ತರಿಂದ ಎಪ್ಪತ್ತೈದು ಕ್ಷೇತ್ರಗಳು ಸಿಕ್ಕರೂ ಸಾಕು.ಅವತ್ತರಿಂದ ಅರವತ್ತೈದು ಕ್ಷೇತ್ರಗಳಲ್ಲಿ ಗೆಲುವು ಗಳಿಸಬಹುದು ಎಂಬುದು ಕುಮಾರಸ್ವಾಮಿಯವರ ಲೆಕ್ಕಾಚಾರ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಳಯದಲ್ಲಿ ಹರ್ಷ (Political analysis)
ಕಳೆದ ವಾರ ದಿಲ್ಲಿಯಿಂದ ಹಾರಿ ಬಂದ ವರ್ತಮಾನ ಏಕಕಾಲಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಳಯಗಳ ಹರ್ಷಕ್ಕೆ ಕಾರಣವಾಯಿತು. ದಿಲ್ಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ತಮ್ಮ ಪರವಾಗಿವೆ ಎಂಬ ನಂಬಿಕೆಯೇ ಇದಕ್ಕೆ ಕಾರಣ.
ಅಂದ ಹಾಗೆ ಅಸ್ಸಾಂ ವಿಧಾನಸಭೆ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರು ಕಳೆದ ವಾರ ದಿಲ್ಲಿಗೆ ಹೋದರಲ್ಲ? ಈ ಸಂದರ್ಭದಲ್ಲಿ ಪಕ್ಷದ ವರಿಷ್ಟರನ್ನು,ಅದರಲ್ಲೂ ಮುಖ್ಯವಾಗಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದರು ಎಂಬುದೇ ಅವರ ಪಾಳಯಕ್ಕೆ ಜಯದ ಸಂಕೇತವಾಗಿ ಕಾಣಿಸಿತು.
ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅದೆಷ್ಟೇ ಪ್ರಯತ್ನಿಸಿದರೂ ರಾಹುಲ್ ಗಾಂಧಿ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ಬಯಸುತ್ತಿರಲಿಲ್ಲ. ಆದರೆ ಕಳೆದ ವಾರ ದಿಲ್ಲಿಗೆ ಹೋದ ಡಿ.ಕೆ.ಶಿವಕುಮಾರ್ ಅವರು ಈ ಬಗ್ಗೆ ನೋವು ತೋಡಿಕೊಂಡಾಗ ಪ್ರಿಯಾಂಕಾ ಗಾಂಧಿ ಅವರು ದಿಲ್ಲಿಯ ಜನಪಥ್ ನಿವಾಸದಲ್ಲಿ ರಾಹುಲ್ ಮತ್ತು ಡಿ.ಕೆ.ಶಿವಕುಮಾರ್ ಅವರ ಭೇಟಿಗೆ ಟೈಮು ಪಿಕ್ಸ್ ಮಾಡಿಕೊಟ್ಟಿದ್ದಾರೆ.
ಹೀಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಶಿವಕುಮಾರ್ ಅವರು ತಮ್ಮ ನೋವನ್ನು ತೋಡಿಕೊಂಡಿದ್ದಲ್ಲದೆ ಮಾತುಕತೆಯಂತೆ ನಿಗದಿತ ಅವಧಿಯಲ್ಲಿ ಸಿದ್ಧರಾಮಯ್ಯ ಅವರು ಅಧಿಕಾರ ಬಿಟ್ಟುಕೊಟ್ಟಿಲ್ಲ ಎಂದು ವಿವರಿಸಿದ್ದಾರೆ.
ಯಾವಾಗ ಅವರು ಈ ಕುರಿತು ವಿವರವಾಗಿ ಮಾತನಾಡಿದರೋ?ಇದಾದ ನಂತರ ರಾಹುಲ್ ಗಾಂಧಿಯವರಿಗೂ ಕನ್ವಿನ್ಸ್ ಆಗಿದೆ. ಹೀಗಾಗಿ:’ಡೋಂಟ್ ವರಿ ಶಿವಕುಮಾರ್ ಜೀ. ಮುಂ ದಿನ ವಾರವೇ ಮತ್ತೆ ನಿಮ್ಮನ್ನು ದಿಲ್ಲಿಗೆ ಕರೆಸುತ್ತೇವೆ. ಬೇಗ ವಿಷಯ ಸೆಟ್ಲ್ ಮಾಡುತ್ತೇವೆ’ಅಂತ ಹೇಳಿದ್ದಾರೆ.
ಆದ್ದರಿಂದ ಇನ್ನೇನು ಕೆಲವೇ ದಿನಗಳಲ್ಲಿ ವಿಷಯ ಸೆಟ್ಲ್ ಆಗುತ್ಯದೆ.ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂಬುದು ಡಿಕೆಶಿ ಪಾಳಯದ ವಿಶ್ವಾಸ.
