Kannada News | Dinamaana.com |
ಅಡುಗೆ, ಕೆಲವರಿಗೆ ಮಾಡಲು ಇಷ್ಟ ಇನ್ನು ಕೆಲವರಿಗೆ ಕಷ್ಟ. ಅಡುಗೆಯಲ್ಲಿ ತರಹೇವಾರಿ ಐಟಂಗಳಿವೆಯಾದರೂ, ನಾನು ಖುಷಿಯಿಂದ ಮಾಡುವ ಅಡುಗೆಯೆಂದರೆ ನನ್ನಮ್ಮನಿಂದ ಕಲಿತ ಮುದ್ದೆ. ಅದೂ ರಾಗಿ ಮುದ್ದೆಯಾದ್ರೆ ತುಂಬಾ ಆಸಕ್ತಿಯಿಂದ ಮಾಡುತ್ತೇನೆ. ಜೋಳದ ಮುದ್ದೆಯಾದ್ರೆ ಕಷ್ಟ.
ಈ ಮುದ್ದೆ ಮಾಡುವುದನ್ನು ಕಲಿತದದ್ದು ಮಾತ್ರ 9ನೇ ತರಗತಿಯಲ್ಲಿದ್ದಾಗ. ಆದ್ರೆ ನನಗೆ ಚೆನ್ನಾಗಿ ನೆನಪಿದೆ. ನಾನು ಮೊದಲ ಅಡುಗೆ ಮಾಡಿದ್ದು ಮಾತ್ರ (ಕಲಿತದ್ದಲ್ಲ, ಏಕೆಂದರೆ ಈಗಲೂ ನನಗೆ ರೊಟ್ಟಿಅಥವಾ ಚಪಾತಿ ಮಾಡಲು ಬರುವುದಿಲ್ಲ) 1989ನೇ ಇಸವಿ, 5ನೇ ತರಗತಿಯಲ್ಲಿದ್ದಾಗ. ಆ ದಿನ ಶನಿವಾರವಾಗಿತ್ತು.
ಈಗಿನಂತೆ ಆಗ ಶಾಲೆಯಲ್ಲಿ ಬಿಸಿಯೂಟ ಇದ್ದಿಲ್ಲ.ಮೇಲಾಗಿ ಆಗ ಮನೆಯಲ್ಲಿ ಯಾರೂ ಇರಲಿಲ್ಲ. ಮಟ ಮಟ ಮಧ್ಯಾಹ್ನ. ಸೂರ್ಯ ತಲೆ ಮೇಲೆ ಕುಳಿತವನಂತೆ ನೆತ್ತಿಯನ್ನು ಸುಡುತ್ತಿದ್ದ. ಶಾಲೆಯಿಂದ ಬಂದವನೇ ತುಂಬಾನೇ ಹಸಿವೆಯಾಗಿ ಅಡುಗೆ ಮನೆಯ ಪಾತ್ರೆ ಪಡಗಗಳನ್ನೆಲ್ಲಾ ಬೆದಕಿದೆ.
