Kannada News | Sanduru Stories | Dinamaana.com | 19-06-2024
ಕಳ್ಳು ಕಿವುಚಿಕೊಂಡು ಬಂದಂಗಾಗ್ತೈತೆ (Sanduru Stories)
ಸುಮಾರು ಅರವತ್ತು ವರ್ಷಕ್ಕೂ ಕಮ್ಮಿಯೇ ವಯಸ್ಸಾಗಿದ್ದರೂ ಎಂಭತ್ತರ ಅಜ್ಜನಂತೆ ಕಾಣುವ ಕೃಶಕಾಯದ ಆ ವ್ಯಕ್ತಿಯ ಹೆಸರು ಕೊಮಾರಪ್ಪ. ಈತ ಚಿಕ್ಕವಯಸ್ಸಿನವನಿರುವಾಗಿಂದಲೂ ಮೈನಿಂಗ್ ಇತ್ತಾದರೂ ಇವನ ತಂದೆ ತಾಯಿಗಳು ಮಾತ್ರ ಬೇಸಾಯವನ್ನೆ ನೆಚ್ಚಿಕೊಂಡು ಬದುಕಿದವರು.
ಎರಡು ಎಕರೆ ಜಮೀನು ಇತ್ತಂತೆ.ಈಗಲೂ ಇದೆಯಂತೆ.ಆದರೆ ನೋಡಾಕ್ ಹೋಗ್ಬೇಡಿ ಸಾರ್….ಕಳ್ಳು ಕಿವುಚಿಕೊಂಡು ಬಂದಂಗಾಗ್ತೈತೆ ಎಂದ. ಅಪ್ಪ ಅವ್ವನಂತೆ ತಾನೂ ಕೂಡ ಬೇರೆಯವರ ಹೊಲಗಳಲ್ಲಿ ವ್ಯವಸಾಯದ ಕೂಲಿಗಳಾಗಿ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದರು.
ಕುಮಾರಸ್ವಾಮಿ ಬೆಟ್ಟದ ಕಡಿಗೆ ಕೈ ಮುಗಿದೇ ಮುಂದಿನ ಕೆಲಸ (Sanduru Stories)
ರಂಟಿ ಹೊಡಿಯೋದು ಕಲ್ತಮ್ಯಾಲಂತೂ ನಮ್ಮಪ್ಪ,ಎರಡೊಪ್ಪತ್ತಿನ ಹೊಟ್ಟಿ ಕೂಳಿಗೆ ಏನೂ ದೋಖಾ ಇಲ್ಲದಂಗ ಮಾಡಿದೆಪ್ಪಾ ಕುಮಾರಸ್ವಾಮಿ ಎಂದು ಬೆಟ್ಟದ ಕಡಿಗೆ ಕೈ ಮುಗಿದೇ ಮುಂದಿನ ಕೆಲಸಕ್ಕೆ ಹೋಗುತ್ತಿದ್ದ. ದುಡಿದು, ದಣಿದುಕೊಂಡು ಬಂದು ಕುಂತು ಉಣ್ಣುವಾಗ ನೋಡ್ಬೇಕಿತ್ತು ಸಾ…..ನಮ್ಮಪ್ಪನ್ನ ತೃಪ್ತಿಯಿಂದ ಮೀಸೆಯನ್ನು ಹುರಿಗೊಳಿಸುತ್ತ ಉಣ್ಣಪಾ…ಹೊಟ್ಟೆ ತುಂಬ ಉಣ್ಣಪ ಅಂತಿದ್ದ ನಮ್ಮಪ್ಪ ಎಂದು ಹೇಳುತ್ತಾ ಮೌನಕ್ಕೆ ಜಾರಿದ.
ಬ್ಯಾಸಾಯನ ಸಾಯ್ಸಿಬಿಟ್ರು.. (Sanduru Stories)
ಈ ಊರಿಗೆ ಗಣಿಗಾರಿಕೆ ಶುರುವಾತು ನೋಡಿ ಸಾ…ಬ್ಯಾಸಾಯ ಅನ್ನೋದು ಸಾಯಬಡ್ದೋತು. ವರಷಕ್ಕೊಂದು ಬೆಳೆ ಬಂದ್ರೂ ಎಂಥಾ ಬೆಳೆ ಸಾರ್,ಕಲ್ಲು ಭೂಮ್ಯಾಗ ಎಳ್ಳು,ಗುರೆಳ್ಳು,ಸೂರ್ಯಕಾಂತಿ ಎಣ್ಣೆಕಾಳುಗಳ ಬೆಳೆ ಹೆಂಗ್ ಬರ್ತಿತ್ತು ಅಂತೀರಿ ?ಗಣಿಧಣಿಗಳ ಕೂಲಿಯಾಸೆಗೆ ಜನರೆಲ್ಲ ಬ್ಯಾಸಾಯನ ಸಾಯ್ಸಿಬಿಟ್ರು.
