ಮಕ್ಕಳ ಮುಂದೆ
ಅಪ್ಪ ಅಳಬಾರದು
ಅಪ್ಪನ ಕಣ್ಮುಂದೆ
ಮಕ್ಕಳು ಸಾಯಬಾರದು
ಪ್ರಭುಗಳ ಮುಂದೆ
ಪ್ರಜೆಗಳು ನರಳಬಾರದು.
ಕೈಯ್ಯ ಕಸುಬುಗಳನ್ನು ಕಿತ್ತುಕೊಂಡು ಬರಿಗೈದಾಸರನ್ನಾಗಿಸಿ ಬೀದಿಗೆ ಬಿಟ್ಟ ಗಣಿಗಳಿಗೆ , ಧಣಿಗಳಿಗೆ ಕರುಳೆಂಬುದಿಲ್ಲ. ಜನರ ಬದುಕಿನ ಯಾವ ದಾರಿಗಳೂ ಸುಗಮವಾಗಿಲ್ಲ. ಕಳೇಬರಗಳ ಮುಂದೆ ಕುಂತವರ ಮೌನಕ್ಕೆ,ಕಣ್ಣೀರಿಗೆ ಕಾರಣಗಳನ್ನು ಕೇಳಬಾರದಂತೆ. ಇಷ್ಟುದಿನ ಮಣ್ಣಿನ ಮೇಲೆಯೇ ಓಡಾಡುತ್ತಿದ್ದ ರೈತನ ಪಾದಗಳು, ಇದೀಗ ಆತನ ಎದೆಯ ಮೇಲೆ ಅದೇ ಮಣ್ಣಿನ ಮೃದು ಪಾದಗಳಿವೆ.
ಗುಡ್ಡಗಳಲ್ಲಿ ಯಾರೋ ಗೀರಿದಂತೆ ತೋರುತ್ತಿದ್ದ ಲಾರಿ ದಾರಿಗಳು. ಮಿಣುಕು ಹುಳುವಿನ ಬೆಳಕಿನಂತೆ ತೋರುವ ದೂರದ ಲಾರಿಯ ಲೈಟುಗಳು ಮಿನುಗುವಾಗ ಸುತ್ತಲಿನ ಹಳ್ಳಿಯ ಮುದುಕರು ಆ ಲಾರಿ ಓಡಿಸುವವನು ತಮ್ಮ ಮಗ, ಮೊಮ್ಮಗನೇ ಇರಬೇಕೆಂದು ತರ್ಕಿಸುತ್ತ ಗಂಭೀರವಾಗಿ ಬೀಡಿಯ ಹೊಗೆಯನ್ನು ಬಿಡುತ್ತಿದ್ದರು.
ಮಣ್ಣು ಕಲ್ಲು,ಧೂಳಿಗೂ ರೊಕ್ಕದ ಮತ್ತೇರಿದಾಗ ಸೊಂಡೂರಿನ ಬೀದಿಗಳಲ್ಲಿ ಎತ್ತು, ಆಕಳು, ಹೊಲ ಗದ್ದೆ, ಬೆಳೆಗಳೆನ್ನುವ ಪದಗಳೆಲ್ಲ ಯಾವುದೋ ಟಿಪ್ಪರುಗಳ ಮಣ್ಣಿನ ಜೊತೆ ಸೇರಿ ಮಾಯವಾಗಿ ಹೋದವು.
ಸುರಿಯುತ್ತಲೇ ಇದೆ ಮತ್ತೆ ಮಳೆ. ಮಳೆಯ ನೀರು ಇಳೆಗೆ ಸೇರುವ ಮುನ್ನವೇ ಮಗಳಿಗೆ ಈ ಬಾರಿಯ ಸುಗ್ಗಿಗೆ ಹೊಸ ಸೀರೆ ಕೊಡಿಸುವ ಕನಸು ಕಾಣುವ ರೈತ , ತನ್ನ ನಡುಗುವ ಕೈಕಾಲುಗಳ ಕಂಡು ಮತ್ತಷ್ಟು ನಿಸ್ತೇಜಿತನಂತೆ ಕಾಣುವನು. ಇಂಥಾ ಅದೆಷ್ಟೋ ಚಿತ್ರಗಳು ಊರಿನ ಹೆಜ್ಜೆ ಹೆಜ್ಜೆಗೂ ಸಿಗುತ್ತವೆ.