ಆದ್ರೂ ಒಂದೇ ಒಂದು ಅನ್ನದ ಅಗುಳಿನ ಸುಳಿವೂ ಸಿಗಲಿಲ್ಲ. ಹೊಟ್ಟೆ ಬೇರೆ ಸ್ವರತಪ್ಪಿ ಗುಟುರಾಕುತಿತ್ತು. ಏನು ಮಾಡುವುದೆಂದು ಯೋಚಿಸುತ್ತಿದ್ದಾಗ ತಕ್ಷಣವೇ ಕಣ್ಣಿಗೆ ಬಿದ್ದದ್ದು ಜೋಳದ ಹಿಟ್ಟಿನ ಡಬ್ಬಿ. ತಡ ಮಾಡದೇ ಸುಮಾರು ಒಂದರ್ಧ ಕೆಜಿಯಷ್ಟು ಹಿಟ್ಟು ತೆಗೆದುಕೊಂಡು ನೀರು ಸುರಿದು ಕಲೆಸಿ ಚಪಾತಿ ಮಾಡಲು ನಿರ್ಧರಿಸಿದೆ (ನಿಜವಾಗಿಯೂ ಜೋಳದ ಹಿಟ್ಟಿನಿಂದ ಚಪಾತಿ ಮಾಡಲು ಬರುವುದಿಲ್ಲವೆಂದು ಗೊತ್ತಿರಲಿಲ್ಲ). ಈಗ ನಾನು ತಿಳಿದಿರುವಂತೆ ಕಲೆಸಿದ ಹಿಟ್ಟು ಮೆದುವಾಗಲು ಅರ್ಧ ಅಥವಾ ಒಂದು ಗಂಟೆಯವರೆಗೆ ಬಿಡಬೇಕೆಂಬ ಜ್ಞಾನವೂ ಇರಲಿಲ್ಲ.
ಇದ್ದಿದ್ದರೂ ಉಪಯೋಗವಿರಲಿಲ್ಲ. ಏಕೆಂದರೆ ನಾನು ಚಪಾತಿ ಮಾಡಲು ಬಳಸಿದ್ದು ಜೋಳದ ಹಿಟ್ಟೇ ಹೊರತು ಗೋಧಿ ಹಿಟ್ಟನ್ನಲ್ಲ, ನಂತರ ಇಡೀ ಹಿಟ್ಟನ್ನು ಎರಡು ಭಾಗ ಮಾಡಿ ಒಂದು ಭಾಗವನ್ನು (ಸುಮಾರು ಕಾಲು ಕೆಜಿಯಷ್ಟು) ಚಪಾತಿ ಮಣೆಯ ಮೇಲೆ ಇಟ್ಟುಲ ತೂಡಿಯಿಂದ ಉದ್ದಲಾರಂಭಿಸಿದೆ.
ನಾನು ಒತ್ತಡ ಹಾಕಿ ಉದ್ದಿದಷ್ಟೂ ಚಪಾತಿ (ಈಗ ರೊಟ್ಟಿ) ಬರಗಾಲದಲ್ಲಿ ಬಿರುಕು ಬಿಟ್ಟ ಕರೆಯಂಗಳದಂತೆ ಸುತ್ತಲೂ ಬಿರಿಯಲಾರಂಭಿಸಿದವು. ಆ ಬಿರುಕುಗಳನ್ನೆಲ್ಲಾ ಸರಿಮಾಡಿಕೊಂಡು ಉದ್ದಿದಷ್ಟೂ ಮತ್ತೆ ಮತ್ತೆ ಹರಿಯಲಾರಂಭಿಸಿದವು. ನಾನು ಸ್ಪರ್ಧೆಗೆ ಬಿದ್ದವನಂತೆ ಉದ್ದುವುದಕ್ಕೂಅವು ಸುತ್ತಲೂ ಬಿರಿಯುವುದಕ್ಕೂ ಸರಿಹೋಗಿತ್ತು. ನನಗೆ ತುಂಬಾನೇ ಬೇಸರವಾಯಿತು.
ಏಕೆಂದರೆ ಅಮ್ಮ, ಅಕ್ಕ ಚಪಾತಿ ಮಾಡುವಾಗ ಸುತ್ತಲೂ ಸ್ವಲ್ಪವೂ ಹರಿಯದಂತೆ ದುಂಡಾಗಿರರ್ತಿದ್ದವು. ಆದ್ರೆ ನಾನು ಮಾಡುವಾಗ ಹೀಗೇಕೆ ಅಂತ ಸಿಟ್ಟೂ ಬಂತು. ಅಂತೂ ಇಂತೂ ಸಮಾಧಾನದಿಂದ ಸುತ್ತಲಿನ ಹರುಕುಗಳನ್ನೆಲ್ಲಾ ಸರಿಮಾಡಿಕೊಂಡು ಎರಡು ರೊಟ್ಟಿಗಳನ್ನುಉದ್ದುವಷ್ಟರಲ್ಲಿ ಸಾಕು ಸಾಕಾಗಿ ಹೋಯಿತು.