ಸಿದ್ದು ಪಾಳಯದ ಲೇಟೆಸ್ಟು ಸುದ್ದಿ (Political analysis)
ಅಂದ ಹಾಗೆ ಡಿಕೆಶಿ ಪಾಳಯದ ಸುದ್ದಿ ಒಂದು ಬಗೆಯಾದರೆ,ಸಿಎಂ ಸಿದ್ದರಾಮಯ್ಯ ಅವರ ಪಾಳಯದ ಸುದ್ದಿಯೇ ಬೇರೆ.ಅದರ ಪ್ರಕಾರ,ಅಧಿಕಾರ ಹಂಚಿಕೆಯ ಬಗ್ಗೆ ಜೂನ್ ತನಕ ಮಾತನಾಡಲು ರಾಹುಲ್ ಗಾಂಧಿ ಸಿದ್ಧರಿಲ್ಲ.
ಮಾರ್ಚ್ ನಲ್ಲಿ ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಏಪ್ರಿಲ್-ಮೇ ತಿಂಗಳಲ್ಲಿ ತಮಿಳುನಾಡು,ಕೇರಳ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯ ಲಿದೆ.
ಈ ರಾಜ್ಯಗಳಲ್ಲಿ ಅಹಿಂದ ಮತದಾರರು ಸಾಲಿಡ್ಡಾಗಿರುವುದರಿಂದ ಸಿದ್ದರಾಮಯ್ಯ ಅವರನ್ನಿಳಿಸಿ,ರಾಂಗ್ ಮೆಸೇಜ್ ಕೊಡುವ ಗೋಜಿಗೆ ರಾಹುಲ್ ಗಾಂಧಿ ಹೋಗುವುದಿಲ್ಲ.ಇದಾದ ನಂತರ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ,ವಿಧಾನಪರಿಷತ್ತಿನ ಹಲವು ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ.
ಹೀಗಾಗಿ ಈ ಸಂದರ್ಭದಲ್ಲಿ ಸಿದ್ಧರಾಮಯ್ಯ ಅವರನ್ನು ಮುಟ್ಟುವ ಗೋಜಿಗೆ ರಾಹುಲ್ ಹೋಗುವುದಿಲ್ಲ. ಅಂದ ಹಾಗೆ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆ ಯಲ್ಲಿ ಮೂರು ಸ್ಥಾನಗಳನ್ನು ಗೆಲ್ಲುವ ಅವಕಾಶ ಕಾಂಗ್ರೆಸ್ ಗಿದ್ದು,ಈ ಪೈಕಿ ಒಂದು ಸೀಟು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಕ್ಕರೆ ಇನ್ನೆರಡು ಸ್ಥಾನಗಳ ಪೈಕಿ ಒಂದು ಸೀಟು ಲಿಂಗಾಯತರಿಗೆ,ಒಂದು ಸೀಟು ಓಬಿಸಿಗೆ ಕೊಡುವುದು ವರಿಷ್ಟರ ಲೆಕ್ಕಾಚಾರ.
ಆದರೆ ಈ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ಪಟ್ಟು ಬಿಗಿಯಾದರೆ,ಅವರ ಸಹೋದರ ಡಿ.ಕೆ.ಸುರೇಶ್ ಅವರಿಗೆ ಒಂದು ಸೀಟು ದಕ್ಕಬಹುದು ಮತ್ತು ಅ ಮೂಲಕ ಡಿ.ಕೆ.ಶಿವ ಕುಮಾರ್ ಅವರನ್ನು ಸಮಾಧಾನಿಸಲು ವರಿಷ್ಟರು ಯತ್ನಿಸಬಹುದು ಎಂಬುದು ಸಿದ್ದು ಪಾಳಯದ ಮಾತು.
ಇನ್ನು ಕಳೆದ ವಾರ ನಡೆದ ಡಿಕೆಶಿ ದಿಲ್ಲಿ ಯಾತ್ರೆ ಫ್ಲಾಪ್ ಆಗಿದೆ ಎನ್ನುವ ಸಿದ್ದು ಪಾಳಯ,ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಪ್ರತಿಕ್ರಿಯೆ ಡಿ.ಕೆ.ಶಿವಕುಮಾರ್ ಅವರಿಗೆ ನಿರಾಸೆ ಮೂಡಿಸಿದೆ.
ಇದೇ ರೀತಿ ರಾಹುಲ್ ಗಾಂಧಿ ಅವರಿಂದ ಭರವಸೆ ಪಡೆಯಲು ಶಿವಕುಮಾರ್ ವಿಫಲರಾಗಿದ್ದಾರೆ.ಅಲ್ಲಿಗೆ ಜೂನ್ ತನಕ ಯಥಾ ಸ್ಥಿತಿ ಗ್ಯಾರಂಟಿ ಎನ್ನುತ್ತಿದೆ.
