ದಾವಣಗೆರೆ : ಅ.25 (Davanagere) : ಮುಂದಿನ ಮೂರು ದಿನಗಳಲ್ಲಿ ಜಂಟಿ ಬೆಳೆ ಸಮೀಕ್ಷೆ ನಡೆಸಿ ಹಾನಿಯಾದ ರೈತರಿಗೆ ಬರುವ 15 ದಿನಗಳಲ್ಲಿ ಡಿಬಿಟಿ ಮೂಲಕ ಬೆಳೆ ನಷ್ಟ ಪರಿಹಾರ ಒದಗಿಸಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಶುಕ್ರವಾರ ಜಗಳೂರು ತಾಲ್ಲೂಕಿನ ಸಂಗೇನಹಳ್ಳಿ ಕೆರೆ ಕೋಡಿ ವೀಕ್ಷಣೆ, ಹಿರೇಮಲ್ಲನಹೊಳೆಯಲ್ಲಿ ಹಾನಿಯಾದ ಮನೆ ವೀಕ್ಷಣೆ ಮತ್ತು ಬೆಳೆ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್ ತಿಂಗಳಲ್ಲಿಯೇ ಅತೀ ಹೆಚ್ಚು ಮಳೆಯಾಗಿದ್ದು ಪ್ರಾಥಮಿಕ ಅಂದಾಜು ಬೆಳೆ ನಷ್ಟಕ್ಕಿಂತ ಇನ್ನೂ ಹೆಚ್ಚಿನ ಬೆಳೆ ನಷ್ಟವಾಗಿರುವ ವರದಿ ನಿರೀಕ್ಷಿಸಲಾಗಿದ್ದು ಮೂರು ದಿನಗಳಲ್ಲಿ ಜಂಟಿ ಸಮೀಕ್ಷೆಯ ನಂತರ ಬೆಳೆ ನಷ್ಟದ ನಿಖರತೆ ತಿಳಿಯಲಿದೆ. ಇದಕ್ಕಾಗಿಯೇ ಶನಿವಾರ ಮುಖ್ಯಮಂತ್ರಿಗಳೊಂದಿಗೆ ಅಧಿಕ ಮಳೆಯಾದ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿ ಸೂಚನೆ ನೀಡಲಾಗುತ್ತದೆ ಎಂದರು.
ರಾಜ್ಯದಲ್ಲಿ ಹಿಂಗಾರು ಹಂಗಾಮಿನ ಅಕ್ಟೋಬರ್ ತಿಂಗಳಲ್ಲಿಯೇ ಶೇ 66 ರಷ್ಟು ಸುರಿದ ಅಧಿಕ ಮಳೆಯಿಂದ ರಾಜ್ಯದಲ್ಲಿ ಈವರೆಗೆ 56993 ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿ ಉಂಟಾದ ವರದಿ ಇದ್ದು, ಹಿಂಗಾರು ಹಂಗಾಮಿನಲ್ಲಿ 21 ಜನರ ಪ್ರಾಣಹಾನಿಯಾಗಿದ್ದು ಇದರಲ್ಲಿ 9 ಜನರು ಸಿಡಿಲಿನಿಂದ ಮರಣ ಹೊಂದಿದ್ದರೆ, 6 ಜನರು ಮನೆ ಕುಸಿತದಿಂದ ಸಾವನ್ನಪ್ಪಿದ್ದಾರೆ. 3 ರಿಂದ 4 ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮುಂಗಾರು ಸೇರಿದಂತೆ ಇಲ್ಲಿಯವರೆಗೆ 121 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮುಂಗಾರು ಹಂಗಾಮಿನಲ್ಲಿ 2589 ಮತ್ತು ಹಿಂಗಾರಿನಲ್ಲಿ 121 ಮನೆಗಳು ಬಿದ್ದು ಹೋಗಿವೆ, ಇವರಿಗೆ ಮನೆ ಪರಿಹಾರದ ಜೊತೆಗೆ ಮನೆ ನಿರ್ಮಿಸಿಕೊಡಲಾಗುತ್ತದೆ ಎಂದರು.
ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ ಮನೆ ಬಿದ್ದು ಹೋಗಿದ್ದಲ್ಲಿ ಎಸ್.ಡಿ.ಆರ್.ಎಫ್ ನಡಿ 1 ಲಕ್ಷ ಪರಿಹಾರ ನೀಡಲಾಗುತ್ತದೆ. ಮುಂಗಾರು ಹಂಗಾಮಿನಲ್ಲಿ 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಷ್ಟವಾಗಿದ್ದು ಈಗಾಗಲೇ ಪರಿಹಾರ ನೀಡಲಾಗಿದ್ದು ಕೆಲವೇ ದಿನಗಳಲ್ಲಿ ಮುಂಗಾರು ಬೆಳೆನಷ್ಟ ಪರಿಹಾರ ಪಾವತಿ ಪೂರ್ಣವಾಗಲಿದೆ ಎಂದರು.