ರೊಟ್ಟಿಯೇನೋ ತಯಾರಾದವು. ಆದ್ರೆ ಒಂದೊಂದು ರೊಟ್ಟಿಯೂ ಕಡುಬಿನ ಗಾತ್ರದಲ್ಲಿದ್ದವು. ಆ ಕಾಲಕ್ಕೆ ಸಿಲಿಂಡರ್ ಇಲ್ಲದಿದ್ದರಿಂದ, ಒಲೆಗೆ ಸಣ್ಣಕಟ್ಟಿಗೆ ಚೂರುಗಳ ಜೊತೆ ಪೇಪರ್ ತುಂಡು ಹಾಕಿ ಬೆಂಕಿ ಹೊತ್ತಿಸಿ, ನಾಲ್ಕುದೊಡ್ಡ ಕಟ್ಟಿಗೆಗಳನ್ನು ಸೇರಿಸಿದೆ. ನಂತರ ರೊಟ್ಟಿ ಹೆಂಚನ್ನು ತೆಗೆದುಕೊಂಡು ಸುಡಲಾರಂಭಿಸಿದೆ. ಹೆಂಚಿನ ಮೇಲೆ ಹಾಕಿ ಎರಡೂ ಬದಿ ಸುಡುತ್ತಿದ್ದಂತೆ, ರೊಟ್ಟಿಗಳು ದಪ್ಪವಿದ್ದುದರಿಂದ ಮುದ್ದೆ ಬೇಯಿಸುವಾಗ ಉಗಿಯಾಡುವಂತೆ ಹೊಗೆ ಬರಲಾರಂಭಿಸಿತು.
ಏನಾದರಾಗಲಿ ಎಂದು ರೊಟ್ಟಿ ಮಾಡುವ ಕಾರ್ಯಮುಗಿಸಿದೆ. ರೊಟ್ಟಿಗೆ ಸಾಂಬಾರು ಅಥವಾ ಚಟ್ನಿ ಏನೂ ಇಲ್ಲದಿದ್ದರಿಂದ ಮತ್ತು ಮಾಡಿಕೊಳ್ಳುವ ಜ್ಞಾನವೂ ಇಲ್ಲದಿದ್ದರಿಂದ ಖಾಲಿ ರೊಟ್ಟಿಯನ್ನೇ ತಿನ್ನಲು ನಿರ್ಧರಿಸಿ ತಟ್ಟೆಯಲ್ಲಿ ಹಾಕಿಕೊಂಡು ಮುರಿದರೆ ಕಡುಬೇ ಕೈಗೆ ಬಂದಂತಾಯಿತು.
ರೊಟ್ಟಿಯ ಒಳಗೆ ಹಿಟ್ಟು ಮುದ್ದೆಯಂತೆ ಬಿಸಿಯಾಗಿತ್ತು.ರೊಟ್ಟಿಯನ್ನು ಬಾಯಿಗಿಟ್ಟರೆ ಹಸಿ–ಬಿಸಿ. ಕಲೆಸಿದ ಹಿಟ್ಟಿಗೆ ಉಪ್ಪು ಹಾಕಬೇಕೆಂಬ ಸಾಮಾನ್ಯ ಜ್ಞಾನವೂ ಇರಲಿಲ್ಲವಾದ್ದರಿಂದ ರೊಟ್ಟಿ ಸಪ್ಪೆಸಪ್ಪೆಯಾಗಿ ಬಾಯೆಲ್ಲಾ ಕೆಟ್ಟಂತಾಗಿ ಹೋಯಿತು.