ಬಿಜೆಪಿಯಲ್ಲಿ ಹೊಸ ಸಂಕಟ (Political analysis)
ಇನ್ನು ಈ ವಾರ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಈ ಸಭೆಗೂ ಮುನ್ನ ಪಕ್ಷದ ಎರಡನೇ ಹಂತದ ನಾಯಕರಲ್ಲಿ ಅಸಮಾಧಾನ ಕಾಣಿಸಿಕೊಂಡಿದೆ. ಅವರ ಅಸಮಾಧಾನಕ್ಕೆ ಕೇಂದ್ರದ ಬಿಜೆಪಿ ನಾಯಕರ ಧೋರಣೆಯೇ ಕಾರಣ.ಅಂದ ಹಾಗೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಇಪ್ಪತ್ತು ತಿಂಗಳುಗಳಾದವು.
ಆದರೆ, ಇಷ್ಟು ಕಾಲ ಕಳೆದರೂ ರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ಕೇಂದ್ರದ ನಿಗಮ-ಮಂಡಳಿಗಳ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಗಳನ್ನು ನೀಡುವ ಕೆಲಸವಾಗಿಲ್ಲ. ಇವತ್ತು ರೇಷ್ಮೇ ಮಂಡಳಿ, ಕಾಫಿ ಬೋರ್ಡ್ ನಿಂದ ಹಿಡಿದು ಹಲವು ನಿಗಮ-ಮಂಡಳಿಗಳಿವೆ.
ಇದೇ ರೀತಿ ಇವತ್ತು ಕೇಂದ್ರದಲ್ಲಿ ಮಂತ್ರಿಗಳಾಗಿರುವ ಪ್ರಲ್ಹಾದ ಜೋಷಿ,ವಿ.ಸೋಮಣ್ಣ,ಹೆಚ್.ಡಿ.ಕುಮಾರಸ್ವಾಮಿ,ಶೋಭಾ ಕರಂದ್ಲಾಜೆ ಅವರು ನೋಡಿಕೊಳ್ಳುತ್ತಿರುವ ಖಾತೆಗಳ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರಿಗೆ ಸ್ಥಾನ ಮಾನ ನೀಡಬಹುದು. ಅದರೆ ಮೋದಿ ಸರ್ಕಾರಕ್ಕೆ ಇಪ್ಪತ್ತು ತಿಂಗಳು ಭರ್ತಿಯಾದರೂ ರಾಜ್ಯದಲ್ಲಿರುವ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸವಾಗಿಲ್ಲ.
ಇರುವುದರಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೇಂದ್ರದ ನಾಯಕರಿಗೆ ಪತ್ರಗಳ ಮೇಲೆ ಪತ್ರ ಬರೆಯುತ್ತಾ,ಈ ಕುರಿತು ಗಮನ ಸೆಳೆಯುವ ಕೆಲಸ ಮಾಡಿದ್ದಾರಾ ದರೂ ಅದರಿಂದ ಯಾವ ಪ್ರಯೋಜನವೂ ಆಗಿಲ್ಲ. ಹೋಗಲಿ ಈಗ ಪಕ್ಷದ ವೇದಿಕೆಯಲ್ಲಸದರೂ ಇದರ ಪ್ರಸ್ತಾಪಕ್ಕೆ ಅವಕಾಶ ಸಿಗುತ್ತದಾ ಎಂದರೆ ಅದೂ ಕಷ್ಟ ಎಂಬ ಪರಿಸ್ಥಿತಿ.
ಯಾಕೆಂದರೆ ರಾಜ್ಯ ಕಾರ್ಯಕಾರಿಣಿ ಮೂರು ಹಂತಗಳನ್ನು ಒಳಗೊಂಡಿರಲಿದ್ದು,ಮೊದಲನೇ ಹಂತದಲ್ಲಿ ದಿಲ್ಲಿಯಿಂದ ಬರುವ ನಾಯಕರು,ಎರಡನೇ ಹಂತದಲ್ಲಿ ರಾಜ್ಯದ ನಾಯಕರು ಮಾತನಾಡುತ್ತಾರೆ.
ಇವರ ಪೈಕಿ ಯಾರೂ ಎರಡನೇ ಹಂತದ ನಾಯಕರು ಮತ್ತು ಕಾರ್ಯಕರ್ತರ ಗೋಳಿನ ಬಗ್ಗೆ ಮಾತನಾಡುವುದಿಲ್ಲ.ಇದಾದ ನಂತರ ಸಮಾರೋಪ ನಡೆದು ಸಭೆ ಬರಖಾಸ್ತಾಗುತ್ತದೆ.
