Kannada News | Sanduru Stories | Dinamaana.com | 07-06-2024
ಒಂದು ಕಾಲದ ಸುವರ್ಣಯುಗ (Sanduru Stories)
ಹೊಸಪೇಟೆಯ ಬಜಾರುಗಳಲ್ಲಿ ನಾವು ನಡೆಯುತ್ತಿದ್ದೆವು. ಸಂಡೂರು , ತೋರಣಗಲ್ಲಿನ ಜನರೆಲ್ಲ ಸಂಜೆ ಟೀ ಕುಡಿಯಲೆಂದೇ ಶಾನುಭಾಗ್ ಹೋಟೆಲಿಗೆ ಬಂದು ಹೋಗುತ್ತಿದ್ದ ಕಾರ್ಮಿಕರ ಒಂದು ಕಾಲದ ಸುವರ್ಣಯುಗವನ್ನು ಆತ ಮೆಲುಕು ಹಾಕುತ್ತಿದ್ದ.
ಈಗ ಫುಟ್ ಪಾತಿನಲ್ಲಿ ಚಾ ಮಾರುವವರು (Sanduru Stories)
ಈಗ ನೋಡಿ, ಅದೇ ಊರಿನ ಫುಟ್ ಪಾತಿನಲ್ಲಿ ಚಾ ಮಾರುವವರು, ಕೂಲಿಂಗ್ ಗ್ಲಾಸು, ಜ್ಯೂಸಿನಂಗಡಿ, ಪುಟ್ಟದಾದ ಜಾಗದಲ್ಲಿಟ್ಟ ಪಾನ್ ಷಾಪುಗಳನು ಇಟ್ಟವರೆಲ್ಲ ಒಂದು ಕಾಲದ ಟಿಪ್ಪರಿನ ಓನರುಗಳೆ. ಕೆಲವರು ಅದ್ಬುತ ಟೆಕ್ನಿಷಿಯನ್ನುಗಳೂ, ಮೆಕ್ಯಾನಿಕ್ ಗಳು ಇದ್ದರೆಂದು ಹೇಳುತ್ತಲೇ ಇದ್ದ.ಈಗಲೂ ಕೆಲ ಧಣಿಗಳು ಇಂತಹವರನ್ನು ಕರೆಸಿ ದೊಡ್ಡ ಮೆಕಾನಿಕ್ ಕೆಲಸಗಳನ್ನು ಮಾಡಲು ಹೇಳುತ್ತಾರೆಂದು ಹೇಳಿದ.
ಹ್ಞಾ..ಹೇಳುವುದನ್ನು ಮರೆತೆ. ನನ್ನೊಂದಿಗೆ ಬರುತ್ತಿರುವ ಈತನೂ ಒಂದು ಕಾಲದ ಓನರ್ ಆಗಿದ್ದವನು. ಈಗ ಅದೆಲ್ಲಾ ನೆನಪು ಮಾಡಿಕೊಳ್ಳುವುದು ಬೇಡಬಿಡಿ ಎನ್ನುತ್ತಾನೆ. ಕಾಲಹರಣಕ್ಕಾಗಿ , ಹೊಟ್ಟೆಪಾಡಿಗಾಗಿ ನಮ್ಮಂತವರಿಗೆ ಮಾರ್ಗದರ್ಶಕನಾಗಿ ಚಿಲ್ಲರೆ ಕಾಸು ಮಾಡಿಕೊಂಡು ದಿನ ಕಳೆಯುತ್ತಾನೆ.