ಇನ್ನು ಈ ಎರಡೂ ರೊಟ್ಟಿಗಳನ್ನು ತಿನ್ನಲು ಸಾಧ್ಯವೇ ಇಲ್ಲವೆಂದು ಗೊತ್ತಾಗಿ ನಾ ಹಾಕಿದ ಶ್ರಮ ನಷ್ಟವಾಗಬಾರದೆಂದು ಕಡೇ ಪಕ್ಷ ನಾಯಿಗಾದರೂ ಹಾಕಿ ಹೊಟ್ಟೆ ತುಂಬಿಸೋಣ ಅಂದುಕೊಂಡು ಹೊರಗೆ ಹೋಗಿʼಕುರ್ರ್ಯೋಕುರ್ರ್ಯೋʼಎಂದು ಕರೆದೆ. ಓಡೋಡಿ ಬಂದ ನನ್ನ ನಾಯಿ ಬಾಲ ಅಲ್ಲಾಡಿಸುತ್ತಾ ತಲೆ ಮೇಲೆತ್ತಿ ನನ್ನನ್ನೇ ನೋಡುತಾನಿಂತಿತು.
ನಾನು “ನನ್ ಮುಖ ಏನ್ನೋಡುತೀಯ?, ಬಿಸಿಯಾದ ರೊಟ್ಟಿಗಳು ನಿನಗಾಗಿ ಕಾಯ್ತಾ ಇದಾವೆ ತಿನ್ನು” ಅಂತ ಕೆಳಗೆ ಕಲ್ಲಿನ ಮೇಲೆ ಹಾಕಿದ್ದ ರೊಟ್ಟಿಗಳನ್ನು ತೋರಿಸಿದೆ. ಆ ನನ್ನ ನಾಯಿ ಒಂದ್ ಸಾರಿ ತನ್ನ ಮೂಗಿನ ಎರಡೂ ಹೊಳ್ಳೆಗಳನ್ನುಅಗಲಿಸಿ ಎರಡು ಬಾರಿ ಮೂಸಿ, ತಲೆಕೊಡವಿ, ನನ್ನನ್ನೊಮ್ಮೆ ತಿರಸ್ಕಾರ ಭಾವದಿಂದ “ಏನೋ ಮೃಷ್ಟಾನ್ನ ಇಡ್ತಿತಿದ್ದಾನೆ ಅನ್ನೋ ರೀತಿ ಕರೆದ, ಇಲ್ಲಿ ನೋಡಿದರೆ ಮೂಸೋಕು ಯೋಗ್ಯತೆ ಇಲ್ದಂತ ಅಡುಗೆ ಬೇಯ್ಸಿ ಹಾಕಿದಾನೆ” ಅನ್ನೋ ರೀತಿ ನನ್ನನ್ನ ದುರುಗುಟ್ಟಿ ನೋಡಿ ಬಾಲ ಕೆಳಗಾಕಿ ಹಿಂತಿರುಗಿತು.
ನಂಗಂತೂ ತುಂಬಾ ಅವಮಾನವಾದಂತಾಗಿ, ಯಾಕಾದರೂ ಈ ರೊಟ್ಟಿ ಮಾಡುವದು ಸ್ಸಾಹಸಕ್ಕೆ ಕೈ ಹಾಕಿದೆನೋ ಎನಿಸಿತು. ಏಕೆಂದರೆ, ಆ ನಾಯಿ ಬಾಲ ಮುದುರಿಕೊಂಡು ಹೋಗುವಾಗ ಸುಮ್ಮನೆ ಹೋಗಲಿಲ್ಲ. ಮತ್ತೊಮ್ಮೆ ಹಿಂತಿರುಗಿ ನನ್ನನ್ನ ಮೇಲೆ ಕೆಳಗೆ ನೋಡಿ ಭಾರವಾದ ಉಸಿರು ಬಿಟ್ಟುಹೋಯಿತು.
