ಧ್ಯಾನ……..ಇಂತಹದೊಂದು ವಿಷಮ ಸಾಮಾಜಿಕ ವ್ಯವಸ್ಥೆಗೆ ನಾವು ಬಾಧ್ಯಸ್ಥರಲ್ಲವೆಂದು ದೂರದ ಊರುಗಳಲ್ಲಿ, ನಾವು ಏನೂ ಆಗಿಯೇ ಇಲ್ಲವೆಂದು ತಣ್ಣಗೆ ನಮ್ಮ ನಮ್ಮ ಪಡಿಪಾಟಲುಗಳಲ್ಲಿ ಮುಳುಗಿ ಹೋಗಿರುತ್ತೇವೆ.
ಕೆಲವೊಂದು ಘಟನೆಗಳು ಕಣ್ಣಿಗೆ ಕಾಣದೆ ಹೋಗಿಬಿಡುತ್ತವೆ.ಮಧ್ಯಮ ವರ್ಗದ ಬಹುಪಾಲು ಮತ್ತು ಕೆಳಮಧ್ಯಮ ವರ್ಗಗಳ ಕುಟುಂಬಗಳಿಗೆ ಟೀವಿಯಲ್ಲಿ ತೋರಿಸುವ ಜಗತ್ತೇ ಸತ್ಯವಾಗಿಬಿಡುತ್ತದೆ. ಈ ಹೊತ್ತು ಕೂಡ ಟೀವಿ ಸೀರಿಯಲ್ಲುಗಳಲ್ಲಿ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಒಂದೇ ಒಂದು ಕುಟುಂಬದ ಕುರಿತು ವರದಿಗಳಿರುವುದಿಲ್ಲ. ಧಾರವಾಹಿಗಳು ನಿರ್ಮಾಣವಾಗುತ್ತಿಲ್ಲ. ಅಂದರೆ ಕಣ್ಣಿಗೆ ಕಾಣದ ಅನೇಕ ಸಂಕಟಗಳು ನಮ್ಮೊಡನಿದ್ದೂ ಪ್ರಜ್ಞಾವಂತ ಜನ ಬದುಕುವುದಿದೆಯಲ್ಲ, ಅದು ಅತ್ಯಂತ ಅಪಾಯಕಾರಿಯಾದುದು ಸೊಂಡೂರು ಸುತ್ತಲಿನ ಹಳ್ಳಿಗಳಲ್ಲಿ ನರಮೇಧಗಳು ನಡೆದಿಲ್ಲ. ರಕ್ತ ಹರಿದಿಲ್ಲ ಎನ್ನುವುದೂ ನಿಜವೆ. ಭಯೋತ್ಪಾದನೆಯಂತಹ ಸಮಸ್ಯೆಯೂ ಇಲ್ಲಿಲ್ಲ. ಕರ್ನಾಟಕದ ಕಾಶ್ಮೀರ ವೆಂದು ಬಿಂಬಿತವಾಗಿದ್ದ ಈ ಸುಂದರಪುರದ ಗರ್ಭಗಳಲ್ಲಿ ಅದೆಷ್ಟು ತಲ್ಲಣಗಳು ಅಡಗಿವೆ ಎಂಬುದಕ್ಕೆ ಈ ಕೆಳಗಿನ ಘಟನೆಯೆ ಸಾಕ್ಷಿ.
ಯಶವಂತನಗರ…!
ಹೀಗೆ ಹೇಳಿದರೆ ಜನ ,ಓ…ಕಣಿವೆ ಹಳ್ಳಿ ಎಂದು ಉಧ್ಘರಿಸುತ್ತಾರೆ. ಊರಿನ ಹೆಸರುಗಳಿಗೆ ಘೋರ್ಪಡೆ ಮಹಾರಾಜರು ತಮ್ಮ ಕುಟುಂಬ ಸದಸ್ಯರ ಹೆಸರುಗಳನ್ನು ಒಂದೊಂದು ಹಳ್ಳಿಗೆ ಹೆಸರಿಟ್ಟರು. ಭುಜಂಗ ರಾವ್ ಘೋರ್ಪಡೆ ಹೆಸರಿನ ಭುಜಂಗ ನಗರವನ್ನು ಜನ ಇಂದಿಗೂ ಕರೆಯೋದು ಮಾತ್ರ ಹೊಸಳ್ಳಿ ಅಂತಲೇ.ಅಂತದೇ ಪ್ರಕೃತಿಯ ಬೆಟ್ಟಗಳ ತಪ್ಪಲಲ್ಲಿರುವ ಕಣಿವೆಹಳ್ಳಿಗೆ ಯಶವಂತರಾವ್ ಘೋರ್ಪಡೆ ರಾಜರ ನೆನಪಿಗೆ, ಯಶವಂತನಗರ ಅಂತ ಹೆಸರಿಟ್ಟರೂ ಜನ “ಕಣಿವೆಳ್ಳಿಗೆ ಎಲ್ಡು ತಿಕೇಟು ಕೊಡಪ…”ಅಂತಲೇ ಕೇಳೋದು.ಆ ಮಟ್ಟಿಗೆ ಜನ ತಮ್ಮ ಪ್ರತಿರೋಧ ದಾಖಲಿಸುತ್ತಿದ್ದರು.