666 ಕೋಟಿ ಲಭ್ಯ; ಬೆಳೆಹಾನಿ, ಜೀವಹಾನಿ ಹಾಗೂ ಮನೆ ಬಿದ್ದುಹೋಗಿದ್ದಲ್ಲಿ ತಕ್ಷಣವೇ ಪರಿಹಾರ ನೀಡಲು ಜಿಲ್ಲಾಧಿಕಾರಿ, ತಹಶೀಲ್ದಾರರ ಖಾತೆಗಳಲ್ಲಿ 666 ಕೋಟಿಯಷ್ಟು ಹಣವಿದ್ದು ಪ್ರಕೃತಿ ವಿಕೋಪ ಎದುರಿಸಲು ಯಾವುದೇ ಅನುದಾನದ ಕೊರತೆ ಇರುವುದಿಲ್ಲ. ಕಷ್ಟ ಕಾಲದಲ್ಲಿ ಪರಿಹಾರ ನೀಡಿದಲ್ಲಿ ಉಪಯುಕ್ತವಾಗಲಿದೆ ಎಂದು ತ್ವರಿತವಾಗಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಶೇ 190 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ಅನೇಕ ಕೆರೆ, ಕಟ್ಟೆಗಳು ತುಂಬಿವೆ ಮತ್ತು ಬೆಳೆ ನಷ್ಟ ಉಂಟಾಗಿದೆ. ಬೆಳೆ ನಷ್ಟವಾದ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಹಿರೇಮಲ್ಲನಹೊಳೆ ಗ್ರಾಮದಲ್ಲಿ ಕೆರೆ ಕೋಡಿಯಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿದ್ದರಿಂದ ಇಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು ಇಲ್ಲಿರುವ 35 ಮನೆಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಸೂಚಿಸಲಾಗಿದ್ದು ಮನೆ ಪರಿಹಾರದ ಜೊತೆಗೆ ಬೇರೆಡೆ ನಿವೇಶನ ನೀಡಿ ಇವರಿಗೆ ಮನೆ ನಿರ್ಮಿಸಿಕೊಡಲಾಗುತ್ತದೆ. ಇವರಿಗೆ ಮುಂದಿನ ಎರಡು ತಿಂಗಳಲ್ಲಿ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ಸೂಚಿಸಲಾಗಿದೆ. ಮತ್ತು ಇದೇ ಗ್ರಾಮದಲ್ಲಿ ಮನೆಗಳು ಕುಸಿದಿದ್ದು ಈ ಮನೆಗಳಿಗೂ ಪರಿಹಾರದ ಜೊತೆಗೆ ಬದಲಿ ನಿವೇಶನ ಹಾಗೂ ಮನೆ ನಿರ್ಮಾಣ ಮಾಡಿಕೊಡಲು ತಿಳಿಸಲಾಗಿದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಮಾರ್ಚ್ ನಿಂದ ಮೇ ವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ಹಾನಿಯಾದ 1 ಮನೆ, ಭಾಗಶಃ 35 ಮನೆಗಳು, 25 ಕುರಿಗಳು ಮೃತ, 251.8 ಹೆಕ್ಟೇರ್ ಬೆಳೆ ಹಾನಿಯಾಗಿದ್ದು ರೂ.11.24 ಲಕ್ಷ ಪರಿಹಾರ ನೀಡಿದೆ. ಜೂನ್ ನಿಂದ ಸೆಪ್ಟೆಂಬರ್ ವರೆಗೆ 5 ಹಸು, 17 ಕುರಿಗಳು ಮೃತಪಟ್ಟಿದ್ದು ರೂ.2.71 ಲಕ್ಷ ಪರಿಹಾರ ನೀಡಲಾಗಿದೆ. ಮನೆಗಳಲ್ಲಿ 85 ಪೂರ್ಣ ಹಾನಿ, 97 ಭಾಗಶಃ ಹಾನಿ, 109 ಅಲ್ಪ ಹಾನಿಯಾಗಿದ್ದು ಒಟ್ಟು 1,83,20,000 ರೂ.ಗಳ ಪರಿಹಾರ ನೀಡಿದೆ. ಹಾನಿಯಾದ ಮೂಲ ಸೌಕರ್ಯಗಳ ಅಭಿವೃದ್ದಿಗೆ ರೂ.2,14,95,000 ಗಳನ್ನು ಒದಗಿಸಲಾಗಿದೆ.
ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್‍ನಲ್ಲಿ ಮನೆ ಗೋಡೆ ಬಿದ್ದು ಮೃತರ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ನೀಡಿದೆ. ನ್ಯಾಮತಿ ತಾಲ್ಲೂಕಿನಲ್ಲಿ ಹಳ್ಳದಲ್ಲಿ ಕೊಚ್ಚಿ ಮೃತರಿಗೆ ವರದಿ ಬಂದ ತಕ್ಷಣ ಪರಿಹಾರ ಒದಗಿಸಲಾಗುತ್ತದೆ. 4 ಹಸುಗಳು, 16 ಕುರಿಗಳು ಮರಣ ಹೊಂದಿದ್ದು ರೂ.2.13 ಲಕ್ಷ ಪರಿಹಾರ ನೀಡಲಾಗಿದೆ. ಬೆಳೆ ಸಮೀಕ್ಷೆ ನಡೆಯುತ್ತಿದ್ದು ಸಮೀಕ್ಷೆ ನಂತರ ಪರಿಹಾರ ನೀಡಲಾಗುತ್ತದೆ. ಜಿಲ್ಲೆಯ ಎಲ್ಲಾ ತಹಶೀಲ್ದಾರರ ಖಾತೆಯಲ್ಲಿ ರೂ.1.68 ಕೋಟಿ ಮತ್ತು ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ರೂ.10.60 ಕೋಟಿ ಹಣವಿರುತ್ತದೆ.
Read also : Harihara | ಲೋಕಾ ಬಲೆಗೆ ಬಿದ್ದ ಹರಿಹರ ನಗರಸಭಾ ಅಧಿಕಾರಿಗಳು
ಸಚಿವರೊಂದಿಗೆ ಸಮೀಕ್ಷೆ ವೇಳೆ ಶಾಸಕರಾದ ಬಿ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಸೇರಿದಂತೆ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.