ಹೊಲದ ಗರ್ಭ ಬಗೆದರು (Sanduru Stories)
ಒಂದಿನ ನಾವೂ ಮೈನ್ಸ್ನಾಗ ಕೆಲಸಕ್ಕೆ ಹೊಂಟು ನಿಂತೆವು.ಮಳೆ ಕಡಿಮ್ಯಾಗಿ ಬೆಳೆಯಿಲ್ಲದೆ ಏನ್ಮಾಡೋದು ?ಆ ಕೆಲಸ ಹೆಂಗಿತ್ತಪಾ ಅಂದ್ರೆ…ನಮ್ ಹೊಲದ ಮಣ್ಣು ಕಲ್ಲನ್ನೇ ಟಿಪ್ಪರನಗೇರಿಕಂಡು ಎಲ್ಲಿಗೋ ಕಳಸಾಕ ಹತ್ತಿದೆವು.ಮೊದ ಮೊದಲು ಬರೀ ಕಲ್ಲು ಸಾಕು ಎಂದವರು ಬರಬರುತ್ತಾ ಮಣ್ಣಿನಾಗೂ ಅದಿರು ಐತೆ ಎಂದು ಗೊತ್ತಾಗಿ ಲೋಡುಗಟ್ಟಲೆ ಹೊಲದ ಗರ್ಭ ಬಗೆದು ಕಳಿಸುತ್ತಿದ್ದೆವು.
Read also : Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 42 : ಆಕೆ ತಲೆಯೆತ್ತಿ ನಡೆದಿದ್ದಾಳೆ..
ಏನ್ ಮಾಡ್ತೀರಿ ನಮ್ ಹಣೇಬರ (Sanduru Stories)
ಇಂತದ್ದನ್ನೆಲ್ಲ ನೋಡಲಾರದೆಯೋ ಏನೋ ನಮ್ಮಪ್ಪ,ನಮ್ಮವ್ವ…ಅಷ್ಟೇ ಅಲ್ಲ,ಅವರ ಸರೀಕರೆಲ್ಲ ಒಬ್ಬೊಬ್ಬರಾಗಿ ಒಂದೇ ವಾರಿಗೆಯವರು ಆ ಒಂದು ವರ್ಷದಲ್ಲಿ ತೀರಿಹೋದರು.ಇನ್ನೂ ಕೆಲವರು ತಲೆಗೇನೋ ಆಗಿ ನೆಲಕಚ್ಚಿದವರು ಮ್ಯಾಕ ಏಳಲಿಲ್ಲ ನೋಡರಿ ಎಂದ.
ಹೇಗೋ ಏನೋ…ಆದರೆ ಒಂದ್ ಮಾತಂತೂ ಸತ್ಯ.ಆ ಟೇಮ್ನಾಗ ರೊಕ್ಕ ಅನ್ನಾವು ಕಲ್ಲಳ್ಳು ಆಗಿದ್ದಂತೂ ನಿಜ…ಎಂದ. ಏನ್ ಮಾಡ್ತೀರಿ ನಮ್ ಹಣೇಬರ..ಅಷ್ಟೆ ಸಾ…ಆತನೀಗ ಮೌನಕ್ಕೆ ಶರಣಾಗಿದ್ದ.
ಅಜ್ಜಂದೋ..ಅಪ್ಪನದೋ ರಗುತ ನೋಡಿದಂಗಾಗ್ತೈತೆ (Sanduru Stories)
ಸ್ವಲ್ಪ ಹೊತ್ತಿನ ಗಾಢ ಮೌನದ ನಂತರ ” ಈಗ ನೋಡ್ರೀ..ನಮ್ಮ ಹೊಲದ ಲೀಜು ಮುಗಿದಿದೆ. ವಾಪಸ್ಸೇನೋ ಕೊಟ್ಟಾರ. ತೆಗ್ಗಿನಾಗ ಕೆಂಪೋಗ ನೀರು ನಿಲ್ತವು. ಅಜ್ಜಂದೋ..ಅಪ್ಪನದೋ ರಗುತ ನೋಡಿದಂಗಾಗ್ತೈತೆ. ಈ ಬಾರಿ ಅವನು ಮತ್ತೆ ಮಾತನಾಡಲಿಲ್ಲ.
ನನ್ನ ಎದೆ ಕೂಡ ಭಾರವಾಗಿತ್ತು.
ಬಿ.ಶ್ರೀನಿವಾಸ