ಧ್ಯಾನ ಮಾಡೋಕೆ ಆಗಲಿಲ್ಲ ನೋಡ್ರೀ…
ಈ ಪುಟ್ಟ ಊರಿನ ಪ್ರವೇಶದ್ವಾರದಲ್ಲಿಯೇ ಆತ ನಮಗೆ ಎದುರಾದ.” ಇಷ್ಟು ದಿನ, ಯುದ್ಧಭೂಮಿಯಲ್ಲಿ ಇದ್ವಿರಪ, ಹೀಗಾಗಿ ಏನೂ ಮಾಡಲಾಗಲಿಲ್ಲ”ಎಂದ. ಇದ್ದಕ್ಕಿದ್ದಂತೆ ಎದುರಾದ ಈ ಕುರುಚಲು ಗಡ್ಡದವನು ನೀಟಾಗಿಯೇ ಇದ್ದ. ಪ್ಯಾಂಟು ಅಂಗಿಯ ಇಸ್ತ್ರಿ ಕೂಡ ಸರಿಯಾಗಿಯೆ ಇತ್ತು. ಕ್ರಾಪು ತೆಗೆದ ಅವನ ಕೂದಲೂ ಸಹ ಅವನ ಬಾಚುವಿಕೆಯ ಶಿಸ್ತನ್ನು ಸಾರಿ ಹೇಳುತ್ತಿತ್ತು. ” ಮೈನಿಂಗ್ ಕೆಲಸದ ಧಾವಂತದೊಳಗೆ ಧ್ಯಾನ ಮಾಡೋಕೆ ಆಗಲಿಲ್ಲ ನೋಡ್ರೀ…” ನಕ್ಕು ಮುಂದುವರೆಸಿದ.
ನಾನು ಮತ್ತು ನನ್ನ ಗೆಳೆಯ ನಾರಾಯಣ, ಆತ ಏನು ಹೇಳುತ್ತಿದ್ದಾನೆ ಎಂಬುದನ್ನು ಅರಿಯಲು ಸ್ವಲ್ಪ ಹೊತ್ತು ಬೇಕಾಯಿತು. ನಾವು ಅವನನ್ನೆ ನೋಡುತ್ತಿದ್ದೆವು. ನಾನು ಆತನನ್ನೊಮ್ಮೆ ಗೆಳೆಯ ನಾರಾಯಣನ ಮುಖವನ್ನೊಮ್ಮೆ ನೋಡಿದೆ. ಗೆಳೆಯ ನಾರಾಯಣ ನನ್ನೊಟ್ಟಿಗೆ ಎರಡು ದಶಕಗಳ ಹಿಂದೆ ಕಾಲೇಜಿನಲ್ಲಿ ಕೆಲಸ ಮಾಡಿದವರು.ಇದೇ ಸೊಂಡೂರಿನ ಪರಿಸರದಲ್ಲಿಯೆ ಹುಟ್ಟಿ ಬೆಳೆದವರು.
ಕಾಳಗದೊಳಗೆ ಧ್ಯಾನಕ್ಕೆ ಸಮಯವೆಲ್ಲಿರುತ್ತದೆ ಅಲ್ಲವೇ..?”
“ಇರಲಿ…ಇರಲಿ…ನಡೆಯಪ್ಪಾ..”ಎಂದು ಸಮಾಧಾನದಿಂದ ಸಾಗಹಾಕಲು ನೋಡಿದ. ಆದರೆ, ಆ ಯುವಕ ಏನೋ ಹೇಳಬೇಕೆಂದುಕೊಂಡೋ, ಏನೋ ತನ್ನ ಮಾತನ್ನು ಕೇಳದೆ, ಮುಂದಕ್ಕೆ ಹೆಜ್ಜೆಯಿಡಕೂಡದು ಎಂಬಂತೆ ಮಾತು ಮುಂದುವರೆಸಿದ. “ಕಾಳಗದೊಳಗೆ ಧ್ಯಾನಕ್ಕೆ ಸಮಯವೆಲ್ಲಿರುತ್ತದೆ ಅಲ್ಲವೇ..?” ನಮ್ಮನ್ನೆ ಕೇಳಿದ. ಸಾಹಿತ್ಯದ ಗೀಳಿನ ಆ ಯುವಕ ಹೀಗೆ ಮಾತಾಡುತ್ತಿರಬಹುದು ಎಂದು ನಾವು ಭಾವಿಸಿದೆವು.
ಇಲ್ಲಿ…..ಖುಷಿ ಚಿಕ್ಕಮಕ್ಕಳ ಹಾಕಿದವನೆ ಸಿಸ್ತಾಗಿ ಕಣ್ಣುಮುಚ್ಚಿ ಧ್ಯಾನಕ್ಕೆ ಕುಂತುಬಿಟ್ಟ! ಅಷ್ಟೊತ್ತಿಗೆ ಊರಿನ ಕೆಲ ಜನರು ಬಂದರು. ಆತ ಕೂಡ ಒಬ್ಬ ಗಣಿ ಮೇಸ್ತ್ರಿಯಾಗಿದ್ದನೆಂದು, ಆಗ ಭಾರಿ ಭಾರಿ ದುಡಿದನೆಂದೂ,” ಅಗೋ…ಅಲ್ಲಿ ಕಾಣ್ತೈತಲ್ಲ ಸರ್ , ಅದೇ ಆತನ ಮನೆ ” ಎಂದು ತೋರಿಸಿದರು.
ಗಣಿಗಾರಿಕೆ ಬಂದ್ ಆದಾಗಿನಿಂದಲೂ ಹೀಗೆ ಸ್ವಲ್ಪ ಮೈಂಡು ಲೂಜು ಆಗಿದೆ…..ಯಾರಿಗೂ ತೊಂದರೆ ಕೊಡುವ ಮನುಷ್ಯ ಅಲ್ಲವೆಂದೂ ಸರ್ಟಿಫಿಕೇಟ್ ಕೂಡ ಕೊಟ್ಟರು. ಅಗೋಚರ ಹಿಂಸೆ ಎಂದರೆ ಇದೆ ..ಅಲ್ಲವಾ…?
ಬಿ.ಶ್ರೀನಿವಾಸ