ನಂಗೆ ಹೊಟ್ಟೆ ಹಸಿದದ್ದೊಂದು. ರೊಟ್ಟಿ ಕೆಟ್ಟೋಗಿದ್ದುಇನ್ನೊಂದು, ನಾಯಿ ಅವಮಾನ ಮಾಡಿದ್ದು ಮತ್ತೊಂದು. ಮನಸ್ಸಿಗೆ ತುಂಬಾ ಘಾಸಿಯಾಗಿ ನಾಯಿಯನ್ನು ಹೊಡೆದೋಡಿಸಲು ಕಲ್ಲುಗಳನ್ನು ಹುಡುಕುವವನಂತೆ ತಡಕಾಡಿದೆ. ನನ್ನಆರ್ಭಟ ನೋಡಿದ ನಾಯಿ ಅಲ್ಲಿಂದ ಕಾಲ್ಕಿತ್ತಿತು. “ಇನ್ನೊಂದ್ಸಾರಿ ನಿನ್ ಬಾಲ ಅಲ್ಲಾಡಿಸ್ತಾ, ನನ್ ಹತ್ರಬಾ ಅವಾಗ ತೋರಿಸ್ತೀನಿ” ಅಂತ ಬೈದು ಸಮಾಧಾನ ಮಾಡ್ಕೊಂಡೆ.
ನನಗೆ ರೊಟ್ಟಿ ಮಾಡಿ ತಪ್ಪು ಮಾಡಿದ್ದಕ್ಕಿಂತಲೂ ನಾಯಿ ಕರೆದು ಘೋರ ಅಪರಾಧ ಮಾಡಿ ಬಿಟ್ನೇನೋ ಅನಿಸಿತು. ಕೊನೆಗೆ ಮಾಡಿದ ಎರಡೂ ರೊಟ್ಟಿಗಳನ್ನು (ಕಡುಬುಗಳೆಂದರೂ ತಪ್ಪಾಗಲಾರದು) ಮುಸುರೆಗೆ ಹಾಕಿ, ಏನೂ ನಡೆದಿಲ್ಲವೆಂಬಂತೆ ಎಲ್ಲವನ್ನೂ ತೊಳೆದು ನೀಟಾಗಿಟ್ಟೆ. ಸಂಜೆ ನನ್ನಮ್ಮ ಮತ್ತುಅಕ್ಕಂದಿರು ರಾತ್ರಿ ಊಟಕ್ಕೆ ಅಡುಗೆ ಮಾಡಲು ತಯಾರು ಮಾಡಿಕೊಳ್ಳುವಾಗ ಹಿಟ್ಟಿನ ಬಾಕ್ಸ್ನೋಡಿ “ಹಿಟ್ಟು ಯಾಕೋ ಕಡಿಮೆಯಾಗಿದೆಯಲ್ಲಾ?” ಎಂದು ಪ್ರಶ್ನಿಸುವಂತೆ ನನ್ನತ್ತ ತಿರುಗಿದರು.
ನಾನು ಏನೂ ಗೊತ್ತಿಲ್ಲದವನಂತೆ“ ಅಯ್ಯೋ ಹೊರಗೆ ಬೆಕ್ಕು ಕೋಳೀನಾ ಹಿಡಿತೈತೆ” ಅಂತ ಓಡಿದೆ. ಅದೇಕೊನೆ ಮತ್ತೆಂದೂ ರೊಟ್ಟಿ ಅಥವಾ ಚಪಾತಿ ಮಾಡುವ ದುಸ್ಸಾಹಸಕ್ಕೆ ಕೈಹಾಕಲಿಲ್ಲ.
ಶಂಕರ್ ಕುಮ್ತಿ. ಸರ್ಕಾರಿ ಪ್ರೌಢಶಾಲೆ
ಗಂಗನಕಟ್ಟೆ, ದಾವಣಗೆರೆ (ದ.ವ)