ಒಂದು ಕಾಲದಲ್ಲಿ ಈ ಗಣಿಗಾರಿಕೆಯ ಮಾಮೂಲಿ ಮೇಸ್ತ್ರಿಗಳೂ ಲಕ್ಷ ಲಕ್ಷ ದುಡ್ಡು ಎಣಿಸುತ್ತಿದ್ದರು. ಆಗೆಲ್ಲ ರಾತ್ರಿ ಹೊತ್ತು ಪಕ್ಕದ ಕೂಡ್ಲಿಗಿಗೆ ಬಂದು ನಾಟಕ ಕಲಾವಿದೆಯರ ಮನೆಗಳಲ್ಲಿ ರಾತ್ರಿ ಕಳೆಯುತ್ತಿದ್ದರು. ಕೆಲವು ಮಧ್ಯಮ ವರ್ಗದ ಹೆಣ್ಣು ಮಕ್ಕಳು ದೇವದಾಸಿ ಪದ್ದತಿಯ ಹೆಸರಿನಲ್ಲಿ ದೇಹಮಾರಿ ಬದುಕುವ ಮತ್ತು ಹೀಗೆ ಬರುವ ಗಂಡಸರ ಆತಿಥ್ಯಕ್ಕೆ ಊರು ಹೆಸರಾಗಿತ್ತು. ಈ ಊರಿನಲ್ಲಿ ಎಷ್ಟೋ ಕುಟುಂಬಗಳ ಹಸಿವನ್ನು ನೀಗಿಸುವವರೆಲ್ಲ ಬಹುತೇಕರು ಹೆಣ್ಮಕ್ಕಳೇ ಆಗಿದ್ದರು.
ಹೊಸಪೇಟೆ, ಸೊಂಡೂರುಗಳಿಂದ ಗಣಿಧಣಿಗಳು, ಮೇಸ್ತ್ರಿಗಳು, ಕೆಲವೊಮ್ಮೆ ಕೆಲವು ಕೂಲಿಕಾರರೂ ಅವರವರ ಶಕ್ತ್ಯಾನುಸಾರ ಬಂದು ಹೋಗುತ್ತಿದ್ದರು. ಅಕ್ರಮ ಗಣಿಗಾರಿಕೆ ಬಯಲಿಗೆ ಬಂದು, ನಿಂತು ಹೋದಾಗಲೂ ಇವರ ಹೊಟ್ಟೆಗಳಿಗೆ ತಂಗಲು ಬಟ್ಟೆಯೆ ಗತಿಯಾಯಿತು. ಬೇರೆ ಯಾವುದೇ ಉದ್ಯೋಗಗಳೇ ಇಲ್ಲದ ಊರಿನಲ್ಲಿ ಇಂಥವರೆಲ್ಲ ಕಂಗಾಲಾದರು.
ಒಂದು ಬದಿಯಲಿ
ಅಪ್ಪನ ಹುಡುಕುತ್ತಾ ನಿಂತ ಹುಡುಗ
ಇನ್ನೊಂದು ಬದಿಗೆ
ಗಿರಾಕಿ ಹುಡುಕುತ್ತಾ ನಿಂತ ಅವ್ವ!
ಇಂಥಾ ಚಿತ್ರಗಳು ನಮ್ಮ ಕಣ್ಣಿಗೆ ಕಾಣಿಸುವ ಸರ್ವೇಸಾಮಾನ್ಯವಾಗಿ ಚಿತ್ರಗಳಾಗಿ ಹೋದವು.
ಬಿ.ಶ್ರೀನಿವಾಸ