ಹೀಗಾಗಿ ಈ ಬಾರಿಯೂ ತಮ್ಮ ನೋವಿಗೆ ಪರಿಹಾರ ಸಿಗುವುದು ಕಷ್ಟ.ಆದ್ದರಿಂದ ಪತ್ರ ಚಳವಳಿ ಅರಂಭಿಸುವುದು,ದಿಲ್ಲಿ ವರಿಷ್ಟರ ಗಮನ ಸೆಳೆಯುವುದು ಇವರ ಯೋಚನೆ.
ಲಾಸ್ಟ್ ಸಿಪ್ (Political analysis)
ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ನಾಯಕ,ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಪ್ರಧಾನಿ ನರೇಂದ್ರಮೋದಿ ಅವರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇದಕ್ಕೆ ಕಾರಣ ಅವರ ಕೆಲಸದ ವೈಖರಿ.
ತಾವು ನೋಡಿಕೊಳ್ಳುತ್ತಿರುವ ಉಕ್ಕು ಮತ್ತು ಕೈಗಾರಿಕಾ ಖಾತೆಯನ್ನು ಕುಮಾರಸ್ವಾಮಿ ಎಷ್ಟು ಪಾರದರ್ಶಕವಾಗಿ ಮುನ್ನಡೆಸುತ್ತಿದ್ದಾರೆ ಎಂದರೆ ತಾವು ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಪ್ರಧಾನಿ ಕಚೇರಿಯ ಗ್ರೀನ್ ಸಿಗ್ನಲ್ ಪಡೆಯುತ್ತಾರೆ. ಅಂದ ಹಾಗೆ ದಿಲ್ಲಿಯ ಪವರ್ ಬ್ರೋಕರುಗಳು ಎಷ್ಟು ಖತರ್ ನಾಕ್ ಎಂದರೆ ಮಂತ್ರಿಗಳಿಗೆ ಸದಾ ಕಾಲ ಖೆಡ್ಡಾ ತೋಡುತ್ತಿರುತ್ತಾರೆ.
ಈ ಹಿಂದೆ ಕರ್ನಾಟಕದಿಂದ ಮಂತ್ರಿಗಳಾಗಿ ಪವರ್ ಫುಲ್ ಖಾತೆ ಪಡೆದ ಕೆಲವರು ಈ ಲಾಬಿಯ ಹೊಡೆತಕ್ಕೆ ಮಕಾಡೆ ಮಲಗಿ ಕರ್ನಾಟಕಕ್ಕೆ ವಾಪಸ್ಸಾದ ಉದಾಹರಣೆಗಳು ಇನ್ನೂ ಹಸಿರಾಗಿವೆ.
ಇದನ್ನೆಲ್ಲ ಬಲ್ಲ ಕುಮಾರಸ್ವಾಮಿ ತಾವಿಡುವ ಒಂದೊಂದು ಹೆಜ್ಜೆಯ ವಿವರ ಪ್ರಧಾನಿ ಕಾರ್ಯಾಲಯದ ಗಮನದಲ್ಲಿರುವಂತೆ ನೋಡಿಕೊಳ್ಳುತ್ತಾರೆ.ಇದೇ ರೀತಿ ತಮ್ಮ ಖಾತೆಗೆ ಸಂಬಂಧಿಸಿದಂತೆ ಪ್ರಭಾವಿಗಳು,ಉದ್ಯಮಿಗಳು ಮಾತನಾಡಲು ಬಂದರೆ ಮೀಟಿಂಗಿನಲ್ಲಿ ಅವರಲ್ಲದೆ ಇನ್ನೂ ಹಲವರು ಇರುವಂತೆ ನೋಡಿಕೊಳ್ಳುತ್ತಾರೆ.
ಅವರ ಈ ನಡೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಷ್ಟು ಇಷ್ಟವಾಗಿದೆ ಎಂದರೆ ಇದೇ ಕಾರಣಕ್ಕಾಗಿ ಅವರಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ಕೊಡುತ್ತಿದ್ದಾರೆ. ಮುಂದಿನ ಸಂಪು ಟ ಪುನರ್ರಚನೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಕೈಗೆ ಅವರು ಮತ್ತಷ್ಟು ಬಲಿಷ್ಟ ಖಾತೆ ನೀಡುವ ಯೋಚನೆಯಲ್ಲಿದ್ದಾರೆ ಎಂಬುದು ಲೇಟೆಸ್ಟು ಸುದ್ದಿ.
ಆರ್.ಟಿ.ವಿಠ್ಠಲಮೂರ್ತಿ