ದಾವಣಗೆರೆ (Davanagere): ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನಾಲಗೆ ಕತ್ತರಿಸಿದವರಿಗೆ 11 ಲಕ್ಷ ರೂ. ಬಹುಮಾನ ಕೊಡುವುದಾಗಿ ಹೇಳಿರುವ ಶಿವಸೇನೆಯ ಶಿಂಧೆ ಬಣದ ಶಾಸಕ ಸಂಜಯ್ ಗಾಯಕ್ ವಾಡ್ ಮತ್ತು ರಾಹುಲ್ ಗಾಂಧಿ ಭಯೋತ್ಪಾದಕ ಎಂಬ ವಿವಾದಾತ್ಮಕ ಮಾತು ಆಡಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರನ್ನು ಬಂಧಿಸಿ ಜೈಲಿಗಟ್ಟಬೇಕು. ಕೂಡಲೇ ಇಬ್ಬರು ರಾಜೀನಾಮೆ ನೀಡಬೇಕು ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಹೋರಾಟ ಮುಂದುವರಿಸಿದ್ದಾರೆ. ಅಕ್ರಮಗಳನ್ನು ಬಯಲಿಗೆಳೆಯುತ್ತಿದ್ದಾರೆ. ಸರ್ವಾಧಿಕಾರಿ ಆಡಳಿತದ ವಿರುದ್ಧ ಧ್ವನಿ ಎತ್ತಿದ್ದಾರೆ. ಐಟಿ, ಇಡಿ, ಸಿಬಿಐನಂಥ ಸ್ವಾಯುತ್ತ ಸಂಸ್ಥೆಗಳ ದುರ್ಬಳಕೆ ವಿರುದ್ಧ ಜನರಿಗೆ ಮನದಟ್ಟು ಮಾಡುವ ಕೆಲಸ ಮಾಡುತ್ತಿದ್ದು, ಇಂಥ ನಾಯಕನ ನಾಲಗೆ ಕತ್ತರಿಸಿ, ಭಯೋತ್ಪಾದಕ ಎಂಬ ಹೇಳಿಕೆ ನೀಡಿದ್ದರೂ ಕೇಂದ್ರದ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ಗಮನಿಸಿದರೆ ಬಿಜೆಪಿ ನಾಯಕರ ಕೈವಾಡ ಇರುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದ್ದಾರೆ.
ಇಂಧಿರಾಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಉನ್ನತ ತ್ಯಾಗ, ಬಲಿದಾನದ ಕುಟುಂಬದಿಂದ ಬಂದ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ನಡೆಸಿ ದೇಶಾದ್ಯಂತ ಜನರಿಗೆ ಹತ್ತಿರವಾದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 99 ಲೋಕಸಭಾ ಸ್ಥಾನ ಪಡೆಯಲು ಇದು ಕಾರಣವಾಯಿತು. ದಿನಕಳೆದಂತೆ ರಾಹುಲ್ ಗಾಂಧಿ ಅವರ ಜನಪ್ರಿಯತೆ ಕಂಡು ಹೆದರಿರುವ ಬಿಜೆಪಿ ನಾಯಕರು ಬೆದರಿಕೆ ಹಾಕುವಂಥ ಕೃತ್ಯಕ್ಕೆ ಹಾಕಿರುವುದು ಖಂಡನೀಯ ಎಂದು ಕಿಡಿಕಾರಿದ್ದಾರೆ.
Read also : Harihara | ಆತ್ಮರಕ್ಷಣೆಗೆ ಟೇಕ್ವಾಂಡೋ ಕಲೆ ಸಹಕಾರಿ
ರಾಹುಲ್ ಗಾಂಧಿ ಅವರಿಗೆ ಅವರ ಅಜ್ಜಿ ಇಂದಿರಾ ಗಾಂಧಿಗೆ ಆದ ಗತಿಯೇ ಆಗುತ್ತದೆ ಎಂಬ ಬೆದರಿಕೆಯನ್ನು ಬಿಜೆಪಿ ನಾಯಕರು ಹಾಕುತ್ತಿದ್ದಾರೆ. ಈ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಎತ್ತಿಕಟ್ಟುವ ಷಡ್ಯಂತ್ರ ನಡೆಸುತ್ತಿರುವುದು ಕಂಡು ಬರುತ್ತಿದೆ. ನಾಲಗೆ ಕತ್ತರಿಸುವ ಮಾತನಾಡಿರುವ ಸಂಜಯ್ ಗಾಯಕ್ ವಾಡ್ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಜೈಲಿಗೆ ಕಳುಹಿಸಬೇಕು. ಉತ್ತರ ಪ್ರದೇಶದ ಸಚಿವರೊಬ್ಬರು ರಾಹುಲ್ ಗಾಂಧಿ ಈ ದೇಶದ ನಂಬರ್ ಒನ್ ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಇವತ್ತಿನವರೆಗೂ ಬಿಜೆಪಿ ಪಕ್ಷವಾಗಲಿ, ಬಿಜೆಪಿ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಕ್ರಮ ಕೈಗೊಂಡಿಲ್ಲ. ಕಾಟಾಚಾರಕ್ಕೆ ಪ್ರಕರಣ ದಾಖಲಿಸಲಾಗಿದೆ.
ಪ್ರತಿಭಟನೆ ನಡೆಸುವ ಕಾಂಗ್ರೆಸ್ ಕಾರ್ಯಕರ್ತರನ್ನು ಹೂತು ಹಾಕುವುದಾಗಿ ಸಂಜಯ್ ಗಾಯಕ್ ವಾಡ್ ಬೆದರಿಕೆ ಹಾಕಿದ್ದು, ಈತನನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಸೈಯದ್ ಖಾಲಿದ್ ಅಹ್ಮದ್ ಆಗ್ರಹಿಸಿದ್ದಾರೆ.