ಧಣಿಗಳು ಬಿಡಬೇಕಲ್ಲ (Sanduru Stories)
ಕಾರ್ಮಿಕರ ಒಕ್ಕೂಟಗಳು ಇರಲಿಲ್ಲವೇ..? ಆತನನ್ನು ಕೇಳಿದೆ. ಇದಾವೆ…..ಅದೋ ನೋಡಿ,ಅಲ್ಲಿ ಕಾಣಿಸುತ್ತಿದೆಯಲ್ಲ ಸಾ..ಆಫೀಸು, ಅದು ಎಡಪಕ್ಷವೊಂದರದು. ಕೂಲಿಕಾರ್ಮಿಕರ, ಬಡವರ ಪರ ಸದಾ ಧ್ವನಿಯೆತ್ತುತ್ತಿತ್ತು. ಬಂಡವಾಳಶಾಹಿ, ಅಧಿಕಾರಶಾಹಿಯಿಂದ ದೂರವೇ ಉಳಿದಿತ್ತು.ಆದರೆ ಈ…ಗ…ಹಂಗೇನಿಲ್ಲ ಸಾ. ಧಣಿಗಳು ಬಿಡಬೇಕಲ್ಲ ಎಂದ. “ಅದೇ..ಅಲ್ಲಿ ಕಟ್ಟೆ ಕಾಣ್ತೈತಲ್ಲ ಸಾರ್ ಅದೇ ನೋಡಿ” ಸುಮಾರು ಸರ್ತಿ ಅಲ್ಲಿ ಮೀಟಿಂಗು ಮಾಡಿರುವುದಾಗಿಯೂ ಹೇಳಿದ.
ಆ ಧ್ವಜ ಕಟ್ಟೆ ಕೂಡ ಉಕ್ಕು ಕಾರಖಾನೆ ಪ್ರಾಯೋಜಕತ್ವ (Sanduru Stories)
ಆ ಕಟ್ಟೆಯನ್ನು ಗಮನಿಸಿದೆ. ಆ ಧ್ವಜ ಕಟ್ಟೆ ಕೂಡ ಉಕ್ಕು ಕಾರಖಾನೆಯೊಂದರ ಪ್ರಾಯೋಜಕತ್ವ ಪಡೆದಿತ್ತು ! “ಭಾಳ ಬೇಸು ಕಟ್ಟಿದ್ರು, ಬಸ್ಟ್ಯಾಂಡು ಗೋರಮೆಂಟಿನವರಾದರೆ ಈಟಗೊಂದು ಎಲ್ಲಿ ಕಟ್ಟುತ್ತಿದ್ದರು ಸಾರ್.. ಉಕ್ಕು ಕಾರ್ಖಾನೆಯವರು ಆದುದಕ್ಕೆ ಇಷ್ಟು ಚೆಂದ ಕಟ್ಟ್ಯಾರ,…”ಎಂದ. ಸರಕಾರಗಳು ಖಾಸಗಿಯವರ ಪಾದ ಪದ್ಮಗಳಿಗೆ ಎರಗುವುದು ಎಂದರೆ..ಇದೇ ಇರಬೇಕು.
Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-13 ನೆಲ ಮಾರಾಟ
ಗಿಡಗಳ ಟ್ರೀಗಾರ್ಡುಗಳ ಮೇಲೂ ಕಂಪೆನಿ ಹೆಸರು (Sanduru Stories)
ರಸ್ತೆ ಬದಿ ಸಾಲು ಸಾಲು ಗಿಡಗಳ ಟ್ರೀಗಾರ್ಡುಗಳ ಮೇಲೂ ಕಂಪೆನಿಯೊಂದರ ಹೆಸರು. ಸ್ಟಾಲುಗಳನ್ನು ಅವರೇ ಕಟ್ಟಿಸಿಕೊಡುತ್ತಾರಂತೆ…ಇನ್ನು ಏನೇನೋ ಹೇಳುತ್ತಲೇ ಹೋದ. ಸರ್ಕಲ್ಲಿನಲಿ ನಿಂತ ಗಾಂಧಿಗೆ ಎಂದೂ ಬಾಡದ ಬಹುದೊಡ್ಡ ಹಾರ ಹಾಕಲಾಗಿತ್ತು.ಧೂಳಿನಿಂದಾಗಿ ಅದು ಯಾವ ಬಣ್ಣದ್ದೆಂದು ಹೇಳುವ ಹಾಗಿರಲಿಲ್ಲ.
ಬಿ.ಶ್ರೀನಿವಾಸ